ADVERTISEMENT

ಕೆರೂರು: ಸಿಗುವುದೇ ಸರ್ಕಾರಿ ಪಿಯು ಕಾಲೇಜು?

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2025, 3:56 IST
Last Updated 18 ಆಗಸ್ಟ್ 2025, 3:56 IST
ಕೆರೂರ ಪಟ್ಟಣದಲ್ಲಿರುವ ಸರ್ಕಾರಿ ಪ್ರೌಢಶಾಲೆ ಕಟ್ಟಡ
ಕೆರೂರ ಪಟ್ಟಣದಲ್ಲಿರುವ ಸರ್ಕಾರಿ ಪ್ರೌಢಶಾಲೆ ಕಟ್ಟಡ   

ಕೆರೂರ: ಪಟ್ಟಣವು ಬದಾಮಿ ತಾಲ್ಲೂಕಿನಲ್ಲೇ ಅತಿ ದೊಡ್ಡ ಹೋಬಳಿ ಕೇಂದ್ರವಾಗಿದೆ. ಆದರೆ ಇಲ್ಲಿ ಇನ್ನೂವರೆಗೆ ಸರ್ಕಾರಿ ಪದವಿ ಪೂರ್ವ ಕಾಲೇಜು ಆರಂಭವಾಗದಿರುವುದಕ್ಕೆ ಸ್ಥಳೀಯರು ಹಾಗೂ ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಪಟ್ಟಣವು 25 ರಿಂದ 30 ಸಾವಿರದಷ್ಟು ಜನಸಂಖ್ಯೆ ಹೊಂದಿದೆ. ಸುತ್ತಮುತ್ತಲಿನ 34 ಹಳ್ಳಿಗಳಿಗೆ ಅತಿ ದೊಡ್ಡ ಹೋಬಳಿ ಕೇಂದ್ರವಾಗಿದೆ. ಪಟ್ಟಣದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಇಲ್ಲದಿರುವುದರಿಂದ ಸ್ಥಳಿಯ ಹಾಗೂ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹಿನ್ನಡೆಯಾಗುತ್ತಿದೆ.

ಪಟ್ಟಣದಲ್ಲಿ ಒಟ್ಟು 3 ಅನುದಾನಿತ ಪ್ರೌಢಶಾಲೆ, 1 ಸರ್ಕಾರಿ ಪ್ರೌಢಶಾಲೆ, 1 ಉರ್ದು ಪ್ರೌಢ ಶಾಲೆ, ಕೇವಲ ಒಂದು ಅನುದಾನಿತ ಪದವಿ ಪೂರ್ವ ಕಾಲೇಜು ಮಾತ್ರ ಇದೆ. 

ADVERTISEMENT

ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಣ ಪಡೆಯಬೇಕೆಂದರೆ ಸ್ಥಳಿಯ ಹಾಗೂ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳು ನಿತ್ಯ 30 ರಿಂದ 40 ಕಿಮೀ ದೂರದ ಜಿಲ್ಲಾ ಕೇಂದ್ರ ಅಥವಾ ತಾಲ್ಲೂಕು ಕೇಂದ್ರಕ್ಕೆ ಹೋಗುವುದು ಅನಿವಾರ್ಯವಾಗಿದೆ.

ಹೋಬಳಿಯಲ್ಲಿರುವ ಖಾಸಗಿ ಕಾಲೇಜಿನಲ್ಲಿ ದುಬಾರಿ ಶುಲ್ಕ, ಮೂಲ ಸೌಕರ್ಯ ಹಾಗೂ ಕಾಯಂ ಉಪನ್ಯಾಸಕರ ಕೊರತೆ ಇದೆ. ವಿದ್ಯಾರ್ಥಿಗಳು ಕಡಿಮೆ ವೆಚ್ಚದಲ್ಲಿ ಶಿಕ್ಷಣ ಪಡೆಯಲು ದೂರದ ಸ್ಥಳಕ್ಕೆ ಹೋಗಲು ಸಾಧ್ಯವಾಗದೆ ಎಸ್‌ಎಸ್‌ಎಲ್‌ಸಿ ನಂತರದ ಪದವಿ ಪೂರ್ವ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.

‘ಪಟ್ಟಣಕ್ಕೆ ತಾಲ್ಲೂಕು ಕೇಂದ್ರಕ್ಕೆ ಇರಬೇಕಾದ ಎಲ್ಲ ಅರ್ಹತೆಗಳೂ ಇವೆ. 3 ದಶಕಗಳಿಂದ ಇಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಆರಂಭವಾಗಬೇಕು ಎಂಬ ಬೇಡಿಕೆ ಇದೆ. ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ಜನರು ಹೆಚ್ಚು ಕೃಷಿ ಹಾಗೂ ದಿನಗೂಲಿ ಮೇಲೆ ಅವಲಂಬಿತರಾಗಿದ್ದಾರೆ. ಸರ್ಕಾರಿ ಕಾಲೇಜು ಇಲ್ಲದೇ ಇರುವುದರಿಂದ ಬಡವರ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಹೋಬಳಿ ಕೇಂದ್ರವಾಗಿರುವ ಪಟ್ಟಣದಲ್ಲಿ ಪದವಿ ಪೂರ್ವ ಕಾಲೇಜು ಸ್ಥಾಪನೆಗೆ ಸೂಕ್ತವಾದ ಸ್ಥಳ ಹಾಗೂ ವಾತವರಣವೂ ಇದೆ. ಸುತ್ತಮುತ್ತಲಿನ ಹಳ್ಳಿಗಳಾದ ಮಾಲಗಿ, ನರೇನೂರ, ಫಕೀರಬೂದಿಹಾಳ, ಅಗಸನಕೊಪ್ಪ, ಯರಗೊಪ್ಪ, ಹೂಲಗೇರಿ, ಚಿಂಚಲಕಟ್ಟಿ, ಬೆಳ್ಳಿಖಿಂಡಿ, ಹವಳಕೋಡ ಸೇರಿದಂತೆ ಇನ್ನುಳಿದ ಗ್ರಾಮದ ವಿದ್ಯಾರ್ಥಿಗಳೂ ಅನುಕೂಲವಾಗುತ್ತದೆ’ ಎಂದು ಸ್ಥಳೀಯರು ಅಗ್ರಹಿಸಿದ್ದಾರೆ.

ಪಟ್ಟಣದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಇಲ್ಲದಿರುವುದರಿಂದ ಬಹಳಷ್ಟು ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆಯಾಗುತ್ತಿದೆ
ಗುಂಡಪ್ಪ ಬೋರಣ್ಣವರ ಸಾಮಾಜಿಕ ಕಾರ್ಯಕರ್ತ
ಕೆರೂರ ಪಟ್ಟಣವು ಪ್ರಧಾನ ಹೋಬಳಿ ಕೇಂದ್ರವಾಗಿದೆ. ಇಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಅವಶ್ಯಕತೆ ಇದೆ
ಬೀರಪ್ಪ ಕರಿಗಾರ ಫಕೀರಬೂದಿಹಾಳ ಗ್ರಾಮದ ನಿವಾಸಿ
ಶಿಕ್ಷಣ ಸಚಿವರೊಂದಿಗೆ ಚರ್ಚಿಸಿ ಸರ್ಕಾರಿ ಪದವಿ ಪೂರ್ವ ಕಾಲೇಜು ಆರಂಭಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ
ಭೀಮಸೇನ ಚಿಮ್ಮನಕಟ್ಟಿ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.