
ಗುಳೇದಗುಡ್ಡ: ತಾಲ್ಲೂಕಿನ ಕೊಟ್ನಳ್ಳಿ ಗ್ರಾಮ ಗುಳೇದಗುಡ್ಡ ಪಟ್ಟಣದಿಂದ 8 ಕಿ.ಮೀ ಅಂತರದಲ್ಲಿದೆ. ಗ್ರಾಮದಲ್ಲಿ 300ಕ್ಕೂ ಅಧಿಕ ಮನೆಗಳಿದ್ದು, ಎರಡು ಸಾವಿರದಷ್ಟು ಜನಸಂಖ್ಯೆ ಇದೆ. ಗ್ರಾಮದಲ್ಲಿ ಮೂಲ ಸೌಲಭ್ಯಗಳ ಕೊರತೆ ಇದೆ.
ಗ್ರಾಮ ಪಂಚಾಯತ್ ಕಾರ್ಯಾಲಯ 2 ಕಿ.ಮೀ ದೂರದಲ್ಲಿದ್ದು, ಅಭಿವೃದ್ದಿ ಕಾರ್ಯಗಳಾಗಿಲ್ಲ. ಗ್ರಾಮದಲ್ಲಿ ಒಟ್ಟು ಮೂರು ಜನ ಗ್ರಾ.ಪಂ ಸದಸ್ಯರಿದ್ದಾರೆ. ಗ್ರಾಮದಲ್ಲಿ ಯಾವುದೇ ಮಹತ್ವವಾದ ಕೆಲಸಗಳಾಗಿಲ್ಲ. ಚರಂಡಿ ವ್ಯವಸ್ಥೆ, ಕುಡಿಯುವ ನೀರು, ರಸ್ತೆ, ಶೌಚಾಲಯ ಸಮಸ್ಯೆಗಳು ಇಂದಿಗೂ ಜೀವಂತವಾಗಿವೆ.
ದುರಸ್ತಿಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ: ಗ್ರಾಮದಲ್ಲಿ ಒಂದು ಶುದ್ಧ ನೀರಿನ ಘಟಕ ಇದ್ದು, ದುಸ್ಥಿತಿಯಲ್ಲಿದೆ.
ಶುದ್ಧ ನೀರು ಬರಲ್ಲ: ಗ್ರಾಮದಲ್ಲಿ ಮನೆ, ಮನೆಗೆ ಕುಡಿಯಲು ಶುದ್ದ ನೀರು ಪೂರೈಸುವ ಸಲುವಾಗಿ ಜಲಜೀವನ್ ಮಿಷನ್ ಯೋಜನೆ ಅಡಿ ನಳ ಸಂಪರ್ಕ ಕಲ್ಪಿಸಲಾಗಿದೆ. ಆದರೆ ಅಲ್ಲಿ ಬರುವ ನೀರು ಕುಡಿಯಲು ಯೋಗ್ಯವಾಗಿಲ್ಲದರಿಂದ ಬಳಸಲು ಮಾತ್ರ ಉಪಯೋಗಿಸುತ್ತಾರೆ. ಅಲ್ಲಿ ಪೂರೈಕೆಯಾಗುವ ನೀರು ಸಮೀಪದ ಆಸಂಗಿ ಕೆರೆಯಿಂದ ಬರುತ್ತದೆ. ಕೆರೆಯಲ್ಲಿ ಆಪು ಎಂಬ ಸಸ್ಯ ಬೆಳೆದಿದೆ. ಹಸಿರು ಜೊಂಡು ಕೆರೆ ತುಂಬ ಇದೆ. ಹೀಗಾಗಿ ಸ್ವಚ್ಚಗೊಳಿಸುವ ಕೆಲಸ ಮಾಡದ್ದರಿಂದ ಶುದ್ದ ನೀರು ಬರುತ್ತಿಲ್ಲ.
