
ಜಮಖಂಡಿ: ಇಲ್ಲಿನ ಮುಧೋಳ ರಸ್ತೆಯ ಮೌಲಾನಾ ಅಬ್ದುಲ್ ಕಲಾಂ ವೃತ್ತದ ಹತ್ತಿರ ರಾತ್ರಿ ಒಂದು ಗಂಟೆ ಸುಮಾರಿಗೆ ಟ್ರ್ಯಾಕ್ಟರ್ ಟ್ರಾಲಿ ಪಲ್ಟಿಯಾಗಿ ಮಗು ಸೇರಿ ನಾಲ್ವರು ಮೃತರಾಗಿದ್ದಾರೆ.
ಟ್ರಾಲಿಯಲ್ಲಿದ್ದ 19 ಜನರಿಗೆ ಗಾಯಗಳಾಗಿದ್ದು ಜಮಖಂಡಿ ಸರ್ಕಾರಿ ಆಸ್ಪತ್ರೆಯಲ್ಲಿ 17 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗೆ ವಿಜಯಪುರಕ್ಕೆ ಕಳುಹಿಸಲಾಗಿದೆ.
ಮನುಷ (23), ಹಲಕಿ (2), ಲಕ್ಷ್ಮಿ (27), ರೇಖಾ (28) ಮೃತರು.
ಮಹಾರಾಷ್ಟ್ರದ ಯವತ್ಮಾಳ ಜಿಲ್ಲೆಯ ಪುಸಾದ ತಾಲ್ಲೂಕಿನ ಗೋಪ್ವಾಡಿ ಗ್ರಾಮದ ಕಾರ್ಮಿಕರು ಕಬ್ಬು ಕಟಾವು ಮುಗಿಸಿಕೊಂಡು ಮರಳಿ ತಮ್ಮ ಗ್ರಾಮಕ್ಕೆ ಹೋಗುವ ಸಂದರ್ಭದಲ್ಲಿ ಟ್ರ್ಯಾಕ್ಟರ್ ಎಂಜಿನ್ ಹಾಗೂ ಟ್ರಾಲಿ ನಡುವೆ ಇರುವ ಕೊಂಡಿ ಮುರಿದಿದೆ.
ಟ್ರ್ಯಾಕ್ಟರ್ ಎಂಜಿನ್ ರಸ್ತೆ ಮೇಲೆಯೇ ಇದೆ. ಅದಕ್ಕೆ ಜೋಡಿಸಲಾಗಿದ್ದ ಟ್ರಾಲಿ ರಸ್ತೆಯ ಪಕ್ಕದ ಆಳವಾದ ಕಂದಕಕ್ಕೆ ಬಿದ್ದಿದೆ.
ಜಿಲ್ಲಾ ಪೊಲೀಸ್ ವರಿಷ್ಠ ಸಿದ್ಧಾರ್ಥ್ ಗೋಯಲ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಜಮಖಂಡಿ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.