ADVERTISEMENT

ಕಬಡ್ಡಿ ಭಾರತೀಯ ಸಂಸ್ಕೃತಿಯ ಪ್ರತೀಕ: ಜಿಲ್ಲಾಧಿಕಾರಿ ಕೆ.ಎಂ.ಜಾನಕಿ

​ಪ್ರಜಾವಾಣಿ ವಾರ್ತೆ
Published 25 ಮೇ 2025, 14:17 IST
Last Updated 25 ಮೇ 2025, 14:17 IST
ಬೀಳಗಿ ಪಟ್ಟಣ ಸಹಕಾರ ಬ್ಯಾಂಕ್ ರಜತ ಮಹೋತ್ಸವದ ಅಂಗವಾಗಿ ನಡೆದ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ದೆಹಲಿ ತಂಡಕ್ಕೆ ಗಣ್ಯರು ₹ 2ಲಕ್ಷ ನಗದು ಹಾಗೂ ಟ್ರೋಫಿ ನೀಡಿ ಗೌರವಿಸಿದರು 
ಬೀಳಗಿ ಪಟ್ಟಣ ಸಹಕಾರ ಬ್ಯಾಂಕ್ ರಜತ ಮಹೋತ್ಸವದ ಅಂಗವಾಗಿ ನಡೆದ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ದೆಹಲಿ ತಂಡಕ್ಕೆ ಗಣ್ಯರು ₹ 2ಲಕ್ಷ ನಗದು ಹಾಗೂ ಟ್ರೋಫಿ ನೀಡಿ ಗೌರವಿಸಿದರು    

ಬೀಳಗಿ: ‘ಕ್ರೀಡೆಗೆ ಯಾವುದೇ ಗಡಿ ಇಲ್ಲ, ಕ್ರೀಡೆ ಸೀಮಾತೀತವಾಗಿದೆ. ಕಬಡ್ಡಿ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿವೆ’ ಎಂದು ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ಹೇಳಿದರು.

ಬೀಳಗಿ ಪಟ್ಟಣ ಸಹಕಾರ ಬ್ಯಾಂಕ್ ರಜತ ಮಹೋತ್ಸವದ ಅಂಗವಾಗಿ ಸ್ಥಳೀಯ ಸ್ವಾಮಿ ವಿವೇಕಾನಂದ ಕಾಲೇಜಿನ ಆವರಣದಲ್ಲಿ ನಡೆದ ರಾಷ್ಟ್ರಮಟ್ಟದ ಪುರುಷ ಹಾಗೂ ಮಹಿಳಾ ‘ಎ’ ಗ್ರೇಡ್‌ ಕಬಡ್ಡಿ ಪಂದ್ಯಾವಳಿಯ ಅಂತಿಮ ಸುತ್ತಿನ ಪಂದ್ಯಾವಳಿಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು.

‘ರಾಜ ಮಹಾರಾಜರ ಕಾಲದಲ್ಲಿ ಕ್ರೀಡೆಗಳಿಗೆ ಪ್ರೋತ್ಸಾಹ ಕೊಡಲಾಗುತ್ತಿತ್ತು. ಬ್ಯಾಂಕಿನ ರಜತ ಮಹೋತ್ಸವದಲ್ಲಿ ಕ್ರೀಡೆಗೆ ಹೆಚ್ಚಿನ ಮಹತ್ವ ನೀಡಿರುವುದು ಹೆಮ್ಮೆಯ ಸಂಗತಿಯಾಗಿದೆ.ಮನೆಗೊಬ್ಬ ಕ್ರೀಡಾಪಟು ಹುಟ್ಟಬೇಕು.ಅಂತಹ ಸಾಧನೆಯನ್ನು ಗ್ರಾಮೀಣ ಯುವಕರು ಮಾಡಬೇಕು’ ಎಂದರು.

ADVERTISEMENT

ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಮಾತನಾಡಿ, ‘ಕಬಡ್ಡಿ ನಮ್ಮ ನೆಲದ ಕ್ರೀಡೆಯಾಗಿದ್ದು, ಆಟದ ಪ್ರತಿ ಕ್ಷಣಗಳು ರೋಚಕವಾಗಿರುತ್ತವೆ. ಉತ್ತಮ ಕ್ರೀಡಾಪಟುಗಳಿಗೆ ಈಗ ದೇಶವ್ಯಾಪಿ ಬೆಲೆ ಸಿಗುತ್ತಿದೆ. ಯಾವುದೇ ಆಟವಿರಲಿ ಅರ್ಪಣಾ ಮನೋಭಾವದಿಂದ ಆಡಿ’ ಎಂದರು.

