ADVERTISEMENT

ಮದಭಾವಿ ಗ್ರಾ.ಪಂ: ಕಾರ್ಯ ನಿರ್ವಹಿಸದ ಘನತ್ಯಾಜ್ಯ ವಿಲೇವಾರಿ ಘಟಕ

ಜನರಿಗೆ ತಾತ್ಕಾಲಿಕ ವಸತಿ ಸೌಲಭ್ಯ

ಪ್ರಜಾವಾಣಿ ವಿಶೇಷ
Published 25 ಮಾರ್ಚ್ 2025, 4:45 IST
Last Updated 25 ಮಾರ್ಚ್ 2025, 4:45 IST
ಮದಭಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾರಾಪುರ ಗ್ರಾಮದಲ್ಲಿರುವ ಕಾರ್ಯನಿರ್ವಹಿಸದ ಘನ ತ್ಯಾಜ್ಯ ವಿಲೇವಾರಿ ಘಟಕವನ್ನು ಜನರು ವಾಸ್ತವ್ಯಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ
ಮದಭಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾರಾಪುರ ಗ್ರಾಮದಲ್ಲಿರುವ ಕಾರ್ಯನಿರ್ವಹಿಸದ ಘನ ತ್ಯಾಜ್ಯ ವಿಲೇವಾರಿ ಘಟಕವನ್ನು ಜನರು ವಾಸ್ತವ್ಯಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ   

ಮಹಾಲಿಂಗಪುರ: ಸಮೀಪದ ಮದಭಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾರಾಪುರ ಗ್ರಾಮದಲ್ಲಿ ₹35 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ಘನತ್ಯಾಜ್ಯ ವಿಲೇವಾರಿ ಘಟಕ ಇದ್ದೂ ಇಲ್ಲದಂತಾಗಿದ್ದು, ತಾತ್ಕಾಲಿಕ ವಸತಿಗಾಗಿ ಬಳಕೆಯಾಗುತ್ತಿದೆ.

ಮದಭಾವಿ ಗ್ರಾಮ ಪಂಚಾಯಿತಿಯು ಮದಭಾವಿ, ಸಂಗಾನಟ್ಟಿ ಹಾಗೂ ಮಾರಾಪುರ ಗ್ರಾಮಗಳ ವ್ಯಾಪ್ತಿಯನ್ನು ಹೊಂದಿದೆ. 10 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಈ ಮೂರು ಗ್ರಾಮಗಳಲ್ಲಿ ಸಂಗ್ರಹಿಸಿದ ಕಸವನ್ನು ಸ್ಥಳೀಯವಾಗಿ ವಿಲೇವಾರಿ ಮಾಡಲು ಮಾರಾಪುರ ಗ್ರಾಮದ ಹೊರವಲಯದ ಬೀರಪ್ಪ ದೇವಸ್ಥಾನದ ಬಳಿ 2022ರಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲಾಗಿದೆ. ಆದರೆ, ಎರಡೂವರೆ ವರ್ಷದಿಂದ ಘಟಕ ಕಾರ್ಯ ನಿರ್ವಹಿಸದ ಹಿನ್ನೆಲೆ ಕಸವನ್ನು ವಿಲೇವಾರಿ ಮಾಡುತ್ತಿಲ್ಲ.

ಘಟಕದಲ್ಲಿರುವ ಶೌಚಾಲಯ ದುರಸ್ತಿಯಲ್ಲಿದೆ. ಘಟಕಕ್ಕೆ ಗೇಟ್ ಇಲ್ಲದ್ದರಿಂದ ಪತ್ರಾಸ್ ಇರಿಸಲಾಗಿದೆ. ಕಬ್ಬು ಕಟಾವು ಮಾಡಲು ಬೇರೆ ಬೇರೆ ಭಾಗದಿಂದ ಬಂದಿರುವ 24 ಜನರು ಇಲ್ಲಿ ವಾಸ್ತವ್ಯ ಹೂಡಿದ್ದಾರೆ. ಕಬ್ಬಿನ ಗ್ಯಾಂಗ್‍ಮನ್‍ ಒಬ್ಬರು ಇವರಿಗೆ ವಸತಿ ಸೌಲಭ್ಯ ಕಲ್ಪಿಸಿದ್ದಾರೆ.

