ADVERTISEMENT

ಮುಧೋಳ: ಮೌಲ್ಯ ವರ್ಧನೆಯಿಂದ ಬದುಕಿಗೆ ಸಿಹಿ ತಂದ ಗುಲಾಬಿ ಕೃಷಿ

ಮುಧೋಳ ತಾಲ್ಲೂಕಿನ ನಾಗರಾಳ ಗ್ರಾಮದ ಮಹಿಳೆ ಸುಮಿತ್ರಾ ಶ್ಯಾಂಡಗಿ ಕುಟುಂಬದ ಸಾಧನೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2026, 7:49 IST
Last Updated 2 ಜನವರಿ 2026, 7:49 IST
ಮುಧೋಳ ತಾಲ್ಲೂಕು ನಾಗರಾಳ ಗ್ರಾಮದ ಸುಮಿತ್ರಾ ಶ್ಯಾಂಡಗಿ ತಯಾರಿಸಿದ ಆಶೀರ್ವಾದ ಗುಲಕನ್ 
ಮುಧೋಳ ತಾಲ್ಲೂಕು ನಾಗರಾಳ ಗ್ರಾಮದ ಸುಮಿತ್ರಾ ಶ್ಯಾಂಡಗಿ ತಯಾರಿಸಿದ ಆಶೀರ್ವಾದ ಗುಲಕನ್    

ಮುಧೋಳ: ಸತತ ಪ್ರಯತ್ನ, ಅಧ್ಯಯನ, ಇಷ್ಟಪಟ್ಟು ಮಾಡುವ ಕೆಲಸ ಹಾಗೂ ಕುಟುಂಬದವರ ಸಹಕಾರ ಇದ್ದರೆ ಯಾವುದೂ ಕಷ್ಟವಲ್ಲ ಎಂಬುದನ್ನು ತಾಲ್ಲೂಕಿನ ನಾಗರಾಳ ಗ್ರಾಮದ ರೈತ ಮಹಿಳೆ ಸುಮಿತ್ರಾ ಶ್ಯಾಂಡಗಿ ಕುಟುಂಬ ಸಾಬೀತು ಪಡಿಸಿದೆ.

ಸುಮಿತ್ರಾ ಹಾಗೂ ಪತಿ ಮಹಾದೇವ 9ನೇ ತರಗತಿಯವರೆಗೆ ಓದಿದ್ದು, ಕೃಷಿಯಲ್ಲಿ ಬದುಕು ಕಂಡುಕೊಂಡಿದ್ದಾರೆ. ಸಮಗ್ರ ಕೃಷಿ ಹಾಗೂ ಕೃಷಿ ಉತ್ಪನ್ನಗಳ ಮೌಲ್ಯ ವರ್ಧನೆಯಿಂದ ಹೆಚ್ಚಿನ ಆದಾಯ ಗಳಿಸುತ್ತಿದ್ದಾರೆ. 

ಈ ಕುಟುಂಬಕ್ಕೆ ಎರಡು ಎಕರೆ ಜಮೀನು ಇದೆ. ಅದರಲ್ಲಿ ಒಂದು ಎಕರೆ ಜವಳು ಇರುವುದರಿಂದ ಅಲ್ಲಿ ಕಬ್ಬು ನಾಟಿ ಮಾಡಲಾಗಿದೆ. ಉಳಿದ ಒಂದು ಎಕರೆಯಲ್ಲಿ ಸುಮಿತ್ರಾ ಗುಲಾಬಿ ಕೃಷಿ ಮಾಡಿ ಉತ್ತಮ ಆದಾಯ ಗಳಿಸುತ್ತಿದ್ದಾರೆ.

