
ರಬಕವಿ ಬನಹಟ್ಟಿ: ರಬಕವಿ ಬನಹಟ್ಟಿ ಅವಳಿ ನಗರಗಳು ತಾಲ್ಲೂಕು ಕೇಂದ್ರಗಳಾಗಿ ದಶಕಗಳ ಕಾಲ ಕಳೆದರೂ ಇಲ್ಲಿಯ ಕೆಲವು ಕಾರ್ಯಾಲಯಗಳು ಇದುವರೆಗೆ ಉನ್ನತ ದರ್ಜೆಗೆ ಏರದೆ ಇರುವುದರಿಂದ ತಾಲ್ಲೂಕಿನ ಜನರಿಗೆ ಬಹಳಷ್ಟು ಸಮಸ್ಯೆಯಾಗಿದೆ.
ರಬಕವಿ ಬನಹಟ್ಟಿ ಹಾಗೂ ಮಹಾಲಿಂಗಪುರ ಪ್ರಮುಖ ನಗರಗಳು ಸೇರಿದಂತೆ ಈ ಭಾಗದ ಗ್ರಾಮೀಣ ಜನರು ತಮ್ಮ ಕಾರ್ಯಗಳಿಗಾಗಿ ರಬಕವಿ ಬನಹಟ್ಟಿ, ತೇರದಾಳ ಹಾಗೂ ಜಮಖಂಡಿ ತಾಲ್ಲೂಕು ಕೇಂದ್ರಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರಬಕವಿ ಬನಹಟ್ಟಿ ತಾಲ್ಲೂಕು ಪಶು ಆಸ್ಪತ್ರೆ ಮೂಲ ಸೌಕರ್ಯಗಳಿಲ್ಲದೆ ಬಳಲುತ್ತಿದೆ.
ಬನಹಟ್ಟಿಯ ಬಸ್ ನಿಲ್ದಾಣದ ಎದುರುಗಡೆ ಇರುವ ಪಶು ಆಸ್ಪತ್ರೆ ಒಂದು ಚಿಕ್ಕದಾದ ಮತ್ತು 47 ವರ್ಷಗಳಷ್ಟು ಹಳೆಯದಾದ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಕಟ್ಟಡ ನಿರ್ಮಾಣಕ್ಕಾಗಿ ಸರ್ಕಾರದಿಂದ ₹ 50 ಲಕ್ಷ ಹಣ ಮಂಜೂರಾಗಿದೆ. ಆದರೆ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಸೂಕ್ತ ಸ್ಥಳದ ಕೊರತೆ ಉಂಟಾಗಿದೆ. ಆದಷ್ಟು ಬೇಗನೆ ಸ್ಥಳವನ್ನು ಹುಡುಕಿ ಕಟ್ಟಡ ನಿರ್ಮಾಣವಾಗದೆ ಹೋದರೆ ಈ ಹಣ ಕೂಡಾ ಸರ್ಕಾರಕ್ಕೆ ವಾಪಸ್ಸಾಗುವ ಸಾಧ್ಯತೆ ಇದೆ.
ರಬಕವಿ ಬನಹಟ್ಟಿ ಹಾಗೂ ತೇರದಾಳ ಸೇರಿದಂತೆ ಇಲ್ಲಿಅಂದಾಜು 72 ಸಾವಿರದಷ್ಟು ಜಾನುವಾರುಗಳು ಮತ್ತು 50 ಸಾವಿರದಷ್ಟು ಆಡು ಮತ್ತು ಕುರಿಗಳು ಇವೆ. ಇಷ್ಟೆಲ್ಲ ಜಾನುವಾರುಗಳಿದ್ದರೂ ಇವುಗಳನ್ನು ನೋಡಿಕೊಳ್ಳುವುದಕ್ಕಾಗಿ ಸೂಕ್ತ ಸಿಬ್ಬಂದಿಯ ಕೊರತೆಯನ್ನು ಎದುರಿಸಬೇಕಾಗಿದೆ ಎನ್ನುತ್ತಾರೆ ಇಲ್ಲಿನ ವೈದ್ಯಾಧಿಕಾರಿ ಡಾ. ಬಸವರಾಜ ಗೌಡರ.
