ADVERTISEMENT

ಜಮಖಂಡಿ ಕ್ಲಬ್‌ಗೆ ಭರ್ಜರಿ ಜಯ

ಕೆಎಸ್‌ಸಿಎ ಕ್ರಿಕೆಟ್‌: ಟೂರ್ನಿಯಿಂದ ಹೊರಬಿದ್ದ ಲಾಯ್ಡ್ಸ್ ಸ್ಪೋರ್ಟ್ಸ್ ಫೌಂಡೇಷನ್

​ಪ್ರಜಾವಾಣಿ ವಾರ್ತೆ
Published 22 ಜೂನ್ 2018, 13:47 IST
Last Updated 22 ಜೂನ್ 2018, 13:47 IST
ಬಾಗಲಕೋಟೆಯಲ್ಲಿ ಶುಕ್ರವಾರ ಕೆಎಸ್‌ಸಿಎ ಮೂರನೇ ಡಿವಿಷನ್ ಕ್ರಿಕೆಟ್ ಲೀಗ್‌ನಲ್ಲಿ ಜಮಖಂಡಿ ಕ್ರಿಕೆಟ್ ಕ್ಲಬ್ ಹಾಗೂ ಲಾಯ್ಡ್ಸ್ ಸ್ಪೋರ್ಟ್ಸ್ ಫೌಂಡೇಷನ್ ತಂಡಗಳ ನಡುವಿನ ಪಂದ್ಯದ ನೋಟ
ಬಾಗಲಕೋಟೆಯಲ್ಲಿ ಶುಕ್ರವಾರ ಕೆಎಸ್‌ಸಿಎ ಮೂರನೇ ಡಿವಿಷನ್ ಕ್ರಿಕೆಟ್ ಲೀಗ್‌ನಲ್ಲಿ ಜಮಖಂಡಿ ಕ್ರಿಕೆಟ್ ಕ್ಲಬ್ ಹಾಗೂ ಲಾಯ್ಡ್ಸ್ ಸ್ಪೋರ್ಟ್ಸ್ ಫೌಂಡೇಷನ್ ತಂಡಗಳ ನಡುವಿನ ಪಂದ್ಯದ ನೋಟ   

ಬಾಗಲಕೋಟೆ: ಪ್ರೀತೇಶ್ ಇಂಗಳೆ ಹಾಗೂ ಮುಯೀಜ್ ಪಠಾಣ್ ಉತ್ತಮ ಜೊತೆಯಾಟದ ನೆರವಿನಿಂದ ಶುಕ್ರವಾರ ಕೆಎಸ್‌ಸಿಎ ರಾಯಚೂರು ವಲಯದ ಮೂರನೇ ಡಿವಿಷನ್ ಕ್ರಿಕೆಟ್ ಟೂರ್ನಿಯಲ್ಲಿ ಜಮಖಂಡಿ ಸ್ಪೋರ್ಟ್ಸ್‌ ಕ್ಲಬ್ ತಂಡ ಬಾಗಲಕೋಟೆಯ ಲಾಯ್ಡ್ಸ್ ಸ್ಪೋರ್ಟ್ಸ್‌ ಫೌಂಡೇಷನ್ ವಿರುದ್ಧ ಭರ್ಜರಿ ಜಯಗಳಿಸಿತು.

ಇಲ್ಲಿನ ಬಸವೇಶ್ವರ ಕಲಾ ಕಾಲೇಜು ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ಗೆದ್ದ ಜಮಖಂಡಿ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಲಾಯ್ಡ್ಸ್ ತಂಡದ ವೇಗಿ ಸಂಗಮೇಶ ಊಟಿ ದಾಳಿಗೆ ಕುಸಿದ ಜಮಖಂಡಿ ತಂಡ 31 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 187 ರನ್ ಗಳಿಸಿತು. ಸುಲಭ ಗುರಿ ಬೆನ್ನಟ್ಟಿದ ಲಾಯ್ಡ್ಸ್ ಫೌಂಡೇಷನ್ ತಂಡ 32 ಓವರ್‌ಗಳಲ್ಲಿ 106 ರನ್‌ ಗಳಿಸಿ ಎಲ್ಲಾ ವಿಕೆಟ್ ಕಳೆದುಕೊಂಡಿತು. ಈ ಪಂದ್ಯದ ಮೂಲಕ ಸತತ ಮೂರನೇ ಸೋಲು ಕಂಡ ಕಾರಣ ಲಾಯ್ಡ್ಸ್ ತಂಡದ ಸೆಮಿಫೈನಲ್ ತಲುಪುವ ಕನಸು ಕಮರಿತು.

