ADVERTISEMENT

ಗಾಣಿಗರನ್ನು ಎಸ್‌ಟಿಗೆ ಸೇರಿಸದಿದ್ದರೆ ಶಕ್ತಿ ಪ್ರದರ್ಶನ: ಕಲ್ಲಿನಾಥ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2021, 8:40 IST
Last Updated 8 ಫೆಬ್ರುವರಿ 2021, 8:40 IST
   

ಬಾಗಲಕೋಟೆ: ಮುಂಬರುವ ಬಜೆಟ್ ಅಧಿವೇಶನದಲ್ಲಿ ರಾಜ್ಯ ಸರ್ಕಾರ ಗಾಣಿಗ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದರೆ ಸಮುದಾಯದ ಶಕ್ತಿ ಪ್ರದರ್ಶನ ಅನಿವಾರ್ಯ ಎಂದು ವಿಜಯಪುರ ಜಿಲ್ಲೆ ಕೊಲ್ಹಾರದ ದಿಗಂಬರೇಶ್ವರ ಮಠದ ಕಲ್ಲಿನಾಥ ಸ್ವಾಮೀಜಿ ಎಚ್ಚರಿಕೆ ನೀಡಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯ ಪ್ರವರ್ಗ 2ಎನಲ್ಲಿರುವ ಗಾಣಿಗ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು. ತಕ್ಷಣ ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪಿಸಿ ಅದಕ್ಕೆ ₹1 ಸಾವಿರ ಕೋಟಿ ಮೀಸಲಿಡಬೇಕು ಎಂದು ಒತ್ತಾಯಿಸಿ ಫೆಬ್ರುವರಿ 4 ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ನಾವು ಮನವಿ ಸಲ್ಲಿಸಿದ್ದೇವೆ. ಅದಕ್ಕೆ ಅವರು ಪೂರಕವಾಗಿಯೇ ಸ್ಪಂದಿಸಿದ್ದಾರೆ. ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು.

ಇದೇ ವೇಳೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಎಸ್. ಆರ್.ಪಾಟೀಲ, ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ ಅವರಿಗೂ ಮನವಿ ಸಲ್ಲಿಸಿದ್ದು, ಗಾಣಿಗ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕಾದ ಅಗತ್ಯತೆಯನ್ನು ಮನವರಿಕೆ ಮಾಡಿಕೊಟ್ಟಿರುವುದಾಗಿ ಹೇಳಿದರು.

ADVERTISEMENT

ವಿಜಯಪುರ-ಬಾಗಲಕೋಟೆ ಜಿಲ್ಲೆಗಳನ್ನು ಕೇಂದ್ರೀಕರಿಸಿಕೊಂಡು ರಾಜ್ಯದಲ್ಲಿ ಗಾಣಿಗ ಸಮಾಜದವರು 85 ಲಕ್ಷ ಜನರಿದ್ದಾರೆ. ಕೃಷಿಯನ್ನೇ ಬದುಕಿಗೆ ಅವಲಂಬಿಸಿದ್ದಾರೆ. ಇವರಲ್ಲಿ ಬಹುತೇಕರು ಉಪಕಸುಬಾಗಿ ಗಾಣಗಳನ್ನು ಅವಲಂಬಿಸಿದ್ದರು. ಆದರೆ ಆಧುನಿಕತೆ ಹಾಗೂ ಯಂತ್ರೋಪಕರಣಗಳ ಅವಿಷ್ಕಾರದ ಪರಿಣಾಮ ಸಾಂಪ್ರದಾಯಿಕ ವೃತ್ತಿಗೆ ನೆರವಾಗಿದ್ದ ಎಣ್ಣೆಗಾಣಗಳು ಈಗ ಮುಚ್ಚಿ ಹೋಗಿವೆ. ಹೀಗಾಗಿ ಗಾಣಿಗರು ಸಂಕಷ್ಟದಲ್ಲಿದ್ದಾರೆ. ಕೃಷಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಬಡತನ ರೇಖೆಗಿಂತ ಕೆಳಗಿನವರು, ಭೂರಹಿತರು, ವಸತಿ ರಹಿತರು ಆಗಿ ಬದಲಾಗಿದ್ದಾರೆ. ಈ ಸಂದರ್ಭದಲ್ಲಿ ಪರಿಶಿಷ್ಟ ಪಂಗಡದ ಮೀಸಲು ಸವಲತ್ತು ಕಲ್ಪಿಸುವ ಮೂಲಕ ಸರ್ಕಾರ ಸಮುದಾಯದ ನೆರವಿಗೆ ಬರಲಿ ಎಂದು ಆಗ್ರಹಿಸಿದರು.

ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಸರ್ಕಾರದ ಕಣ್ಣು ತೆರೆಸಲು ಬೆಂಗಳೂರಿನಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು. ಸರ್ಕಾರವನ್ನು ಕಿತ್ತೊಗೆಯುವವರೆಗೂ ಹೋರಾಟ ಮುಂದುವರೆಸಲಾಗುವುದು. ಕೇಂದ್ರ ಸರ್ಕಾರದ ಮೇಲೂ ಒತ್ತಡ ಹೇರಲಾಗುವುದು ಎಂದು ಹೇಳಿದರು.

ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲು ನೀವು ಪಾದಯಾತ್ರೆ ಕೈಗೊಳ್ಳುವಿರಾ ಎಂಬ ಪ್ರಶ್ನೆಗೆ ಸಮಾಜದ ಮುಖಂಡರೊಂದಿಗೆ ಚರ್ಚಿಸಿ ಆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬೀಳಗಿ ಎಪಿಎಂಸಿ ನಿರ್ದೇಶಕ ರಾಮಣ್ಣ ಕಾಳವ್ವಗೋಳ, ಮುಖಂಡ ಮಲ್ಲೇಶ ಗಾಣಿಗೇರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.