ಮೂರು ದಿನ ನಡೆದ ಕಬಡ್ಡಿ ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಯ ಕ್ರೀಡಾಭಿಮಾನಿಗಳು ಭಾಗವಹಿಸಿದ್ದರು.

ಸಂಸ್ಥಾಪಕ ಅಧ್ಯಕ್ಷ ಎಸ್.ಆರ್‌.ಪಾಟೀಲ್, ಜಿಲ್ಲಾ ಪಂಚಾಯಿತಿ ಸಿಇಒ ಶಶಿಧರ ಕುರೇರ, ಸಹಕಾರ ಸಂಘಗಳ ಉಪನಿಬಂಧಕ ದಾನಯ್ಯ ಹಿರೇಮಠ, ಪ್ರಧಾನ ವ್ಯವಸ್ಥಾಪಕ ಎಲ್.ಬಿ.ಕುರ್ತಕೋಟಿ, ನಿರ್ದೇಶಕ ಎಂ.ಎನ್.ಪಾಟೀಲ, ಹೇಮಾದ್ರಿ ಕೊಪ್ಪಳ, ಎ.ಎಚ್.ಬೀಳಗಿ, ಎಂ.ಎಲ್.ಕೆಂಪಲಿಂಗಣ್ಣವರ, ಗಂಗಣ್ಣ ಕೆರೂರ, ರಾಜಣ್ಣ ಬಾರಕೇರ ಇದ್ದರು.

‘ದೇಶದ ವಿವಿಧ ಭಾಗದ ಕ್ರೀಡಾಪಟುಗಳು ಭಾಗವಹಿಸಿ ಕಬಡ್ಡಿ ಟೂರ್ನಿ ಯಶಸ್ವಿಗೊಳಿಸಿದ್ದಾರೆ’ ಎಂದು ಬೀಳಗಿ ಪಟ್ಟಣ ಸಹಕಾರ ಬ್ಯಾಂಕ್ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್.ಪಾಟೀಲ ತಿಳಿಸಿದರು.

ಬಹುಮಾನ ವಿತರಣೆ

ಪುರುಷರ ವಿಭಾಗ: ಗ್ರೀನ್ ಆರ್ಮಿ ದೆಹಲಿ ₹2 ಲಕ್ಷ ನಗದು ಹಾಗೂ ಟ್ರೋಫಿ (ಪ್ರಥಮ) ಡಿ.ವೈ.ಪಾಟೀಲ ಸ್ಪೋರ್ಟ್ಸ್ ಅಕಾಡೆಮಿ ಪುಣೆ ₹1.5 ಲಕ್ಷ ಹಾಗೂ ಟ್ರೋಫಿ (ದ್ವಿತೀಯ) ಬೆಂಗಳೂರು ನಗರ ತಂಡ ₹1ಲಕ್ಷ ನಗದು ಹಾಗೂ ಟ್ರೋಫಿ (ತೃತೀಯ) ಚಂದ್ರವಾಲಾ ಸ್ಪೋರ್ಟ್ಸ್ ಅಕಾಡೆಮಿ ಹರಿಯಾಣ ₹1ಲಕ್ಷ ನಗದು ಹಾಗೂ ಟ್ರೋಫಿ (ಚತುರ್ಥ). ಮಹಿಳಾ ವಿಭಾಗ: ಗುರುಕುಲ ಸ್ಪೋರ್ಟ್ಸ್ ಅಕಾಡೆಮಿ ಹರಿಯಾಣ ₹2ಲಕ್ಷ ನಗದು ಹಾಗೂ ಟ್ರೋಫಿ (ಪ್ರಥಮ) ಕೇಂದ್ರ ರೈಲ್ವೆ ತಂಡ ಮುಂಬೈ ₹1.5ಲಕ್ಷ ನಗದು ಹಾಗೂ ಟ್ರೋಫಿ (ದ್ವಿತೀಯ)  ಧರ್ಮವೀರ ಸ್ಪೋರ್ಟ್ಸ್ ಕ್ಲಬ್ ಪುಣೆ ₹1 ಲಕ್ಷ ನಗದು ಹಾಗೂ ಟ್ರೋಫಿ (ತೃತೀಯ) ವಿಜಯ ವಾರಿಯರ್ಸ್‌ ಸ್ಪೋರ್ಟ್ಸ್ ಕ್ಲಬ್ ಅಥಣಿ ₹1ಲಕ್ಷ ನಗದು ಹಾಗೂ ಟ್ರೋಫಿ (ಚತುರ್ಥ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.