ADVERTISEMENT

ಕಲ್ಹಳ್ಳಿ | ಅ.5ಕ್ಕೆ ಕಸಾಪ ವಾರ್ಷಿಕ ಸಾಮಾನ್ಯ ಸಭೆ: ಮಹೇಶ ಜೋಶಿ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2025, 5:46 IST
Last Updated 29 ಸೆಪ್ಟೆಂಬರ್ 2025, 5:46 IST
ಜಮಖಂಡಿ ತಾಲ್ಲೂಕಿನ ಕಲ್ಹಳ್ಳಿ ಸತ್ಯಕಾಮ ಪ್ರತಿಷ್ಠಾನದ ಸುಮ್ಮನೆ ಸಭಾಂಗಣವನ್ನು ಭಾನುವಾರ ಕಸಾಪ ಕೇಂದ್ರ ಸಮಿತಿ ಅಧ್ಯಕ್ಷ ಮಹೇಶ ಜೋಶಿ ವೀಕ್ಷಿಸಿದರು
ಜಮಖಂಡಿ ತಾಲ್ಲೂಕಿನ ಕಲ್ಹಳ್ಳಿ ಸತ್ಯಕಾಮ ಪ್ರತಿಷ್ಠಾನದ ಸುಮ್ಮನೆ ಸಭಾಂಗಣವನ್ನು ಭಾನುವಾರ ಕಸಾಪ ಕೇಂದ್ರ ಸಮಿತಿ ಅಧ್ಯಕ್ಷ ಮಹೇಶ ಜೋಶಿ ವೀಕ್ಷಿಸಿದರು   

ಜಮಖಂಡಿ: ‘ತಾಲ್ಲೂಕಿನ ಕಲ್ಹಳ್ಳಿ ಗ್ರಾಮದ ಸತ್ಯಕಾಮ ಪ್ರತಿಷ್ಠಾನದ ಸುಮ್ಮನೆ ಮನೆ(ಸಭಾಭವನದಲ್ಲಿ) ಕನ್ನಡ ಸಾಹಿತ್ಯ ಪರಿಷತ್ತಿನ 108ನೇ ಹಾಗೂ 2023-24ನೇ ವಾರ್ಷಿಕ ಸಾಮಾನ್ಯ ಸಭೆ ಕರೆಯಲಾಗಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ ಅಧ್ಯಕ್ಷ ಮಹೇಶ ಜೋಶಿ ಹೇಳಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸೆ.3ರಂದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚಿಸಿ ಕಲ್ಹಳ್ಳಿಯಲ್ಲಿ ನಡೆಸಲು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಲಾಗಿದೆ’ ಎಂದರು. 

‘ಈಗಾಗಲೇ ಹೋಬಳಿ ಮಟ್ಟದಲ್ಲಿ ಘಟಕ ಸ್ಥಾಪಿಸುತ್ತಿದ್ದೇವೆ. ಗ್ರಾಮಮಟ್ಟದಲ್ಲಿ ಘಟಕ ಮಾಡುವ ಮೂಲಕ ಜನಸಾಮಾನ್ಯರ ಪರಿಷತ್ ಮಾಡಲಾಗುವುದು’ ಎಂದು ಹೇಳಿದರು.

ADVERTISEMENT

‘ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವಾರ್ಷಿಕ ಸಭೆ ನಡೆಯಬೇಕಿತ್ತು. ಆದರೆ. ಕೆಲವರ ಕುತಂತ್ರದಿಂದ ಸಾಧ್ಯವಾಗಲಿಲ್ಲ. ಪೊಲೀಸರಿಗೆ ಪರಿಷತ್ತಿನ ಸದಸ್ಯರ ಬಲ ನಾಲ್ಕು ಲಕ್ಷವಿದೆ. ಎಲ್ಲರೂ ಬಂದರೆ ನಿಭಾಯಿಸಲು ಹೇಗೆ ಸಾಧ್ಯ ಎಂದು ಪೊಲೀಸರಿಗೆ ತಪ್ಪು ಮಾಹಿತಿ ನೀಡಿದ್ದಕ್ಕಾಗಿ ಸುರಕ್ಷತೆ ಕಾರಣದಿಂದ ಅನುಮತಿ ನಿರಾಕರಿಸಲಾಯಿತು. ಈಗ ಆ ಸಭೆ ಮಾಡಲಾಗುತ್ತಿದೆ’ ಎಂದರು.