ಬಯಲು ಬಹಿರ್ದೆಸೆ ಇನ್ನೂ ಜೀವಂತ: ಗ್ರಾಮ ಪಂಚಾಯಿತಿಯಿಂದ 1 ಸಾರ್ವಜನಿಕ ಶೌಚಾಲಯ ನಿರ್ಮಿಸಿದ್ದಾರೆ. ಆದರೆ ನೀರು ಸ್ವಚ್ಛವಾಗಿರದ ಕಾರಣ ಅಲ್ಲಿ ಮಲ, ಮೂತ್ರ ವಿಸರ್ಜನೆಗೆ ಯಾರೂ ಹೋಗುತ್ತಿಲ್ಲ. ಅವುಗಳ ಸುತ್ತ ಜಾಲಿ ಕಂಟಿ ಬೆಳೆದಿವೆ. ಮಲ, ಮೂತ್ರ ವಿಸರ್ಜನೆಗೆ ಸಂಜೆಯಾದರೇ ಸಾಕು ರಸ್ತೆ ಬದಿ, ಗುಡ್ಡ ಹತ್ತಿರ ಇರುವುದರಿಂದ ಶೌಚ ಮಾಡಲು ಗುಡ್ಡಕ್ಕೆ ಹೋಗುವುದು ಕಂಡು ಬಂದಿದೆ.
ಶೌಚಾಲಯದ ವ್ಯವಸ್ಥೆಗಾಗಿ ಗ್ರಾಮ ಪಂಚಾಯಿತಿಯಿಂದ ಅನುದಾನ ಪಡೆದು ಕೆಲವರು ಕಟ್ಟಿಕೊಂಡರೂ ಬಳಸಲು ಸಾಧ್ಯವಾಗದಂತೆ ಕಟ್ಟಿಕೊಂಡಿದ್ದಾರೆ. ಬಯಲು ಬಹಿರ್ದೆಸೆಯನ್ನು ಗ್ರಾಮಸ್ಥರು ಇಂದಿಗೂ ರೂಢಿಸಿಕೊಂಡು ಬಂದಿದ್ದಾರೆ.
ಇಲ್ಲದ ಸಿಸಿ ರಸ್ತೆ: ಪುನರ್ ವಸತಿ ಗ್ರಾಮದಲ್ಲಿ ಸಿಸಿ ರಸ್ತೆ ಇಲ್ಲ. ಮಳೆಗಾಲದಲ್ಲಿ ತೀವ್ರ ತೊಂದರೆ ಅನುಭವಿಸುವಂತಾಗಿದೆ. ಹೀಗಾಗಿ ಗ್ರಾಮಸ್ಥರು ಗ್ರಾಮಕ್ಕೆ ಹೊಂದಿಕೊಂಡ ಹಳ್ಳ ಇಲ್ಲವೇ ಅಂತ್ಯ ಸಂಸ್ಕಾರವನ್ನು ತಮ್ಮ ಹೊಲಗಳ ಬದುವಿನಲ್ಲಿ ಮಾಡುತ್ತಾರೆ.
ಗ್ರಾಮದಲ್ಲಿ ಕೆಲವು ಓಣಿಗಳಲ್ಲಿ ಚರಂಡಿ ನಿರ್ಮಿಸಿದ್ದಾರೆ. ಇನ್ನೂ ಕೆಲವು ಕಡೆ ಚರಂಡಿ ನಿರ್ಮಿಸಬೇಕಾದ ಅಗತ್ಯ ಇದೆ. ಚರಂಡಿ ನೀರು ಸುಲಭವಾಗಿ ಹರಿದು ಹೋಗಲು ಸರಿಯಾದ ವ್ಯವಸ್ಥೆ ಇಲ್ಲದ್ದರಿಂದ ನೀರು ನಿಂತು ಗಬ್ಬು ನಾರುತ್ತದೆ. ಜನರು ಮೂಗು ಮುಚ್ಚಿಕೊಂಡೇ ಹೋಗುವ ಸ್ಥಿತಿ ಇದೆ.
ಸೌಲಭ್ಯಗಳಿಲ್ಲ: ಹಿರಿಯ ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿಗಳಲ್ಲಿ ಮಕ್ಕಳಿಗೆ ಶುದ್ದ ಕುಡಿಯುವ ನೀರು, ಆಟದ ಮೈದಾನ, ಶೌಚಾಲಯ ಮುಂತಾದ ಸೌಲಭ್ಯಗಳಿಲ್ಲ. ಗ್ರಾಮದಲ್ಲಿ ಗ್ರಂಥಾಲಯವೂ ಇಲ್ಲ.
