ADVERTISEMENT

3 ಲಕ್ಷಕ್ಕೂ ಹೆಚ್ಚು ಜನರಿಗಾಗಿ ಹುಡುಕಾಟ: ಸಮೀಕ್ಷೆ ಪೂರ್ಣಗೊಳಿಸಲು ಎರಡೇ ದಿನ ಬಾಕಿ

ಬಸವರಾಜ ಹವಾಲ್ದಾರ
Published 17 ಅಕ್ಟೋಬರ್ 2025, 3:11 IST
Last Updated 17 ಅಕ್ಟೋಬರ್ 2025, 3:11 IST
   

ಬಾಗಲಕೋಟೆ: ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಪೂರ್ಣಗೊಳಿಸಲು 48 ಗಂಟೆಗಳು ಬಾಕಿ ಉಳಿದಿವೆ. ಇನ್ನೂ 3.86 ಲಕ್ಷ ಜನರನ್ನು ಹುಡುಕುವ ಸವಾಲು ಸಮೀಕ್ಷಾದಾರರ ಮುಂದಿದೆ.

ಜಿಲ್ಲೆಯಲ್ಲಿ 22,81,377 ಜನರಿದ್ದಾರೆ ಎಂದು ಅಂದಾಜಿಸಲಾಗಿದೆ. ಸೆ. 15ರವರೆಗೆ 18,94,720 ಮಂದಿ ಸಮೀಕ್ಷೆಗೆ ಒಳಪಟ್ಟಿದ್ದಾರೆ. ಉಳಿದವರನ್ನು ಹುಡುಕುವ ಕಾರ್ಯ ನಡೆದಿದೆ.

ಯುಎಚ್‌ಐಡಿ ಸಂಖ್ಯೆ ಹಿಡಿದುಕೊಂಡು ಹುಡುಕಾಡಿದ್ದಾಯಿತು. ನಂತರ ಪಡಿತರ ಚೀಟಿ ಹಿಡಿದುಕೊಂಡು ಹುಡುಕಾಡಿದ್ದಾಯಿತು. ಈಗ 0 ರಿಂದ 6 ವರ್ಷದೊಳಗಿನ ಮಕ್ಕಳನ್ನು ಗುರಿಯಾಗಿಸಿಕೊಂಡು ಹುಡುಕಾಟ ಮಾಡಲಾಗುತ್ತಿದೆ. ಬೆಳಿಗ್ಗೆಯಿಂದ ಸಂಜೆಯವರೆಗೆ ತಿರುಗಿದರೂ ಹಲವು ಕಡೆಗಳಲ್ಲಿ ಜನರು ಸಿಗುತ್ತಲೇ ಇಲ್ಲ.

ADVERTISEMENT

ಮೀಟರ್ ಇದ್ದ ಎಲ್ಲ ಕಡೆಗಳಲ್ಲಿ ಯುಎಚ್‌ಐಡಿ ಸಂಖ್ಯೆ ನಮೂದಿಸಲಾಗಿತ್ತು. ಅದರಲ್ಲಿ ಕಚೇರಿ, ದೇವಸ್ಥಾನ, ಮಠ, ಅಂಗನವಾಡಿ ಕೇಂದ್ರ, ಶಾಲೆ ಸೇರಿದಂತೆ ಹಲವು ಕಟ್ಟಡಗಳಿದ್ದವು. ಅಲ್ಲಿ ಯಾರೂ ವಾಸಿಸದ್ದರಿಂದಾಗಿ ಅವುಗಳ ಸಮೀಕ್ಷೆಯಾಗಿಲ್ಲ ಎಂದು ತೋರಿಸುತ್ತದೆ.

