
ಹುನಗುಂದದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ತೆರೆಯಲಾಗಿರುವ ಬೆಂಬಲ ಬೆಲೆ ಖರೀದಿ ಕೇಂದ್ರ
ಹುನಗುಂದ: ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ತೊಗರಿ ಖರೀದಿ ಮಾಡಿ ತಿಂಗಳು ಕಳೆದರೂ ಇನ್ನು ಅವರ ಖಾತೆಗೆ ಹಣ ಜಮೆಯಾಗಿಲ್ಲ. ತೊಗರಿ ಮಾರಾಟ ಮಾಡಿದ ಹಣದ ನಿರೀಕ್ಷೆಯಲ್ಲಿ ರೈತರು ದಿನದೂಡುತ್ತಿದ್ದಾರೆ.
ಕೇಂದ್ರ ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಲ್ ತೊಗರಿಗೆ ₹8,000 ಬೆಂಬಲ ಬೆಲೆ ನಿಗದಿ ಪಡಿಸಲಾಗಿದೆ. ರೈತರೊಬ್ಬರಿಂದ ಎಕರೆಗೆ 4 ಕ್ವಿಂಟಲ್ ನಂತೆ ಖರೀದಿಸಲಾಗುತ್ತಿದೆ.
ಹುನಗುಂದ ಮತ್ತು ಇಳಕಲ್ ತಾಲ್ಲೂಕುಗಳಲ್ಲಿ 17 ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿತ್ತು. ಖರೀದಿಯನ್ನು ಜನವರಿ 8ರಿಂದ ಆರಂಭಿಸಿದ್ದು, ಅದರಂತೆ ಪಾಳಿಯ ಪ್ರಕಾರ 17 ಕೇಂದ್ರಗಳಿಂದ ಬೆಂಬಲ ಬೆಲೆಯಲ್ಲಿ ರೈತರಿಂದ ಈ ವರೆಗೆ 30 ಸಾವಿರ ಕ್ವಿಂಟಲ್ ತೊಗರಿ ಖರೀದಿ ಮಾಡಲಾಗಿದೆ. ಹುನಗುಂದ ಮತ್ತು ಇಳಕಲ್ ತಾಲ್ಲೂಕು ಕೇಂದ್ರಗಳಲ್ಲಿ ರೈತರಿಂದ ತೊಗರಿ ಖರೀದಿ ಮಾಡಿ ಸರಿ ಸುಮಾರು 35 ರಿಂದ 40-ದಿನಗಳು ಕಳೆದರೂ ರೈತರ ಖಾತೆಗೆ ಇನ್ನೂ ಒಂದು ರೂಪಾಯಿಯೂ ಜಮೆಯಾಗಿಲ್ಲ.
ಈ ಬಾರಿ ಎರಡು ತಾಲ್ಲೂಕುಗಳಲ್ಲಿ ನಿರಂತರ ಮಳೆಯಿಂದ ತೊಗರಿಯ ಇಳುವರಿ ಪ್ರಮಾಣ ತುಂಬಾ ಕಡಿಮೆಯಾಗಿದೆ. ಬೆಂಬಲ ಬೆಲೆಯಲ್ಲಿ ಖರೀದಿ ಕೇಂದ್ರ ಆರಂಭಿಸುವುದಕ್ಕೆ ಮುಂಚೆ ತೊಗರಿ ಬೆಲೆ ಕುಸಿತಗೊಂಡಿತ್ತು. ಆ ಸಮಯದಲ್ಲಿ ಕ್ವಿಂಟಲ್ ತೊಗರಿಗೆ ಅಂದಾಜು ₹ 7 ಸಾವಿರ ಅಸುಪಾಸಿನಲ್ಲಿತ್ತು. ಹೀಗಾಗಿ ಖರೀದಿ ಕೇಂದ್ರಗಳಲ್ಲಿ ಹೆಚ್ಚಿನ ರೈತರು ಹೆಸರು ನೋಂದಾಯಿಸಿ ತೊಗರಿ ಮಾರಾಟ ಮಾಡಿದ್ದಾರೆ.
ಅವಳಿ ತಾಲ್ಲೂಕಿನ ಬಹುತೇಕ ರೈತರು ಮುಂಗಾರು ಹಂಗಾಮಿನಲ್ಲಿ ಪ್ರಮುಖ ಬೆಳೆಯಾಗಿ ತೊಗರಿ ಬೆಳೆದಿದ್ದಾರೆ. 'ಪ್ರತಿ ಬಾರಿ ಬೆಂಬಲ ಬೆಲೆಯಲ್ಲಿ ಖರೀದಿ ಮಾಡಿದಾಗ ತಿಂಗಳೊಳಗಾಗಿ ರೈತರ ಖಾತೆಗೆ ಹಣ ಜಮೆಯಾಗುತ್ತಿತ್ತು. ಆದರೆ ಈ ಬಾರಿ ಮಾತ್ರ ಹಾಗೆ ಆಗಿಲ್ಲ. ಇದಕ್ಕೆ ರೈತರ ಬಗ್ಗೆ ಅಧಿಕಾರಿಗಳ ನಿರ್ಲಕ್ಷವೋ ಅಥವಾ ಸರ್ಕಾರದ ತತ್ಸಾರವೋ ತಿಳಿಯದಾಗಿದೆ' ಎಂದು ಬೆಳೆಗಾರರು ಬೇಸರ ವ್ಯಕ್ತಪಡಿಸಿದರು.
ಚಿತ್ತವಾಡಗಿ ಗ್ರಾಮದ ರೈತ ಗದ್ದನಗೌಡ ಗೌಡರ ಮಾತನಾಡಿ, ಈ ಬಾರಿ ನಿರಂತರ ಮಳೆಯಿಂದ ಬಹುತೇಕ ತೊಗರಿ ಬೆಳೆ ಹಾಳಾಗಿತ್ತು. ಉಳಿದ ತೊಗರಿ ಬೆಳ ಕಟಾವು ಮಾಡಿ ಬೆಂಬಲ ಬೆಲೆಗೆ ಮಾರಾಟ ಮಾಡಲಾಗಿದೆ. ಬೀಜ, ಗೊಬ್ಬರ, ಕೀಟನಾಶಕ, ಕಾರ್ಮಿಕರು ಸೇರಿ ಕಾರ್ಯಗಳಿಗೆ ಸಾಲಸೋಲ ಮಾಡಿ ಸಾವಿರಾರು ರೂಪಾಯಿ ಖರ್ಚು ಮಾಡಲಾಗಿದೆ. ಆದರೆ ಈಗ ಹಣ ಜಮೆ ವಿಳಂಬ ಆಗಿರುವುದು ರೈತರಿಗೆ ತೊಂದರೆಯಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.