ADVERTISEMENT

ಮುಧೋಳ | ಕಳ್ಳರ ಹಾವಳಿ: ಮಹಿಳೆಯರಿಂದ ರಾತ್ರಿ‌ ಗಸ್ತು

ಉದಯ ಕುಲಕರ್ಣಿ
Published 13 ಫೆಬ್ರುವರಿ 2025, 16:02 IST
Last Updated 13 ಫೆಬ್ರುವರಿ 2025, 16:02 IST
ಮುಧೋಳದ ಜಯನಗರ ಬಡಾವಣೆಯಲ್ಲಿ ಗಸ್ತು ತಿರುಗುತ್ತಿರುವ ಮಹಿಳೆಯರು
ಮುಧೋಳದ ಜಯನಗರ ಬಡಾವಣೆಯಲ್ಲಿ ಗಸ್ತು ತಿರುಗುತ್ತಿರುವ ಮಹಿಳೆಯರು   

ಮುಧೋಳ: ಪಟ್ಟಣದಲ್ಲಿ ಮನೆಗಳ್ಳರ ಹಾವಳಿ ಹೆಚ್ಚಾಗಿದ್ದು ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕಳ್ಳತನ ಮಾಡುತ್ತಿರುವ ಪ್ರಕರಣ ಹೆಚ್ಚಿದ ಹಿನ್ನೆಲೆಯಲ್ಲಿ ಕಳ್ಳರ ಹಾವಳಿ ತಡೆಗಟ್ಟಲು ‌ಜಯನಗರ ಬಡಾವಣೆಯಲ್ಲಿ ಮಹಿಳೆಯರು ಕೈಯಲ್ಲಿ‌ ಬಡಿಗೆಯೊಂದಿಗೆ ರಾತ್ರಿ ಪಹರೆ ನಡೆಸುತ್ತಿದ್ದಾರೆ.

20 ದಿನಗಳಿಂದ ಮುಧೋಳ‌ ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಭಾಗದಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ. ಕಳ್ಳರನ್ನು ಹೆಡೆಮುರಿ ಕಟ್ಟಲು ನಗರ ನಿವಾಸಿಗಳು, ವಿಶೇಷವಾಗಿ ಮಹಿಳೆಯರು ರಾತ್ರಿಪೂರ್ತಿ ತಮ್ಮ ತಮ್ಮ ಬಡಾವಣೆಗಳಲ್ಲಿ ಗಸ್ತು ತಿರುಗುತ್ತಿದ್ದಾರೆ.

ಜಯನಗರದಲ್ಲಿ ಒಂದು ವಾರದಿಂದ ಮಹಿಳೆಯರು ಗುಂಪು ಗುಂಪಾಗಿ ರಾತ್ರಿ ವೇಳೆ ಗಸ್ತು ತಿರುಗುತ್ತಿದ್ದಾರೆ. ಮಧ್ಯರಾತ್ರಿ 12.30ರಿಂದ ಬೆಳಗಿನ ಜಾವ 4 ಗಂಟೆವರೆಗೆ ಗಸ್ತು ತಿರುಗುತ್ತಿದ್ದಾರೆ.  ಮಹಿಳೆಯರಷ್ಟೇ ಅಲ್ಲದೆ ಹಲವು ದಿನಗಳಿಂದ ಪುರುಷರು‌ ಸಹ ರಾತ್ರಿ ಗಸ್ತು ಹೆಚ್ಚಿಸಿದ್ದಾರೆ. ಕೊಡಗ ಪ್ಲಾಟ್, ಸದಾಶಿವ ಕಾಲೊನಿ, ಯಡಹಳ್ಳಿ ಹಳೇ ಬೈ ಪಾಸ್ ರಸ್ತೆ ಸೇರಿದಂತೆ ಹಲವು ಭಾಗಗಳಲ್ಲಿ ರಾತ್ರಿ ಗಸ್ತು ಹೆಚ್ಚಿಸಿ ಪೊಲೀಸ್ ಇಲಾಖೆಗೆ ಸಹಕಾರ ನೀಡುತ್ತಿದ್ದಾರೆ.

ADVERTISEMENT

ಗಸ್ತು ತಿರುಗುವ ವೇಳೆ ಕಾಲೊನಿ ಜನರೆಲ್ಲ ಸೇರಿ ಸರದಿ ಹಾಕಿಕೊಂಡಿದ್ದಾರೆ. ಒಂದೊಂದು ದಿನ ಐದರಿಂದ ಆರು ಜನರ ತಂಡ ಗಸ್ತು ತಿರುಗುತ್ತಾರೆ. ಮರುದಿನ‌ ಮತ್ತೊಂದು ತಂಡ ಗಸ್ತು ನಡೆಸಿ ಸಾಮೂಹಿಕ‌ ಪಾಲ್ಗೊಳ್ಳುವಿಕೆ‌ ಮೂಲಕ ಒಗ್ಗಟ್ಟಿನಿಂದ ಗಸ್ತು ಕಾರ್ಯದಲ್ಲಿ‌ ತೊಡಗಿದ್ದಾರೆ.

