ADVERTISEMENT

ಬಾಗಲಕೋಟೆ: ಉದ್ಯೋಗ ಭರ್ತಿಗೆ ಆಗ್ರಹಿಸಿ ಡಿ.1ಕ್ಕೆ ರ‍್ಯಾಲಿ

ಜನ ಸಾಮಾನ್ಯರ ವೇದಿಕೆಯಿಂದ ಧಾರವಾಡ ಚಲೋ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2025, 4:28 IST
Last Updated 22 ನವೆಂಬರ್ 2025, 4:28 IST
   

ಬಾಗಲಕೋಟೆ: ‘ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಆಗ್ರಹಿಸಿ ಡಿ.1ರಂದು ಧಾರವಾಡ ಚಲೋ ಬೃಹತ್ ಪ್ರತಿಭಟನಾ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ’ ಎಂದು ಜನ ಸಾಮಾನ್ಯರ ವೇದಿಕೆ ರಾಜ್ಯ ಸಂಚಾಲಕ ಯಲ್ಲಪ್ಪ ಹೆಗಡೆ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ನೆಪಗಳನ್ನು ಒಡ್ಡಿ ನೇಮಕಾತಿಯನ್ನು ಮುಂದೂಡುತ್ತಲೇ ಬರಲಾಗುತ್ತಿದೆ. ಇದರಿಂದಾಗಿ ಯುವಕರು ಉದ್ಯೋಗಕ್ಕಾಗಿ ಕಾಯುವಂತಾಗಿದೆ. ಹಲವಾರು ಕುಟುಂಬದವರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.

ನಿಯಮಿತವಾಗಿ ಉದ್ಯೋಗಗಳ ಭರ್ತಿ ಮಾಡದ್ದರಿಂದ ಪದವಿ ಪೂರ್ಣಗೊಳಿಸಿ ಉದ್ಯೋಗಕ್ಕೆ ಕಾಯುತ್ತಿರುವವರು ಹಲವಾರು ತೊಂದರೆ ಎದುರಿಸುತ್ತಿದ್ದಾರೆ. ಇಂದು, ನಾಳೆ ಭರ್ತಿ ಮಾಡುತ್ತಾರೆ ಎಂದು ಅಧ್ಯಯನಕ್ಕಾಗಿಯೇ ಲಕ್ಷಾಂತರ ರೂಪಾಯಿ ವ್ಯಯಿಸುವಂತಾಗಿದೆ. ನ್ಯಾಯಾಲಯದಲ್ಲಿರುವ ತೊಡಕುಗಳನ್ನು ಬಗೆಹಿರಿಸಿ ಕೂಡಲೇ ಭರ್ತಿ ಮುಂದಾಗಬೇಕು ಎಂದು ಆಗ್ರಹಿಸಿದರು.

ADVERTISEMENT

ಉದ್ಯೋಗ ಆಕಾಂಕ್ಷಿಗಳ ವಯೋಮಿತಿಯನ್ನು ಕನಿಷ್ಠ 6 ವರ್ಷಗಳ ಕಾಲ ಸಡಿಲಿಕೆ ಮಾಡಬೇಕು. ಇದರಿಂದ ಲಕ್ಷಾಂತರ ಆಕಾಂಕ್ಷಿಗಳಿಗೆ ಅನುಕೂಲವಾಗಲಿದೆ. ಕೆಪಿಎಸ್‌ಸಿ, ಕೆಇಎ, ಕೆಎಸ್‌ಪಿ ಹಾಗೂ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಪ್ರಾಧಿಕಾರಿಗಳು ಪ್ರತಿ ವರ್ಷ ವಾರ್ಷಿಕ ಕ್ಯಾಲೆಂಡರ್ ಪ್ರಕಟಿಸಿ, ಅದರಂತೆ ಕಾಲಮಿತಿಯೊಳಗೆ ನೇಮಕಾತಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.

ವಿವಿಧ ನೇಮಕಾತಿಗಳಲ್ಲಿ ಭ್ರಷ್ಟಾಚಾರದ ಆರೋಪಗಳು ಕೇಳಿ ಬರುತ್ತಿವೆ. ಇದರಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ನೇರ ನೇಮಕಾತಿ ಮೂಲಕ ಪಾರದರ್ಶಕವಾಗಿ ನೇಮಕಾತಿ ಮಾಡಿಕೊಳ್ಳಬೇಕು. ಯುಪಿಎಸ್‌ಸಿ, ಸಿಎಸ್‌ಸಿ ಸೇರಿದಂತೆ ಎಲ್ಲ ಪರೀಕ್ಷೆಗಳನ್ನು ಕನ್ನಡದಲ್ಲಿಯೂ ಮಾಡಬೇಕು ಎಂದು ಆಗ್ರಹಿಸಿದರು.

ಕರವೇ ಜಿಲ್ಲಾ ಅಧ್ಯಕ್ಷ ಬಸವರಾಜ ಧರ್ಮಂತಿ ಮಾತನಾಡಿ, ಖಾಲಿ ಹುದ್ದೆಗಳಿಂದಾಗಿ ಸಾರ್ವಜನಿಕರ ಕೆಲಸಗಳು ನಿಗದಿತ ಅವಧಿಯಲ್ಲಿ ಆಗುತ್ತಿಲ್ಲ. ಪ್ರತಿಭೆಗೆ ಅವಕಾಶ ಮಾಡಿಕೊಡಬೇಕು. ವಿಳಂಬಕ್ಕೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.

ರೈತ ಮುಖಂಡ ಮುತ್ತಪ್ಪ ಕೋಮಾರ ಮಾತನಾಡಿ, ಸರ್ಕಾರ ಯುಜನವರಿಗೆ ನಿರುದ್ಯೋಗ ಭತ್ಯೆ ನೀಡುವ ಬದಲಾಗಿ, ಉದ್ಯೋಗ ಅವಕಾಶ ಮಾಡಿಕೊಡಬೇಕು. ಬೆಳಗಾವಿ ಅಧಿವೇಶನದಲ್ಲಿ ಪ್ರತಿ ಪಕ್ಷಗಳ ಮುಖಂಡರೂ ಈ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದರು.

ಮಂಜುನಾಥ ಪವಾರ, ಶೇಖರ ಕಾಂಬಳೆ, ರಾಜಭಕ್ಷ ಜಮಾದಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.