ADVERTISEMENT

‘ಪತ್ನಿ ಸಮೇತರಾಗಿ ಇಲ್ಲಿ ಬಂದಿದ್ದೇವೆ. ಇಲ್ಲಿಯೇ ಅಡುಗೆ ಮಾಡಿಕೊಳ್ಳುತ್ತೇವೆ. ಇನ್ನೂ ನಾಲ್ಕೈದು ದಿನ ಇಲ್ಲೇ ಇದ್ದು ಕಬ್ಬು ಕಟಾವು ಮುಗಿಸಿಕೊಂಡು ಹೋಗುತ್ತೇವೆ’ ಎನ್ನುತ್ತಾರೆ ವಾಸ್ತವ್ಯ ಮಾಡಿರುವ ಇಂಚಗೇರಿ ಗ್ರಾಮದ ಉಮೇಶ ಬೆಳೇಗಾವ್.

ಮದಭಾವಿ ಗ್ರಾಮ ಪಂಚಾಯಿತಿಯಲ್ಲಿ ತ್ಯಾಜ್ಯ ವಿಲೇವಾರಿ ವಾಹನ ಇದೆ, ಇಬ್ಬರು ಸಿಬ್ಬಂದಿ ಇದ್ದಾರೆ. ಸಂಗ್ರಹಿಸಿದ ಕಸವನ್ನು ರಸ್ತೆ ಬದಿ ಇಲ್ಲವೆ ತಿಪ್ಪೆಗೆ ಹಾಕಲಾಗುತ್ತಿದೆ. ಹೀಗಾಗಿ, ಎಲ್ಲೆಂದರಲ್ಲಿ ಕಸದ ರಾಶಿ ಕಣ್ಣಿಗೆ ರಾಚುತ್ತದೆ. ಚರಂಡಿಗಳು ದುರ್ನಾತ ಬೀರುತ್ತಿದ್ದು, ಸಾಂಕ್ರಾಮಿಕ ರೋಗದ ಭೀತಿ ಗ್ರಾಮಸ್ಥರಲ್ಲಿ ಆವರಿಸಿದೆ.

ಮಾರಾಪುರ ಗ್ರಾಮದಲ್ಲಿರುವ ಘನ ತ್ಯಾಜ್ಯ ವಿಲೇವಾರಿ ಘಟಕವನ್ನು ಜನರು ವಾಸ್ತವ್ಯಕ್ಕೆ ಬಳಕೆ ಮಾಡಿಕೊಳ್ಳುತ್ತಿರುವುದು
ಘಟಕದ ಕಾಮಗಾರಿ ಮುಗಿದರೂ ಜಿಲ್ಲಾ ಪಂಚಾಯಿತಿಯಿಂದ ಗುತ್ತಿಗೆದಾರನಿಗೆ ಕಾಮಗಾರಿ ಬಿಲ್ ಪೂರ್ಣ ಪಾವತಿ ಆಗಿಲ್ಲ. ಹೀಗಾಗಿ ಘಟಕ ಆರಂಭಿಸಿಲ್ಲ. ಖಾಲಿ ಇರುವುದರಿಂದ ಜನ ಬಳಕೆ ಮಾಡಿಕೊಳ್ಳುತ್ತಿದ್ದಾರೆ.
-ಬಸವರಾಜ ನಾಗನೂರ, ಗ್ರಾಮ ಪಂಚಾಯಿತಿ ಅಧ್ಯಕ್ಷ ಮದಭಾವಿ
ಗ್ರಾಮ ಪಂಚಾಯಿತಿಗೆ ಘಟಕ ಹಸ್ತಾಂತರ ಆಗಿಲ್ಲ. ಮೂರು ಗ್ರಾಮಗಳಲ್ಲಿ ಕಸ ವಿಲೇವಾರಿ ಮಾಡುವುದು ದೊಡ್ಡ ಸಮಸ್ಯೆ ಆಗಿದೆ. ಗ್ರಾಮಸ್ಥರಿಂದ ಕಸ ಸಂಗ್ರಹಣೆ ಶುಲ್ಕ ಪಡೆಯುತ್ತಿಲ್ಲ
-ಜಿ.ಜಿ.ಕುಲಿಗೋಡ, ಪಿಡಿಒ ಮದಭಾವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.