ಮಹಾಲಿಂಗಪುರ (ಬಾಗಲಕೋಟೆ ಜಿಲ್ಲೆ): ರನ್ನಬೆಳಗಲಿಯ ಅಕ್ಕಿಮರಡಿ ರಸ್ತೆಯಲ್ಲಿರುವ ತೋಟದ ಪತ್ರಾಸ್ ಶೆಡ್‌ಗೆ ದುಷ್ಕರ್ಮಿಗಳು ಮಂಗಳವಾರ ಬೆಳಗಿನ ಜಾವ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪರಿಣಾಮ ತಾಯಿ–ಮಗಳು ಸಜೀವವಾಗಿ ದಹನಗೊಂಡು ಇನ್ನಿಬ್ಬರು ಗಾಯಗೊಂಡಿದ್ದಾರೆ.
ತಾಯಿ ಜೈಬಾನು ದಸ್ತಗೀರ ಪೆಂಡಾರಿ (55) ಹಾಗೂ ಪುತ್ರಿ ಶಬಾನಾ ದಸ್ತಗೀರ ಪೆಂಡಾರಿ (29) ಮೃತರು. ಜೈಬಾನು ಪತಿ ದಸ್ತಗೀರ ಮೌಲಾಸಾಬ ಪೆಂಡಾರಿ (64) ಮತ್ತು ಪುತ್ರ ಸುಬಾನ್ ದಸ್ತಗೀರ ಪೆಂಡಾರಿ (27) ಅವರಿಗೆ ಗಾಯವಾಗಿದೆ. ಶಬಾನಾ ಸಹೋದರಿಯ ಪುತ್ರ ಸಿದ್ದಿಕ್ ಶೌಕತ್ ಪೆಂಡಾರಿಗೆ (19) ಹೆಚ್ಚು ಗಾಯಗಳಾಗಿಲ್ಲ.
ವಿವರ: ಕುಟುಂಬದ ಐವರು ಸದಸ್ಯರು ಮಲಗಿದ್ದ ವೇಳೆ ಮಧ್ಯರಾತ್ರಿ 2 ರಿಂದ 3 ಗಂಟೆಗೆ ದುಷ್ಕರ್ಮಿಗಳು 200 ಲೀಟರ್ ಸಾಮರ್ಥ್ಯದ ಸಿಂಟೆಕ್ಸ್‌ನಲ್ಲಿ ಪೆಟ್ರೋಲ್ ತುಂಬಿ, ಅದಕ್ಕೆ 3 ಎಚ್‌ಪಿ ಮೋಟರ್ ಬಳಸಿ ಪೈಪ್ ಮೂಲಕ ಶೆಡ್‌ಗೆ ಪೆಟ್ರೋಲ್ ಸುರಿದಿದ್ದಾರೆ. ನಂತರ ಶೆಡ್‌ನ ಬಾಗಿಲಿಗೆ ಚಿಲಕ ಹಾಕಿ, ಬೆಂಕಿ ಹಚ್ಚಿದ್ದಾರೆ.
‘ಸಿದ್ದಿಕ್ ಪೆಂಡಾರಿಗೆ ತಕ್ಷಣವೇ ಎಚ್ಚರವಾಗಿದ್ದು, ಎಲ್ಲರನ್ನೂ ಎಬ್ಬಿಸಿ ಶೆಡ್‌ನ ಕಟ್ಟಿಗೆ ಮುರಿದು ಹೊರಬಂದಿದ್ದಾರೆ. ಅಷ್ಟರಲ್ಲಿ ಬೆಂಕಿ ತೀವ್ರವಾಗಿ ವ್ಯಾಪಿಸಿದೆ. ಉಳಿದ ನಾಲ್ವರು ಶೆಡ್‌ನಿಂದ ಹೊರಬರಲು ಮತ್ತು ಪರಸ್ಪರ ಉಳಿಸಲು ಪ್ರಯತ್ನಿಸಿದರು’ ಎಂದು ಪೊಲೀಸರು ತಿಳಿಸಿದರು.
‘ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಐದು ತಂಡಗಳನ್ನು ರಚಿಸಲಾಗಿದ್ದು, ಬೇರೆ ಬೇರೆ ಆಯಾಮಗಳಲ್ಲಿ ತನಿಖೆ ಮುಂದುವರೆದಿದೆ. ದಸ್ತಗೀರ ಅವರ ಹೇಳಿಕೆ ಪಡೆಯಲಾಗಿದ್ದು, ಈ ಕೃತ್ಯಕ್ಕೆ ಹಣಕಾಸಿನ ವಹಿವಾಟು ಕಾರಣ ಎಂಬುದು ಗೊತ್ತಾಗಿದೆ’ ಎಂದು ಉತ್ತರ ವಲಯ ಐಜಿಪಿ ವಿಕಾಸಕುಮಾರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.