
ಬಾದಾಮಿ: ಐತಿಹಾಸಿಕ ಪಟ್ಟಣದ ಸಾರ್ವಜನಿಕ ಗ್ರಂಥಾಲಯದಲ್ಲಿ ಮುರಿದ ಕುರ್ಚಿ, ನೀರಿನಲ್ಲಿ ನೆನೆದು ದೂಳು ತಿನ್ನುತ್ತಿರುವ ಸಾವಿರಾರು ಪುಸ್ತಕ ಮತ್ತು ಮಳೆಗಾಲದಲ್ಲಿ ಸೋರುತ್ತಿರುವ ಗ್ರಂಥಾಲಯಕ್ಕೆ ಬೇಕಿದೆ ಸಂರಕ್ಷಣೆ.
ಕೇಂದ್ರ ಸಚಿವರಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಅವರು 1960ರಲ್ಲಿ ನಗರದ ಸಾರ್ವಜನಿಕ ಗ್ರಂಥಾಲಯವನ್ನು ಉದ್ಘಾಟಿಸಿದ್ದರು. ಅದಕ್ಕೆ ಸಂಬಂಧಿಸಿದ ಚಿತ್ರವೊಂದು ವಾಚನಾಲಯದಲ್ಲಿ ಲಭ್ಯವಿದೆ.
ನಗರದ ಮಧ್ಯದ ಮ್ಯುಜಿಯಂ ರಸ್ತೆಯ ತರಕಾರಿ ಮಾರುಕಟ್ಟೆಯಲ್ಲಿರುವ ಗ್ರಂಥಾಲಯದಲ್ಲಿ ನಾಲ್ಕು ಕೊಠಡಿಗಳಿವೆ. ಎರಡು ಕೊಠಡಿಗಳು ಉಗ್ರಾಣವಾಗಿದ್ದು, ಒಂದು ಕೊಠಡಿಯಲ್ಲಿ ಪುಸ್ತಕ ಇಡಲಾಗಿದೆ. ಇನ್ನೊಂದು ಕೊಠಡಿ ಓದಲು ಮೀಸಲಾಗಿದೆ. ಓದುವ ಕೊಠಡಿಯಲ್ಲಿ 12 ಕುರ್ಚಿಗಳು ಮಾತ್ರ ಇದ್ದುದರಿಂದ, ಹೆಚ್ಚಿನ ಸಂಖ್ಯೆಯಲ್ಲಿ ಓದುಗರು ಬಂದರೆ ನೆಲದಲ್ಲಿ ಕುಳಿತು ಓದಬೇಕಾಗುತ್ತದೆ.
16 ರ‍್ಯಾಕ್‌ಗಳಲ್ಲಿ ಪುಸ್ತಕಗಳು ಭರ್ತಿಯಾಗಿವೆ. ಒಟ್ಟು 30 ಸಾವಿರ ಪುಸ್ತಕಗಳಲ್ಲಿ ಅಂದಾಜು 20 ಸಾವಿರಕ್ಕೂ ಹೆಚ್ಚನ್ನು ನೆಲದಲ್ಲಿ ಹಾಗೂ ಕೆಲವನ್ನು ಮೇಲೆ ಇರಿಸಲಾಗಿದೆ. ಮಳೆಗಾಲದಲ್ಲಿ ಕಟ್ಟಡವು ಸೋರುತ್ತಿದ್ದು ಅನೇಕ ಹಳೇ ಪುಸ್ತಕಗಳು ನೆನೆದು ಹಾಳಾಗಿವೆ.
ತಿ.ತಾ. ಶರ್ಮಾ, ಪು.ತಿ.ನ, ಮಾಸ್ತಿ, ಪಾ.ವೆಂ. ಆಚಾರ್ಯ, ಬಿ.ಎಂ.ಶ್ರೀ, ಕುವೆಂಪು, ದ.ರಾ.ಬೇಂದ್ರೆ, ಡಿ.ಎಸ್. ಕರ್ಕಿ, ತ.ರಾ.ಸು, ಅನಕೃ, ಬೀಚಿ, ಎನ್. ನರಸಿಂಹಯ್ಯ, ವಿ.ಕೃ. ಗೋಕಾಕ್, ಶಿವರಾಮ ಕಾರಂತ, ಕೆ.ಎಸ್. ನರಸಿಂಹಸ್ವಾಮಿ, ಚಿದಾನಂದಮೂರ್ತಿ ಮೊದಲಾದ ಕವಿಗಳ, ಸಾಹಿತಿಗಳ ಪುಸ್ತಕಗಳು ಮತ್ತು ಇತಿಹಾಸ ವಿದ್ವಾಂಸರ ಮೌಲ್ಯವುಳ್ಳ ಗ್ರಂಥಗಳನ್ನು ಸಂಗ್ರಹಿಸಲಾಗಿದೆ.