ADVERTISEMENT

ಗುಲಕನ್ ಮಾಡಲು ಉಪಯೋಗವಾಗುವ ಮೀರಾ ಬ್ಲೂ ಹಾಗೂ ಬ್ಲಾಕ್ ಮ್ಯಾಜಿಕ್‌ ತಳಿಯ ಗುಲಾಬಿ ಬೆಳೆಯಲಾಗುತ್ತಿದೆ. ಒಂದು ಜೇನು ಪೆಟ್ಟಿಗೆಯನ್ನು ತೋಟಗಾರಿಕೆ ಇಲಾಖೆ ನೀಡಿದೆ. ಅರ್ಧದಷ್ಟು ಗುಲಾಬಿ ಹೂಗಳನ್ನು ಗುಲಕನ್ ತಯಾರಿಸಲು ಬಳಸುತ್ತಾರೆ. ಸ್ವಲ್ಪ ಹೂಗಳನ್ನು ಮಾರಾಟ ಮಾಡುತ್ತಾರೆ. ಗುಲಾಬಿ, ಜೇನು ತುಪ್ಪ, ಕೆಂಪು ಕಲ್ಲುಸಕ್ಕರೆ ಉಪಯೋಗಿಸಿ ಗುಲಕನ್ ತಯಾರಿಸಲಾಗುತ್ತಿದೆ. ಇದಕ್ಕೆ ‘ಆಶೀರ್ವಾದ್ ಗುಲಕನ್’ ಎಂದು ಬ್ರ್ಯಾಂಡ್‌ ನೇಮ್‌ ಇಡಲಾಗಿದೆ. ವಾರಕ್ಕೆ 3 ಕೆಜಿಗಳಷ್ಟು ಗುಲಕನ್‌ ಸಿದ್ಧವಾಗುತ್ತದೆ. ಈ ಗುಲಕನ್ ಸವಿಯುವಾಗ ಜೇನು ಹಾಗೂ ಗುಲಾಬಿ ಎಸಳನ್ನು ತಿಂದ ಅನುಭವ ಆಗುತ್ತದೆ. 

‘ಆರಂಭದಲ್ಲಿ ಗುಲಕನ್ ಮಾರಾಟ ಮಾಡುವುದು ಸವಾಲಾಗಿತ್ತು. ಸರ್ಕಾರಿ ಕಚೇರಿ, ಬ್ಯಾಂಕ್, ಕೃಷಿ ಮೇಳಗಳು ಮುಂತಾದ ಕಡೆಗಳೆಲ್ಲ ತಿರುಗಾಡಿ ಮಾರಾಟ ಮಾಡಲಾಗುತ್ತಿತ್ತು. ಈಗ ಮೊಬೈಲ್‌ ಮೂಲಕ ಹಾಗೂ ತೋಟಕ್ಕೆ ಗ್ರಾಹಕರೇ ಬಂದು ಕೊಳ್ಳುತ್ತಿದ್ದಾರೆ. ಪ್ರತಿ ಕೆ.ಜಿಗೆ ₹ 600 ದರವಿದೆ‘ ಎಂದು ಸುಮಿತ್ರಾ ತಿಳಿಸಿದರು.

ಗುಲಾಬಿ ಅಲ್ಲದೇ ಸುಗಂಧರಾಜ, ಸೇವಂತಿ, ಬಿಳಿ ಸೆವಂತಿ ಬೆಳೆಯುತ್ತಾರೆ. ತೋಟದಲ್ಲಿ ಶೇಂಗಾ, ಬೆಳ್ಳುಳ್ಳಿ, ಉಳ್ಳಾಗಡ್ಡಿ, ಗಜ್ಜರಿ, ಮೂಲಂಗಿ, ಡ್ರ್ಯಾಗನ್, ಪಪ್ಪಾಯಿ, ತೈವಾನ್ ಪಿಂಕ್ ತಳಿಯ 100 ಪೇರಲ ಹಣ್ಣಿನ ಗಿಡಗಳನ್ನು ನಾಟಿ ಮಾಡಲಾಗಿದ್ದು ಮುಂದಿನ ವರ್ಷದಿಂದ ಫಸಲು ನಿರೀಕ್ಷಿಸಲಾಗುತ್ತಿದೆ.

