ರಬಕವಿ ಬನಹಟ್ಟಿ: ‘ನಗರಸಭೆಯ ಸಿಬ್ಬಂದಿ ಸರಿಯಾದ ಸಮಯಕ್ಕೆ ಕಾರ್ಯಾಲಯಕ್ಕೆ ಆಗಮಿಸುವುದರ ಜೊತೆಗೆ ನಗರಸಭೆಯ ಸದಸ್ಯರ ಮತ್ತು ಸಾರ್ವಜನಿಕರ ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು’ ಎಂದು ರಬಕವಿ ಬನಹಟ್ಟಿ ನಗರಸಭೆಯ ಅಧ್ಯಕ್ಷೆ ವಿದ್ಯಾ ಧಬಾಡಿ ಹೇಳಿದರು.
ರಬಕವಿ ಬನಹಟ್ಟಿ ನಗರಸಭೆಯ ಸಭಾಭವನದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.
ನಗರಸಭೆಯ ಪೌರಾಯುಕ್ತ ರಮೇಶ ಜಾಧವ ಮಾತನಾಡಿ, ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
‘ನಗರಸಭೆಯ ವ್ಯಾಪ್ತಿಯಲ್ಲಿ 150 ಕ್ಕೂ ಹೆಚ್ಚು ಉದ್ಯಾನಗಳಿವೆ. ಇವುಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಗಮನಹರಿಸಬೇಕು. ಅತಿಕ್ರಮಣ ಹೊಂದಿದ ಉದ್ಯಾನಗಳ ಕುರಿತು ಪರಿಶೀಲಿಸಬೇಕು. ಅವುಗಳನ್ನು ಮರಳಿ ನಗರಸಭೆ ಪಡೆದುಕೊಳ್ಳಬೇಕು’ ಎಂದು ನಗರಸಭೆಯ ಸದಸ್ಯ ಯಲ್ಲಪ್ಪ ಕಟಗಿ ತಿಳಿಸಿದರು.
ನಗರದಲ್ಲಿ ಬೀದಿ ನಾಯಿಗಳಿಂದ ಜನರಿಗೆ ತೊಂದರೆಯಾಗಿದೆ. ಅವುಗಳ ಕುರಿತು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸದಸ್ಯರು ಆಗ್ರಹಿಸಿದರು.
ಈಗಾಗಲೇ ಬೀದಿ ನಾಯಿಗಳ ಕಾಟ ತಪ್ಪಿಸುವ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಹಂತ ಹಂತವಾಗಿ ತೆಗೆದುಕೊಳ್ಳಲಾಗುತ್ತಿದೆ. ಅವುಗಳಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತದೆ. ಒಂದು ಬೀದಿ ನಾಯಿಯ ಸಂತಾನಹರಣಕ್ಕೆ ₹1,600 ದಷ್ಟು ಖರ್ಚಾಗುತ್ತದೆ. ರಾಜೀವ್ ಗಾಂಧಿ ವಸತಿ ಯೋಜನೆಯ ಅಡಿಯಲ್ಲಿ ಆನ್‌ಲೈನ್ ಮೂಲಕ ಜನರು ಅರ್ಜಿಗಳನ್ನು ಸಲ್ಲಿಸಬಹುದು//
2025-26ನೇ ಸಾಲಿನಲ್ಲಿ ಎಸ್‌ಎಫ್‌ಸಿ ಯೋಜನೆ ಅಡಿ ಶೇ 24.10, ಶೇ 7.25// ಯೋಜನೆಯ ಅಡಿಯಲ್ಲಿ ಫಲಾನುಭವಿಗಳ ಆಯ್ಕೆಗಾಗಿ 101 ಅರ್ಜಿಗಳು ಬಂದಿವೆ. ಇದರಲ್ಲಿ 59 ಅರ್ಜಿಗಳು ಅರ್ಹವಾಗಿವೆ. ಆದರೆ ಕೇವಲ ಐವತ್ತು ಫಲಾನುಭವಿಗಳಿಗೆ ಮಾತ್ರ ಯೋಜನೆ ಸೌಲಭ್ಯ ದೊರೆಯಲಿದೆ. ಹೆಚ್ಚುವರಿ ಅರ್ಹ ಫಲಾನುಭವಿಗಳಿಗೆ ಮುಂದಿನ ಬಾರಿ ನೀಡಲು ಸದಸ್ಯರು ತಿಳಿಸಿದರು.
ಸ್ಕ್ರ್ಯಾಪ್ ವಾಹನಗಳು, ಜೀವಿತಾವಧಿ ಮುಗಿದ ವಾಹನಗಳ ಮೌಲೀಕರಣ ಸೇರಿದಂತೆ ಹಲವಾರು ವಿಷಯಗಳಿಗೆ ಟೆಂಡರ್ ಕರೆಯಲು ಮತ್ತು ಬೇರೆ ವಿಷಯಗಳಿಗೆ ಸದಸ್ಯರು ಅನುಮೋದನೆ ಸೂಚಿಸಿದರು.
ನಗರಸಭಾ ಸದಸ್ಯರಾದ ಸಂಜಯ ತೆಗ್ಗಿ, ಶ‍್ರೀಶೈಲ ಬೀಳಗಿ, ಅರುಣ ಬುದ್ನಿ, ಬಸವರಾಜ ಗುಡೋಡಗಿ, ಚಿದಾನಂದ ಹೊರಟ್ಟಿ, ಪ್ರಭಾಕರ ಮುಳೆದ, ಶಶಿಕಲಾ ಸಾರವಾಡ ಸೇರಿದಂತೆ ಅನೇಕರು ಮಾತನಾಡಿದರು.
ಉಪಾಧ್ಯಕ್ಷೆ ದೀಪಾ ಗಾಡಿವಡ್ಡರ, ಸುನೀಲ ಬಬಲಾದಿ, ಬಾಬುರಾವ ಕಮತಗಿ, ಶೋಭಾ ಹೊಸಮನಿ, ಪ್ರಶಾಂತ ಪಾಟೀಲ, ಸುನೀಲ ಬಾಗೇವಾಡಿ, ಅಮಿರಖಾನ ಖಲೀಫಾ, ಮಹಾವೀರ ದೈಗೊಂಡ, ಭೀಮು ಬಾಡಗಿ, ಅಭಿನಂದನ ಸೋನಾರ, ಲಕ್ಷ್ಮಿ ತೊನಶ್ಯಾಳ, ಬಸವರಾಜ ಚಿಂಚಖಂಡಿ ಸೇರಿದಂತೆ ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.