ಪಟ್ಟಣದಲ್ಲಿ ಆರು ಪ್ರೌಢಶಾಲೆ, ಮೂರು ಪದವಿ ಪೂರ್ವ ಕಾಲೇಜು, ಮೂರು ಪದವಿ ಮತ್ತು ಶಿಕ್ಷಣ ಕಾಲೇಜಿನಲ್ಲಿ ಸಾವಿರಾರು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗೆ ಓದಲು ಗ್ರಂಥಾಲಯಕ್ಕೆ ಬಂದರೆ ಕೂಡಲು ಸ್ಥಳವಿಲ್ಲ.
ಗ್ರಂಥಾಲಯವನ್ನು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸಂರಕ್ಷಿಸಿ ಮೇಲ್ದರ್ಜೆಗೇರಿಸಿ ವಿದ್ಯಾರ್ಥಿಗಳು, ಯುವಕರಿಗೆ ಸೌಲಭ್ಯ ಕಲ್ಪಿಸಬೇಕು ಎಂಬುದು ಸಾರ್ವಜನಿಕರ ಒತ್ತಾಸೆ.
‘ಗ್ರಂಥಾಲಯಕ್ಕೆ ವಿದ್ಯಾರ್ಥಿಗಳು, ಯುವಕರು ಮತ್ತು ನಿವೃತ್ತ ನೌಕರರು ನಿತ್ಯ ಬರುತ್ತಾರೆ. ಸ್ಥಳದ ಅಭಾವದಿಂದ ಮರಳಿ ಹೋಗುವಂತಾಗಿದೆ. ಗ್ರಂಥಾಲಯಕ್ಕೆ ದೊಡ್ಡ ಕಟ್ಟಡವಾದರೆ ಪುಸ್ತಕ ಸಂರಕ್ಷಣೆ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ’ ಎಂದು ನಿವೃತ್ತ ನೌಕರ ನಿಂಗಪ್ಪ ಬೆಳವಣಕಿ ಹೇಳಿದರು.
‘ಗ್ರಾಮೀಣ ಪ್ರದೇಶದಲ್ಲಿ ಗ್ರಂಥಾಲಯಗಳನ್ನು ಡಿಜಿಟಲೀಕರಣ ಮಾಡಲಾಗಿದೆ. ಇಲ್ಲಿಯೂ ಆ ಕೆಲಸ ಆಗಬೇಕು. ಸ್ಪರ್ಧಾತ್ಮಕ ಪರೀಕ್ಷೆಗೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತ’ ಎಂದು ನಿವೃತ್ತ ನೌಕರ ಲಕ್ಷ್ಮಣ ಹಣಗಿ ಹೇಳಿದರು.
‘ಕೆಎಎಸ್, ಐಎಎಸ್, ಯುಪಿಎಸ್ಸಿ, ಐಪಿಎಸ್, ಐಎಫ್ಎಸ್ ಮತ್ತು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗೆ ಅಧ್ಯಯನ ಮಾಡಲು ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಪುಸ್ತಕಗಳು ಅವಶ್ಯವಿದೆ’ ಎಂದು ಐಎಎಸ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಪಾಯಲ್ ಕದಂ ಅಭಿಪ್ರಾಯಪಟ್ಟರು.
ಗ್ರಂಥಾಲಯದಲ್ಲಿನ ಸಮಸ್ಯೆಗಳ ಕುರಿತು ಜಿಲ್ಲಾ ಗ್ರಂಥಾಲಯದ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಅವರ ಸೂಚನೆಯಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು-ಸುನೀಲ ಮುದಗಲ್, ಗ್ರಂಥಪಾಲಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.