‘ದೊಡ್ಡ ಸಂಸ್ಥೆಯಲ್ಲಿ ಪರ, ವಿರೋಧ ಇರುವುದು ಸಹಜ. ವಿರೋಧ ಮಾಡಲಿ. ಎಸ್‌. ಜಿ ಸಿದ್ದರಾಮಯ್ಯ, ಬಿ.ಜಯಪ್ರಕಾಶಗೌಡ, ಆರ್.ಜಿ.ಹಳ್ಳಿ ನಾಗರಾಜ, ಮೀರಾ ಶಿವಲಿಂಗಯ್ಯ, ಕಾರಸವಾಡಿ ಮಹಾದೇವ, ಸುನಂದಾ ಜಯರಾಂ, ಎನ್.ಹನುಮೇಗೌಡ, ಜಿ.ಟಿ.ವೀರಪ್ಪ, ಎಂ.ಪ್ರಕಾಶಮೂರ್ತಿ, ಡಿ.ಮಂಜುನಾಥ ಸೇರಿದಂತೆ ಹಲವರು ಸಭೆ ತಡೆಯಲು ಪ್ರಯತ್ನಿಸುತ್ತಿದ್ದಾರೆ. ದ್ವೇಷ, ಕುತಂತ್ರ ಮಾಡುತ್ತಿದ್ದಾರೆ. ಅದಕ್ಕೆ ಬಗ್ಗುವುದಿಲ್ಲ, ದಾರಿ ತಪ್ಪಿಸುವ ಕೆಲಸ ಮಾಡುವುದನ್ನು ಬಿಡಬೇಕು’ ಎಂದು ಹೇಳಿದರು.

ಜಿಲ್ಲಾ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಮಾತನಾಡಿ, ‘ಸಿ.ಕೆ.ರಾಮೇಗೌರಡ ಸದಸ್ಯತ್ವ ವಜಾ ಮಾಡಲಾಗಿದೆ, ಜಾಣಗೆರೆ ವೆಂಕಟರಾಮಯ್ಯ, ವಸುಂಧರಾ ಭೂಪತಿ ಇವರನ್ನು ಅಮಾನತ್ತಿನಲ್ಲಿಡಲಾಗಿದ್ದು, ಅವರು ಸಭೆಗೆ ಬರದಂತೆ ನೋಡಿಕೊಳ್ಳುತ್ತೇವೆ. ಒಂದು ವೇಳೆ ಬಂದರೆ ಕುತ್ತಿಗೆ ಹಿಡಿದು ಹೊರದುಬ್ಬುತ್ತೇವೆ’ ಎಂದರು.

ತಾಲ್ಲೂಕು ಘಟಕದ ಅಧ್ಯಕ್ಷ ಸಂತೋಷ ತಳಕೇರಿ ಮಾತನಾಡಿ, ‘ಸಾಹಿತಿ ನಾಗರಾಜ ಹಳ್ಳಿ ಅವರು ಕಲ್ಹಳ್ಳಿ ಎಂಬ ಕೊಂಪೆಯಲ್ಲಿ ಸರ್ವ ಸದಸ್ಯರ ಸಭೆ ನಡೆದರೆ ತಾನೇ? ಅಲ್ಲಿವರೆಗೆ ಇವರು ಮೊಳೆ ಹೊಡೆದುಕೊಂಡು ಅಧಿಕಾರದಲ್ಲಿ ಇರ್ತಾರಾ? ನೋಡೋಣ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಆ ಮೂಲಕ ಕಲ್ಹಳ್ಳಿ ಸತ್ಯಕಾಮರಿಗೆ ಅವಮಾನ ಮಾಡಿದಂತಾಗಿದೆ. ಅವರ ಮಾತನ್ನು ಖಂಡಿಸಲಾಗುವುದು. ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ, ಪ್ರತಿಭಟನೆ ಮಾಡಲಾಗುವುದು’ ಎಂದರು.

ಗೌರವ ಕಾರ್ಯದರ್ಶಿ ಪಟೇಲ್‌ ಪಾಂಡು, ವಿಜಯಪುರ ಜಿಲ್ಲಾ ಅಧ್ಯಕ್ಷ ಹಾಸಿಂಪೀರ್ ವಾಲಿಕಾರ, ಗುರುನಾಥ ತಳವಾರ, ಪಿ.ಬಿ. ಅಜ್ಜನವರ, ಶ್ರೀನಿವಾಸ ಅಪರಂಜಿ, ಮಹಾಂತೇಶ ನರಸನಗೌಡರ ಇದ್ದರು.

ಎಲ್ಲಿ ಬೇಕಾದರೂ ಸಾಮಾನ್ಯಸಭೆ ಮಾಡಬಹುದು ಎಂದು ನ್ಯಾಯಾಲಯ ಸ್ಪಷ್ಟ ಆದೇಶ ನೀಡಿದೆ. ಆದ್ದರಿಂದ ಹಳ್ಳಿ ಹಳ್ಳಿಯಲ್ಲಿ ಸಾಮಾನ್ಯ ಸಭೆ ಮಾಡುವುದರಿಂದ ಜನರಲ್ಲಿ ಕನ್ನಡದ ಬಗ್ಗೆ ಆಸಕ್ತಿ ಬರುತ್ತದೆ
ಮಹೇಶ ಜೋಶ ಅಧ್ಯಕ್ಷ ಕನ್ನಡ ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.