ಉತ್ತಮ ಜೊತೆಯಾಟ: ಸಂಗಮೇಶ ಊಟಿ ದಾಳಿಗೆ ತಂಡ ಕುಸಿದರೂ ಜಮಖಂಡಿ ಕ್ಲಬ್‌ನ ಪ್ರೀತೇಶ್ ಇಂಗಳೆ ಗಟ್ಟಿಯಾಗಿ ನಿಂತರು. 38 ಎಸೆತಗಳಲ್ಲಿ ಆರು ಬೌಂಡರಿ, ಒಂದು ಸಿಕ್ಸರ್ ಬಾರಿಸಿದ ಇಂಗಳೆ 49 ರನ್‌ ಗಳಿಸಿದರು. ಅವರಿಗೆ ಉತ್ತಮ ಸಾಥ್ ನೀಡಿದ ಮುಯೀಜ್ ಪಠಾಣ್ 32 ಎಸೆತಗಳಲ್ಲಿ ಮೂರು ಬೌಂಡರಿ, ಒಂದು ಸಿಕ್ಸರ್‌ನೊಂದಿಗೆ 30 ರನ್ ಗಳಿಸಿದರೆ, 29 ಎಸೆತಗಳಲ್ಲಿ ಮೂರು ಬೌಂಡರಿ, ಒಂದು ಸಿಕ್ಸರ್ ಬಾರಿಸಿದ ಪವನ್‌ ಬಿರಾದಾರ್ 27 ರನ್‌ ಗಳಿಸಿದರು.

ADVERTISEMENT

ಸಂಗಮೇಶ ಊಟಿ 39 ರನ್ ನೀಡಿ ಐದು ವಿಕೆಟ್ ಪಡೆದರು. ಸಿದ್ದಪ್ಪ ಸಜ್ಜನರ ಎರಡು ಹಾಗೂ ಬ್ರಿಜೇಶ್ ಪಟೇಲ್ ಒಂದು ವಿಕೆಟ್ ಪಡೆದರು. ಲಾಯ್ಡ್ಸ್ ಸ್ಪೋರ್ಟ್ಸ್ ಫೌಂಡೇಷನ್‌ ಆಟಗಾರರು ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶಿಸಿ ಎದುರಾಳಿ ತಂಡದ ಆಟಗಾರರನ್ನು ಕಾಡಿದರು.

ವಿಕಾಸ್ ಮಾಶೆಟ್ಟಿ 43 ಎಸೆತಗಳಲ್ಲಿ ಐದು ಬೌಂಡರಿಯೊಂದಿಗೆ 24 ರನ್‌, ಸಿದ್ದಪ್ಪ ಸಜ್ಜನರ್‌ 31 ಎಸೆತಗಳಲ್ಲಿ ಮೂರು ಬೌಂಡರಿ ಒಂದು ಸಿಕ್ಸರ್‌ನೊಂದಿಗೆ 23 ರನ್‌ ಹಾಗೂ ವೀರೇಶ ಸಾಲಿಮಠ 45 ಎಸೆತಗಳಲ್ಲಿ ಎರಡು ಬೌಂಡರಿಯೊಂದಿಗೆ 14 ರನ್‌ ಗಳಿಸಿದರು.

ಜಮಖಂಡಿ ಕ್ರಿಕೆಟ್ ತಂಡದ ಮಲ್ಲು ಹಟ್ಟಿ ಹಾಗೂ ನಿಖಿಲ್‌ ತಲಾ ಮೂರು ವಿಕೆಟ್ ಪಡೆದರು. ಬೌಲಿಂಗ್‌ನಲ್ಲೂ ಮಿಂಚಿ ಏಳು ರನ್‌ ನೀಡಿ ಎರಡು ವಿಕೆಟ್ ಪಡೆದ ಮುಯೀಜ್ ಪಠಾಣ್ ಪಂದ್ಯ ಪುರುಷೋತ್ತಮ ಶ್ರೇಯಕ್ಕೆ ಪಾತ್ರರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.