
ಶಿರೂರ (ರಾಂಪುರ): ಬಾಗಲಕೋಟೆ ತಾಲ್ಲೂಕಿನ ಶಿರೂರ ಪಟ್ಟಣದಲ್ಲಿ ಲಿಂ.ಸಿದ್ಧಲಿಂಗ ಸ್ವಾಮೀಜಿ 55 ನೇ ಪುಣ್ಯಾರಾಧನೆ ಅಂಗವಾಗಿ ಶನಿವಾರ ಪಲ್ಲಕ್ಕಿ ಉತ್ಸವ ಭಕ್ತಿ-ಭಾವದೊಂದಿಗೆ ವಿಜೃಂಭಣೆಯಿಂದ ಜರುಗಿತು.
ಬೆಳಿಗ್ಗೆ 7 ಗಂಟೆಗೆ ಶಿವಯೋಗಾಶ್ರಮದಿಂದ ಕಳಸಾರತಿ ಹಿಡಿದ ಮಹಿಳೆಯರು, ವಿವಿಧ ವಾದ್ಯ ಮೇಳ, ವಿಧವಿಧ ಬೊಂಬೆ ಕುಣಿತದೊಂದಿಗೆ ಹೊರಟ ಪಲ್ಲಕ್ಕಿ ಉತ್ಸವದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹಾಯ್ದು ಸಂಜೆ ಹೊತ್ತಿಗೆ ಶ್ರೀಮಠ ತಲುಪಿತು.
ಶ್ರೀಮಠದಿಂದ ಸಿದ್ದೇಶ್ವರ ಪ್ರೌಢಶಾಲೆಯ ಮೈದಾನದಲ್ಲಿರುವ ಪೂಜ್ಯರ ಮಂದಿರಕ್ಕೆ ಆಗಮಿಸಿದ ಸಿದ್ಧಲಿಂಗ ಸ್ವಾಮೀಜಿ ಬೆಳ್ಳಿಮೂರ್ತಿಯುಳ್ಳ ಪಲ್ಲಕ್ಕಿಗೆ ಅಭಿನವ ಸಿದ್ಧಲಿಂಗ ಸ್ವಾಮೀಜಿ ಹಾಗೂ ಅನೇಕ ಶ್ರೀಗಳ ಸಮ್ಮುಖದಲ್ಲಿ ವಿವಿಧ ಪೂಜಾ ಕೈಂಕರ್ಯಗಳು, ಪುರವಂತರ ಸೇವೆ ಜರುಗಿದವು. ನೆರೆದಿದ್ದ ಪಟ್ಟಣದ ಭಕ್ತ ಸಮೂಹ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು.
ನಂತರ ಅಲ್ಲಿಂದ ಹೊರಟ ಪಲ್ಲಕ್ಕಿ ಉತ್ಸವದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಹಲಗೆ ಮೇಳ, ಕರಡಿಮಜಲು, ಡೊಳ್ಳು, ಬೊಂಬೆಗಳ ಕುಣಿತ ಜೊತೆಗೆ ಡಿಜೆ ಹಾಡಿಗೆ ಹೆಜ್ಜೆ ಹಾಕಿ ಕುಣಿದಾಡಿದ ಯುವ ಸಮೂಹದ ನೃತ್ಯ ಮೆರವಣಿಗೆಗೆ ಕಳೆತಂದವು. ಪಲ್ಲಕ್ಕಿ ಮನೆಗಳ ಮುಂದೆ ಬರುತ್ತಿದ್ದಂತೆ ಭಕ್ತರು ಪೂಜೆ ಸಲ್ಲಿಸಿ, ನೈವೇದ್ಯ ಸಮರ್ಪಿಸಿ ಭಕ್ತಿಯ ನಮನ ಸಲ್ಲಿಸಿದರು.
ಪಟ್ಟಣದ ಹಿರಿಯರು, ಹಾಲಿ ಹಾಗೂ ಮಾಜಿ ಸೈನಿಕರು, ಕೆಎಸ್ಆರ್ ಟಿಸಿ ನೌಕರರ ಸಂಘಟನೆಯ ಸದಸ್ಯರು, ಯುವಕರು, ಮಹಿಳೆಯರು ಪಟ್ಟಣದ ವಿವಿಧ ಸಂಘಟನೆಗಳ ಪ್ರಮುಖರು ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡಿದ್ದರು. ಶಾಂತಿ, ಸುವ್ಯವಸ್ಥೆಗಾಗಿ ಬಾಗಲಕೋಟೆ ಗ್ರಾಮೀಣ ಪೋಲಿಸ್ ಠಾಣೆಯಿಂದ ವ್ಯಾಪಕ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.