ಮಹಾಲಿಂಗಪುರ: ಪಟ್ಟಣದ 11ನೇ ವಾರ್ಡ್‍ನಲ್ಲಿ ನಿರ್ಮಿಸುತ್ತಿರುವ ಸಿದ್ರಾಮೇಶ್ವರ ದೇವಸ್ಥಾನ ಬಳಿಯಲ್ಲಿದ್ದ ಕೊಳವೆಬಾವಿಯನ್ನು ತೆರವುಗೊಳಿಸುತ್ತಿರುವ ವದಂತಿಯಿಂದ ಆಕ್ರೋಶಗೊಂಡ ವಾರ್ಡ್ ನಿವಾಸಿಗಳು ಮಂಗಳವಾರ ಪುರಸಭೆ ಎದುರು ಏಕಾಏಕಿ ಪ್ರತಿಭಟನೆ ನಡೆಸಿದರು.
‘ಸುತ್ತಮುತ್ತಲಿನ ನೂರಾರು ಕುಟುಂಬಗಳಿಗೆ ಕೊಳವೆ ಬಾವಿ ನೀರೆ ಆಧಾರವಾಗಿದೆ. ಕೊಳವೆಬಾವಿ ಪುರಸಭೆ ಜಾಗದಲ್ಲಿದ್ದು, ಸದ್ಯ ನಿರ್ಮಾಣ ಆಗುತ್ತಿರುವ ದೇವಸ್ಥಾನದ ಕಾಂಪೌಂಡ್‍ಗೆ ಕೊಳವೆಬಾವಿ ತಾಗುತ್ತಿದೆ. ಮುಂದೆ ದುರಸ್ತಿಗೆ ಬಂದರೆ ಅದನ್ನು ಪರಿಹರಿಸಲು ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಕೊಳವೆಬಾವಿ ತೆರವುಗೊಳಿಸುತ್ತಿರುವ ಸುದ್ದಿ ಹರಡಿದೆ’ ಎಂದು ಪ್ರತಿಭಟನಾನಿರತ ನಿವಾಸಿಗಳು ಆರೋಪಿಸಿದರು.
ಕೊಳವೆ ಬಾವಿಯಲ್ಲಿನ ಕಬ್ಬಿಣದ ಪೈಪ್ ತೆಗೆದು ಪಿವಿಸಿ ಪೈಪ್ ಅಳವಡಿಸಿದರೆ ದುರಸ್ತಿಗೊಳಿಸಲು ಅನುಕೂಲವಾಗುತ್ತದೆ ಎಂಬ ಕಾರಣಕ್ಕೆ ಕೆಲವರು ಕಬ್ಬಿಣ ಪೈಪ್ ತೆಗೆಯಲು ಯತ್ನಿಸಿದಾಗ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿ ಕೊಳವೆ ಬಾವಿ ತೆರವುಗೊಳಿಸಲಾಗುತ್ತಿದೆ ಎಂದು ಆರೋಪಿಸಿದರು.
ಮುಖ್ಯಾಧಿಕಾರಿ ಅನುಪಸ್ಥಿತಿ ಇರುವುದರಿಂದ ವಾರ್ಡ್ ಸದಸ್ಯ ಹಾಗೂ ಮುಖ್ಯಾಧಿಕಾರಿ ಸಮ್ಮುಖದಲ್ಲಿ ಬುಧವಾರ ಚರ್ಚೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪುರಸಭೆ ಸಿಬ್ಬಂದಿ ಹೇಳಿದ ನಂತರ ನಿವಾಸಿಗಳು ಪ್ರತಿಭಟನೆ ಹಿಂಪಡೆದರು.
ಬುಧವಾರ ಸ್ಥಳ ಪರಿಶೀಲನೆ ನಡೆಸುತ್ತೇನೆ. ಈ ಕುರಿತು ಸಮಾಜದ ಮುಖಂಡರು, ವಾರ್ಡ್ ಸದಸ್ಯ, ಅಧ್ಯಕ್ಷರೊಂದಿಗೆ ಚರ್ಚಿಸಿ ಸಮಸ್ಯೆ ಪರಿಹರಿಸುತ್ತೇನೆ ಎಂದು ಪುರಸಭೆ ಮುಖ್ಯಾಧಿಕಾರಿ ಎನ್.ಎ.ಲಮಾಣಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.