ಕಳ್ಳರ ಹಾವಳಿ ತಡೆಗಟ್ಟಲು ಪಣತೊಟ್ಟಿರುವ ಸಾರ್ವಜನಿಕರು ತಮ್ಮ‌‌ ತಮ್ಮ ಬಡಾವಣೆಯಲ್ಲಿಯೇ ವಾಟ್ಸ್ ಆಪ್‌ ಗ್ರುಪ್ ರಚಿಸಿಕೊಂಡಿದ್ದಾರೆ. ರಾತ್ರಿವೇಳೆ ಗಸ್ತು ನಡೆಸುವ ತಂಡ ತಮ್ಮ ಫೋಟೊಗಳನ್ನು ರಾತ್ರಿ ವೇಳೆಯೇ ಗ್ರೂಪ್‌ನಲ್ಲಿ ಅಪ್ಲೋಡ್ ಮಾಡಿ‌ ಬಡಾವಣೆಯಲ್ಲಿ ಧೈರ್ಯದ ವಾತಾವರಣ ನಿರ್ಮಿಸುತ್ತಾರೆ. ರಾತ್ರಿವೇಳೆ‌ ನಡೆಯುವ ಪ್ರತಿಯೊಂದು ಸೂಕ್ಷ್ಮ ವಿಚಾರಗಳು ಈ ಗ್ರುಪ್‌ನಲ್ಲಿ ಚರ್ಚೆಯಾಗುತ್ತವೆ. ಮರುದಿನ ಅವುಗಳಿಗೆ ಕೈಗೊಳ್ಳಬೇಕಾದ ಕ್ರಮಗಳ‌ ಕುರಿತೂ ಮಾತುಕತೆಗಳು ನಡೆಸಲಾಗುತ್ತಿದ್ದು ಪ್ರತಿಯೊಬ್ಬರಲ್ಲೂ ಪರಸ್ಪರ ಸಂದೇಶ ವಿನಮಯಗಳಾಗುತ್ತಿವೆ.

ರಾತ್ರಿವೇಳೆ‌ ಗಸ್ತು ನಡೆಸುವುದು ಒಂದು ಕಾರ್ಯವಾದರೆ ಸಂಜೆವೇಳೆ‌ ಮಹಿಳೆಯರು‌‌‌, ಮಕ್ಕಳಾದಿಯಾಗಿ ಒಂದೆಡೆ‌ ಸಭೆ ಸೇರಿ ಅಂದಿನ ರಾತ್ರಿ ಕೈಗೊಳ್ಳುವ ನಿರ್ಧಾರದ‌ ಬಗ್ಗೆ ಚರ್ಚಿಸುತ್ತಾರೆ.

ಕಳ್ಳರ‌ ಹಾವಳಿ ಹೆಚ್ಚಾದಾಗಿನಿಂದ‌ ಹದ್ದಿನ ಕಣ್ಣಿಟ್ಟು ಕಾಯುತ್ತಿರುವ ಪೊಲೀಸ್ ಇಲಾಖೆ‌ ಪ್ರತಿಯೊಂದು ಬಡಾವಣೆಗೂ ‘ನೈಟ್ ರೌಂಡ್ಸ್’ ಹೆಚ್ಚಿಸಿದೆ.‌ ಸಾರ್ವಜನಿಕರ‌ ಸಹಕಾರದೊಂದಿಗೆ ಕಾರ್ಯಕ್ಕೆ ಇಳಿದಿರುವ ಇಲಾಖೆ‌ ಸಾರ್ವಜನಿಕರಿಗೆ ಅಗತ್ಯ ಸಲಹೆ ಸಹಕಾರ‌‌ ನೀಡುತ್ತಿದೆ.

‘ಕಳ್ಳರ ಹಾವಳಿಯಿಂದ ನಮ್ಮಲ್ಲಿ ಭಯದ ವಾತಾವರಣ ಹೆಚ್ಚಾಗಿತ್ತು. ಕಳ್ಳತನದ ಬಗ್ಗೆ ವದಂತಿಗಳು ಹರಿದಾಡುತ್ತಿದ್ದವು. ನಮ್ಮ ಕಾಲೊನಿಯಲ್ಲಿಯೇ ನಾವೇ ಗಸ್ತು ನಡೆಸುತ್ತಿರುವುದರಿಂದ‌ ಮನಸ್ಸಿನಲ್ಲಿ‌ ನಿರಾಳಭಾವ ಮೂಡಿದೆ’ ಎಂದು ಜಯನಗರದ ನಿವಾಸಿಗಳಾದ ಸುನೀತಾ ಶೇರಖಾನೆ, ರೇಖಾ ಶಿರೂರ, ರಚನಾ ಹೊಸಟ್ಟಿ, ಕಾದಂಬರಿ ಪಾಟೀಲ ಸಂತಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.