ADVERTISEMENT

ಕೃಷಿ-ಖುಷಿ ಅಂಕಣ | ಸಾವಯವ ಮಿಶ್ರ ಬೇಸಾಯ: ಉತ್ತಮ ಲಾಭ ಪಡೆವ ಕೃಷಿಕ ಆಸಂಗೆಪ್ಪ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2025, 4:09 IST
Last Updated 28 ನವೆಂಬರ್ 2025, 4:09 IST
ಬೆಳೆಗಳೊಂದಿ ಕೃಷಿಕ ಆಸಂಗೆಪ್ಪ ನಕ್ಕರಗುಂದಿ
ಬೆಳೆಗಳೊಂದಿ ಕೃಷಿಕ ಆಸಂಗೆಪ್ಪ ನಕ್ಕರಗುಂದಿ   

ಗುಳೇದಗುಡ್ಡ: ತಮ್ಮ ಪಿತ್ರಾಜಿತ ಒಂದು ಎಕರೆ ನೀರಾವರಿಯಲ್ಲಿ ಹಾಗೂ ಹತ್ತು ಎಕರೆ ಲಾವಣಿ ಜಮೀನಿನಲ್ಲಿ ಸಾವಯುವ ಸಮಗ್ರ ಕೃಷಿ ಮಾಡುತ್ತಿರುವ ತಾಲ್ಲೂಕಿನ ಕಟಗಿನಹಳ್ಳಿ ಗ್ರಾಮದ ಆಸಂಗೆಪ್ಪ ನಕ್ಕರಗುಂದಿ, ಭಿನ್ನ ಬೆಳೆ ಬೆಳೆಯುವಲ್ಲಿ ಮತ್ತು ಹೆಚ್ಚು ಇಳುವರಿ ಪಡೆದು ಉತ್ತಮ ಲಾಭ ಪಡೆಯುವಲ್ಲಿ ಮಾದರಿ ಕೃಷಿಕ ಎನಿಸಿಕೊಂಡಿದ್ದಾರೆ.

ಐವತ್ತನಾಲ್ಕು ವರ್ಷ ವಯಸ್ಸಿನ ಇವರು 30 ವರ್ಷಗಳಿಂದ ಕೃಷಿ ಮಾಡುತ್ತಾ ಬಂದಿರುವರು. ಇವರಿಗೆ ನಾಲ್ಕು ಜನ ಗಂಡು ಮಕ್ಕಳಿದ್ದು ಎಲ್ಲರೂ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಇವರು ಬೇರೆಯವರ 10 ಎಕರೆ ಜಮೀನನ್ನ ಲಾವಣಿಗೆ ಪಡೆದು ಮಲಪ್ರಭಾ ನದಿಯಿಂದ ಪೈಪ್‌ಲೈನ್ ಮುಖಾಂತರ ನೀರು ತಂದು ಕೃಷಿ ಮಾಡುತ್ತಿದ್ದಾರೆ. ಮಾವು, ನುಗ್ಗೆ, ಕರಿಬೇವು, ಕಬ್ಬು, ನಿಂಬೆ ತೋಟಗಾರಿಕೆ ಬೆಳೆಗಳನ್ನೂ ಹಾಗೂ ಸಾಂಪ್ರದಾಯಿಕವಾದ ಗೋವಿನಜೋಳ, ಹೈಬ್ರಿಡ್‌ ಜೋಳ, ಸೂರ್ಯಕಾಂತಿ ಮುಂತಾದ ಬೆಳೆಗಳನ್ನೂ ಬೆಳೆಯುತ್ತಿದ್ದಾರೆ. ಇವರಿಗೆ ಮೂರು ಎಕರೆ ಒಣ ಬೇಸಾಯ ಮಾಡುವ ಜಮೀನು ಇದೆ.