ಪುನರ್ ವಸತಿ ಗ್ರಾಮದಲ್ಲಿ ಗುಡ್ಡಕ್ಕೆ ಹೊಂದಿಕೊಂಡಂತೆ ಎರಡು ಶಾಲಾ ಕೊಠಡಿಗಳನ್ನು ನಿರ್ಮಿಸಲಾಗಿದೆ. ಆದರೆ ಅಲ್ಲಿ ಶಾಲೆಯೂ ಆರಂಭವಾಗಿಲ್ಲ ಮತ್ತು ರಸ್ತೆ ಇಲ್ಲವಾಗಿದೆ.
ಅಭಿವೃದ್ದಿಯಾಗದ ದ್ಯಾಮವ್ವನಕೊಳ್ಳದ ರಸ್ತೆ: ಗ್ರಾಮದಿಂದ ದ್ಯಾಮವ್ವನಕೊಳ್ಳದ ದೇವಸ್ಥಾನಕ್ಕೆ ಹೋಗಲು, ರೈತರು ತಮ್ಮ ಹೊಲಗಳಿಗೆ ಹೋಗಲು 5 ಕಿ.ಮೀ ರಸ್ತೆ ಇದ್ದು, ತೀವ್ರ ಹದಗೆಟ್ಟಿದೆ. ಹಳೆಕೊಟ್ನಳ್ಳಿ - ಲಾಯದಗುಂದಿ ಮಧ್ಯೆ ಕೂಡು ರಸ್ತೆ ದುರಸ್ತಿ, ಸ್ವಚ್ಛತೆ, ಕಂಠಿ ಬೆಳೆದಿರುವುದರಿಂದ ಅಭಿವೃದ್ದಿಯಿಲ್ಲದೆ ಸಾರ್ವಜನಿಕರಿಗೆ ತೊಂದರೆಯಾಗಿದೆ.
ಅಭಿವೃದ್ಧಿ ಕುಂಟಿತ: ಪೂರ್ಣಾವಧಿ ಪಿಡಿಒ ಇಲ್ಲದಿರುವುದರಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಅಭಿವೃದ್ಧಿ ಮರಿಚಿಕೆಯಾಗಿದೆ.
ಗ್ರಾಮದಲ್ಲಿ ಬಹಳಷ್ಟು ಸಮಸ್ಯೆಗಳಿವೆ. ಅಧ್ಯಕ್ಷರು ಮತ್ತು ಅಧಿಕಾರಿಗಳ ಗಮನಕ್ಕೆ ತರಲಾಗಿದ್ದರೂ ಏನು ಪ್ರಯೋಜನವಾಗಿಲ್ಲಹನಮಂತ ಅಂಬಿಗೇರ (ಚಾಕರಿ) ಗ್ರಾಮಸ್ಥ ಕೊಟ್ನಳ್ಳಿ
ಗ್ರಾಮದ ಅಭಿವೃದ್ಧಿಗಾಗಿ ಗ್ರಾಮ ಪಂಚಾಯಿತಿಯಿಂದ ಉತ್ತಮ ಚರಂಡಿ ನಿರ್ಮಾಣ ಕುಡಿಯುವ ನೀರು ಅಂಗನವಾಡಿಗಳ ಸಮಸ್ಯೆಗಳಿಗೆ ಅನುದಾನ ನೀಡಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದುಶಂಕ್ರಪ್ಪ ಹುಲ್ಯಾಳ ಪ್ರಭಾರ ಪಿ.ಡಿ.ಒ ಗ್ರಾ.ಪಂ ಲಾಯದಗುಂದಿ
ಗ್ರಾಮದಲ್ಲಿನ ಅಭಿವೃದ್ದಿ ಕಾರ್ಯಗಳಿಗಾಗಿ ಅನುದಾನದ ಕೇಳಲಾಗಿದೆಶೇಖಪ್ಪ ಗೌಡರ ಗ್ರಾ. ಪಂ ಸದಸ್ಯ ಕೊಟ್ನಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.