ಮುಧೋಳ: ‘ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಭ್ರಷ್ಟಾಚಾರಕ್ಕೆ ಮುಂದಾಗಿದೆ. ಹಗರಣಗಳನ್ನು ಮರೆಮಾಚಲು ಜನಪ್ರತಿನಿಧಿಗಳು ಜನರಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಇದರಿಂದಾಗಿ ಪ್ರವಾಹ ಸಂತ್ರಸ್ತರ ಗೋಳು ಕೇಳುವವರು ಇಲ್ಲದಂತಾಗಿದೆ’ ಎಂದು ಬಿಜೆಪಿ ಮುಖಂಡ ಅರುಣ ಕಾರಜೋಳ ಹೇಳಿದರು.
ತಾಲ್ಲೂಕಿನ ಮಿರ್ಜಿ ಗ್ರಾಮದಲ್ಲಿ ಶುಕ್ರವಾರ ಪ್ರವಾಹ ಸಂತ್ರಸ್ತರ ಸಮಸ್ಯೆ ಆಲಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹೆಚ್ಚು ಮಳೆಯಾಗಿ ಪ್ರವಾಹ ಉಂಟಾಗಿ ಘಟಪ್ರಭಾ ನದಿ ನೀರು ಗ್ರಾಮಗಳಿಗೆ ಹಲವು ಬಾರಿ ನುಗ್ಗಿದೆ. ಈ ಹಿಂದೆ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಇಲ್ಲಿನ ಸಂತ್ರಸ್ತರಿಗೆ ನೂರಾರು ಮನೆಗಳನ್ನು ನಿರ್ಮಿಸಿ ಅನುಕೂಲ ಕಲ್ಪಿಸಲಾಗಿತ್ತು. ಆದರೆ ಈಗಿನ ಸರ್ಕಾರ ಇದ್ಯಾವ ಸೌಲಭ್ಯ ಕಲ್ಪಿಸಲು ಸಂತ್ರಸ್ತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ’ ಎಂದರು.
‘ಪ್ರವಾಹದಂತಹ ಸಂದರ್ಭದಲ್ಲಿ ಸ್ಥಳೀಯ ನಾಯಕರು ಸ್ಥಳದಲ್ಲಿದ್ದು, ಸಮಸ್ಯೆಗಳ ನಿವಾರಣೆಗೆ ಮುಂದಾಗಬೇಕು. ಪ್ರವಾಹ ಸಂತ್ರಸ್ತರಿಗೆ ಶಾಶ್ವತ ಪರಿಹಾರ ಕಲ್ಪಿಸಿಕೊಡಬೇಕು.’ ಎಂದು ಒತ್ತಾಯಿಸಿದರು.
ಬಿಜೆಪಿ ಗ್ರಾಮೀಣ ಘಟಕ ಅಧ್ಯಕ್ಷ ಸಂಗಣ್ಣ ಕಾತರಕಿ, ಮೀನುಗಾರರ ಪ್ರಕೋಷ್ಟದ ರಾಜ್ಯ ಸಂಚಾಲಕ ನಾಗಪ್ಪ ಅಂಬಿ, ರೈತ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಮಳಲಿ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.