ಪಡಿತರ ಚೀಟಿ ಆಧರಿಸಿ ಎರಡನೇ ಹಂತದಲ್ಲಿ ಮತ್ತೆ ಸಮೀಕ್ಷೆ ಆರಂಭಿಸಲಾಯಿತು. 2022ರಲ್ಲಿ ಪಡಿತರ ಚೀಟಿ ಕೊನೆಯದಾಗಿ ಅಪ್‌ಡೇಟ್‌ ಆಗಿದೆ. ಅದರಲ್ಲಿ ನಿಧನ ಹೊಂದಿದ ಸದಸ್ಯರ ಹೆಸರು ಡಿಲೀಟ್‌ ಆಗಿಲ್ಲ. ಹೀಗಾಗಿ ಜನರ ಸಂಖ್ಯೆ ಈಗಲೂ ಹೆಚ್ಚಿಗೆ ತೋರಿಸುತ್ತಿದೆ ಎನ್ನುವುದು ಸಮೀಕ್ಷಾದಾರರ ದೂರು.

ಇಳಕಲ್‌, ಹುನಗುಂದ, ಬಾದಾಮಿ ತಾಲ್ಲೂಕಿನಲ್ಲಿ ದುಡಿಯುವುದಕ್ಕಾಗಿ ವಲಸೆ ಹೋಗುವವರ ಸಂಖ್ಯೆ ಹೆಚ್ಚಿದೆ. ಹಲವು ಮನೆಗಳಿಗೆ ಬೀಗ ಹಾಕಲಾಗಿದೆ. ಅಂತಹ ಮನೆಗಳ ಸಮೀಕ್ಷೆ ಮಾಡಲು ಸಾಧ್ಯವಾಗಿಲ್ಲ. 

0 ದಿಂದ 6 ವರ್ಷದೊಳಗಿನ ಮಕ್ಕಳ ಸಮೀಕ್ಷೆಯಾಗಿದೆಯೇ ಇಲ್ಲ ಎಂಬುದನ್ನು ತಿಳಿದುಕೊಳ್ಳಲು ಅಂಗನವಾಡಿಗಳಿಗೆ ಸಮೀಕ್ಷೆದಾರರನ್ನು ಕಳುಹಿಸಲಾಗುತ್ತಿದೆ. ಮಕ್ಕಳ ಆಧಾರ್‌ ಕಾರ್ಡ್‌ ಇಲ್ಲದ್ದರಿಂದಾಗಿ ಪಾಲಕರ ಮೊಬೈಲ್ ಸಂಖ್ಯೆ ಹಾಕಿ ಪರಿಶೀಲನೆ ಮಾಡಲಾಗುತ್ತಿದೆ. ಆಧಾರ್‌ ಲಿಂಕ್‌ ನಂಬರ್ ಕೊಟ್ಟಿದ್ದರೆ ಗೊತ್ತಾಗುತ್ತದೆ. ಬೇರೆ ನಂಬರ್ ನೀಡಿದ್ದರೆ, ಮಗು ಸಮೀಕ್ಷೆಗೆ ಒಳಪಟ್ಟಿರುವುದು ಗೊತ್ತಾಗುತ್ತಿಲ್ಲ.

ಹಲವಾರು ಶಿಕ್ಷಕರು ಸಮೀಕ್ಷೆಗೆ ಹೋಗದೇ ಇನ್‌ ಆಕ್ಟಿವ್‌ ಆಗಿರುತ್ತಿದ್ದಾರೆ. ಅಂತಹವರ ವಿರುದ್ಧ ಕ್ರಮ ಕೈಗೊಳ್ಳದ್ದರಿಂದಾಗಿ ಹಲವು ಶಿಕ್ಷಕರು ಸಮೀಕ್ಷೆ ಹೋಗುತ್ತಿಲ್ಲ. ಅಂತಹ ಶಿಕ್ಷಕರ ಸಂಖ್ಯೆ ನಿತ್ಯ 2 ಸಾವಿರಕ್ಕೂ ಹೆಚ್ಚಿದೆ. ಅವರ ವಿರುದ್ಧ ಯಾವುದೇ ಕ್ರಮಗಳಾಗುತ್ತಿಲ್ಲ.

ಸಮೀಕ್ಷಾ ಕಾರ್ಯ ಭರದಿಂದ ಸಾಗಿದೆ. ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವ ವಿಶ್ವಾಸವಿದೆ
ಪಂಕಜಾ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ, ಬಾಗಲಕೋಟೆ