ದೇಸಿ ಹೈನುಗಾರಿಕೆ :

ಐದು ಎಮ್ಮೆಗಳನ್ನು, ಹಸುಗಳನ್ನು ಹಾಗೂ ಮೇಕೆಗಳನ್ನು ಇವರು ಸಾಕಿದ್ದಾರೆ. ಜವಾರಿ ಕೋಳಿ ಸಾಕಾಣಿಕೆ ಮಾಡಿ ದೇಶಿ ಕೃಷಿಗೆ ಆದ್ಯತೆ ನೀಡಿ ಲಾಭ ಮಾಡಿಕೊಳ್ಳುತ್ತಿದ್ದಾರೆ.

ADVERTISEMENT

ತರಕಾರಿ ಬೆಳೆ :

ಇವರು ತರಕಾರಿ ಬೆಳೆಗೆ ಒಟ್ಟು ಜಮೀನಿನಲ್ಲಿ ಒಂದು ಎಕರೆ ಮೀಸಲಿರಿಸಿದ್ದಾರೆ. ಬೆಂಡೆ, ಚವಳಿ, ಬದನೆ , ಮೆಣಸು, ಉಳ್ಳಾಗಡ್ಡಿ, ಕೊತ್ತಂಬರಿ ಮುಂತಾದ ಬೆಳೆಗಳನ್ನು ಬೆಳೆಯುತ್ತಾರೆ. ಅದಕ್ಕೆ ನೀರಾವರಿಗಾಗಿ ಮಲಪ್ರಭಾ ನದಿಯಿಂದಲ್ಲದೆ ಕೃಷಿ ಹೊಂಡ ಕೂಡ ನಿರ್ಮಿಸಿಕೊಂಡಿದ್ದಾರೆ ಅಲ್ಲಿಯ ನೀರನ್ನೂ ಬಳಸಿಕೊಂಡು ಉತ್ತಮ ಲಾಭವನ್ನು ಪಡೆಯುತ್ತಿದ್ದಾರೆ

ಜಂಬು ಮತ್ತು ಲಿಂಬು ಸಸಿ ತಯಾರಿಕೆ : ಇವರು ಜಂಬು ನೇರಳೆ ಹಣ್ಣು ಮತ್ತು ಲಿಂಬೆ ಸಸಿಯನ್ನು ಬೀಜ ಹಾಕಿ ಸಸಿ ಬೆಳೆಸಿ  ಬೇರೆ ರೈತರಿಗೂ  ನೀಡುತ್ತಾರೆ.

ಇವರು ತಮ್ಮ ಎರಡು ಜೊತೆ ಎತ್ತುಗಳನ್ನು ಬಳಸಿ ಕೃಷಿ ಮಾಡುವುದರ ಜೊತೆಗೆ ಸ್ವಂತ  ಟ್ರ್ಯಾಕ್ಟರನ್ನು ಹೊಂದಿರುವರು. ಹೀಗಾಗಿ ಭೂಮಿ ಉಳುಮೆ ಮಾಡಲು ಟ್ರ್ಯಾಕ್ಟರ್‌ ಸಹಾಯಕವಾಗುತ್ತದೆ.

ಕೃಷಿಯನ್ನೇ ನಂಬಿಕೊಂಡು ಇಡೀ ಕುಟುಂಬದವರು ಅದರಲ್ಲಿ ತೊಡಗಿಕೊಳ್ಳುವ ಮೂಲಕ ಉತ್ತಮ ಕೃಷಿಗೆ ಮಾದರಿಯಾಗಿದ್ದಾರೆ. 

ಕುಟುಂಬ ಹಾಗೂ ಸಮಾಜದ ಆರೋಗ್ಯ ಉತ್ತಮವಾಗಿ ಇರಬೇಕೆಂಬ ಉದ್ದೇಶದಿಂದ ಎಲ್ಲ ಬೆಳೆಗಳನ್ನು ಸಾವಯವ ಗೊಬ್ಬರ ಹಾಕಿ ಬೆಳೆಯಲಾಗುತ್ತಿದೆ
– ಆಸಂಗೆಪ್ಪ ನಕ್ಕರಗುಂದಿ, ಸಾವಯವ ಕೃಷಿಕ, ಕಟಗಿನಹಳ್ಳಿ
ಬೆಳೆಗಳೊಂದಿ ಕೃಷಿಕ ಆಸಂಗೆಪ್ಪ ನಕ್ಕರಗುಂದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.