‘ಮೂರು ಜವಾರಿ ಆಕಳು, ಒಂದು ಎಚ್‍ಫ್ ಆಕಳು ಇದ್ದು ಇದರಿಂದ ಬರುವ ಹಾಲು, ಮೊಸರು ಹಾಗೂ ತೋಟದಲ್ಲಿ ಬೆಳೆಯುವ ಹೂಗಳನ್ನು ಶ್ರಾವಣ ಮಾಸ ಹಾಗೂ ಸಮಾರಂಭಗಳಲ್ಲಿ ಮಾರುತ್ತೇವೆ. ಗುಲಾಬಿಯನ್ನು ₹ 10ಕ್ಕೆ ಒಂದರಂತೆ ಮಹಾಲಿಂಗಪುರದಲ್ಲಿ ಮಾರಾಟ ಮಾಡುತ್ತೇವೆ. ಇದರಿಂದ ನಿತ್ಯ ₹ 900 ಆದಾಯ ಬರುತ್ತದೆ’ ಎಂದು ಅವರು ತಿಳಿಸಿದರು.

‘ಪತಿ ಮಹಾದೇವ ಶ್ಯಾಂಡಗಿ ಹೊಲದಲ್ಲಿ ಕೆಲಸ ಮಾಡುತ್ತಾರಲ್ಲದೇ, ಎರಡು ಎತ್ತುಗಳೊಂದಿಗೆ ಬೇರೆಯವರ ಹೊಲದಲ್ಲಿ ಬಾಡಿಗೆ ಕೆಲಸ ಮಾಡುತ್ತಾರೆ.  ಅತ್ತೆ ನಿಲಮ್ಮ, ಮಾವ ಜಯಪ್ಪ ಮನೆ, ಹೈನುಗಾರಿಕೆ ಸಂಭಾಳಿಸುತ್ತಾರೆ. ಮೂವರು ಪುತ್ರರಿದ್ದು, ಇಬ್ಬರು ಭಾರತೀಯ ಸೇನೆಯಲ್ಲಿ ಅಗ್ನಿವೀರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನೊಬ್ಬ ಪುತ್ರ ಪದವಿ ಶಿಕ್ಷಣ ಪಡೆಯುತ್ತ ಕೆಲಸಗಳಿಗೆ ನೆರವಾಗುತ್ತಾನೆ’ ಎಂದರು.

‘ನಮಗೆ ಆರು ಜೇನು ಪೆಟ್ಟಿಗೆಯ ಅವಶ್ಯಕತೆ ಇದೆ. ಗುಲಾಬಿ ಸಸಿ ನೆಡಲು ಹಣ ನೀಡುವುದಾಗಿ ತೋಟಗಾರಿಕೆ ಇಲಾಖೆ ತಿಳಿಸಿತ್ತಾದರೂ ನೀಡಿಲ್ಲ. ನಮ್ಮಂತಹ ಸಣ್ಣ ಹಿಡುವಳಿದಾರರಿಗೆ ಸೌಲಭ್ಯ ನೀಡಬೇಕು’ ಎಂದು ಹೇಳಿದರು.

ಮುಧೋಳ ತಾಲ್ಲೂಕು ನಾಗರಾಳ ಗ್ರಾಮದ ಸುಮಿತ್ರಾ ಶ್ಯಾಂಡಗಿ ಕುಟುಂಬ ಬೆಳೆದಿರುವ ಗುಲಾಬಿ ಹೂಗಳು
ಮುಧೋಳ ತಾಲ್ಲೂಕು ನಾಗರಾಳ ಗ್ರಾಮದ ಸುಮಿತ್ರಾ ಶ್ಯಾಂಡಗಿ ಕುಟುಂಬ ಬೆಳೆದಿರುವ ಥೈವಾನ್ ಪಿಂಕ್ ತಳಿಯ ಪೇರಲ ಹಣ್ಣು ಗಿಡಗಳು

ಗುಲಾಬಿ ಸಸಿ ನೆಟ್ಟು 7 ವರ್ಷ ಆಗಿರುವುದರಿಂದ ಈಗ ಹಣ ನೀಡಲು ಬರುವುದಿಲ್ಲ. ತೋಟಕ್ಕೆ ಭೇಟಿ ನೀಡಿ ಅವರಿಗೆ ಅಗತ್ಯವಿರುವ 5 ಜೇನು ಪೆಟ್ಟಿಗೆ ನೀಡಲಾಗುವುದು

-ಅಭಯಕುಮಾರ ಮೊರಬ ಸಹಾಯಕ ನಿರ್ದೇಶಕ ತೋಟಗಾರಿಕೆ ಇಲಾಖೆ ಮುಧೋಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.