
ಜಮಖಂಡಿ: ‘ವಿಶ್ವಕ್ಕೆ ಮಾರಕವಾಗಿರುವ ಮಧುಮೇಹ ತಡೆಗೆ ಜಾಗೃತಿ ಅವಶ್ಯವಾಗಿದೆ’ ಎಂದು ಡಾ.ಎಚ್.ಜಿ. ದಡ್ಡಿ ಹೇಳಿದರು.
ಇಲ್ಲಿನ ಬಸವ ಭವನದಲ್ಲಿ ಜಮಖಂಡಿ ಲಯನ್ಸ್ ಸಂಸ್ಥೆಯಿಂದ ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ಮಂಗಳವಾರ ಏರ್ಪಡಿಸಿದ್ದ ಜಾಗೃತಿ ಜಾಥಾದಲ್ಲಿ ಅವರು ಮಾತನಾಡಿದರು.
‘ಮನುಷ್ಯನ ಜೀವನಶೈಲಿಯ ಬದಲಾವಣೆ, ಆಹಾರದ ಬದಲಾವಣೆ, ಸೋಮಾರಿತನ, ದೈಹಿಕ ಚಟುವಟಿಕೆಗಳ ಕೊರತೆ, ಅತಿಯಾದ ಒತ್ತಡ, ಹೆಚ್ಚು ಕಾರ್ಬೋಹೈಡ್ರೇಟ್ ಸೇವನೆಯಿಂದ ಮಧುಮೇಹ ವ್ಯಾಪಿಸುತ್ತಿದೆ’ ಎಂದರು.
‘ಚಿಕ್ಕಮಕ್ಕಳಿಗೂ ಮಧುಮೇಹ ಬಾಧಿಸುತ್ತಿರುವುದು ವಿಪರ್ಯಾಸ. ಮಧುಮೇಹದಿಂದ ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಹೀಗಾಗಿ ಮಾನವನ ಆಯಸ್ಸು ಕ್ಷೀಣಿಸುತ್ತದೆ’ ಎಂದರು.
‘ಭಾರತವನ್ನು ಮಧುಮೇಹದ ರಾಜಧಾನಿ ಎಂದು ಕರೆಯಲಾಗುತ್ತದೆ. 10 ಕೋಟಿಗೂ ಹೆಚ್ಚು ಮಧುಮೇಹಗಳು, 10 ಕೋಟಿ ಪ್ರಿ ಡಯಾಬೆಟಿಕ್‌ಗಳು ನಮ್ಮಲ್ಲಿದ್ದಾರೆ. ಮಧುಮೇಹ ತಡೆಗೆ ಮನೆಯಲ್ಲಿ ತಯಾರಿಸಿದ ಶುದ್ಧ ಆಹಾರ ಸೇವನೆ, ನಿಯಮಿತ ವ್ಯಾಯಾಮ ಅವಶ್ಯಕ’ ಎಂದು ತಿಳಿಸಿದರು.
ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಜಾಥಾಕ್ಕೆ ಚಾಲನೆ ನೀಡಿದರು. ನಗರದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾ ನಡೆಯಿತು. ಐಎಂಎ, ಬಿಎಲ್‌ಡಿಯ ನರ್ಸಿಂಗ್ ವಿದ್ಯಾರ್ಥಿಗಳು, ಬಾಗಲಕೋಟೆ ವಿ.ವಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಲಯನ್ಸ್ ಅಧ್ಯಕ್ಷ ಚಿನ್ಮಯ ಜಿರಲಿ, ಕಾರ್ಯದರ್ಶಿ ಮೈಗೂರ ಪ್ರವೀಣ, ಸುನೀಲ ಮುರಗೋಡ, ಡಾ.ವಿ.ಎಸ್.ಬಿರಾದಾರ, ಡಾ.ವಿಜಯಲಕ್ಷ್ಮೀ ತುಂಗಳ, ಡಾ.ದೇವರಡ್ಡಿ, ಪ್ರಭು ಜನವಾಡ, ವಕೀಲ ಸಂಗಮೇಶ, ಉಪನ್ಯಾಸಕ ರಾಜಶೇಖರ ಹೊಸಟ್ಟಿ, ಉತ್ತಮ, ಡಾ.ತಿಪ್ಪೇಸ್ವಾಮಿ, ಬಸವಲಿಂಗ ಬೃಂಗಿಮಠ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.