ಪಕ್ಕದ ಜಮಖಂಡಿ ಮತ್ತು ಮುಧೋಳ ತಾಲ್ಲೂಕಿನಲ್ಲಿ ಇಷ್ಟೇ ಸಂಖ್ಯೆಯ ಜಾನುವಾರುಗಳು ಇದ್ದು, ಅಲ್ಲಿ ಹತ್ತಕ್ಕಿಂತ ಹೆಚ್ಚು ಜನ ಅಧಿಕಾರಿಗಳು ಇದ್ದಾರೆ. ಇಲ್ಲಿಯ ಆಸ್ಪತ್ರೆಯಲ್ಲಿ ಮುಖ್ಯ ಪಶು ವೈದ್ಯ ಆಡಳಿತ, ಜಾನುವಾರು ಅಧಿಕಾರಿ ಹಾಗೂ ಡಿ ದರ್ಜೆ ನೌಕರರ ನೇಮಕಾತಿ ಅಗತ್ಯವಾಗಿದೆ. ಸಿಬ್ಬಂದಿ ಕೊರತೆಯಿಂದಾಗಿ ಜಾನುವಾರುಗಳ ಬಗ್ಗೆ ಸರಿಯಾಗಿ ಗಮನ ನೀಡಲು ಸಾಧ್ಯವಾಗುತ್ತಿಲ್ಲ.
ಇಲ್ಲಿನ ವೈದ್ಯಾಧಿಕಾರಿಗಳಿಗೆ ವಾಹನದ ಸೌಲಭ್ಯ ಕೂಡಾ ಇಲ್ಲದಂತಾಗಿದೆ. ವೈದ್ಯಾಧಿಕಾರಿಗಳ ಕ್ಷೇತ್ರ ಭೇಟಿಗೆ, ಸಂಸ್ಥೆಗಳ ಪರಿಶೀಲನೆಗೆ ಮತ್ತು ಇಲಾಖೆಯ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ವಾಹನದ ಸೌಲಭ್ಯ ಇಲ್ಲದೆ ತೊಂದರೆಯಾಗಿದೆ. ಅದೇ ರೀತಿಯಾಗಿ ರಬಕವಿ ಬನಹಟ್ಟಿ ಹಾಗೂ ತೇರದಾಳ ತಾಲ್ಲೂಕಿನ ಜಾನುವಾರುಗಳ ಮತ್ತು ಇಲಾಖೆಯ ಮಾಹಿತಿಯನ್ನು ಆನ್ ಲೈನ್ ಮೂಲಕ ಕಳುಹಿಸುವುದಕ್ಕೂ ಸಿಬ್ಬಂದಿಯ ಕೊರತೆ ಇದೆ.
ಕೊರತೆಗಳ ಮಧ್ಯೆಯೂ ಇಲಾಖೆಯ ಪ್ರತಿಯೊಂದು ಕಾರ್ಯಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಪ್ರಯತ್ನಿಸಲಾಗುತ್ತಿದೆ.ಡಾ.ಬಸವರಾಜ ಗೌಡರ, ವೈದ್ಯಾಧಿಕಾರಿ
ರಬಕವಿ ಬನಹಟ್ಟಿ ತಾಲ್ಲೂಕು ಪಶು ಆಸ್ಪತ್ರೆಯಲ್ಲಿ ಅಗತ್ಯ ಸಿಬ್ಬಂದಿಯನ್ನು ನೇಮಕ ಮಾಡುವ ಮತ್ತು ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವ ನಿಟ್ಟಿನಲ್ಲಿ ಸರ್ಕಾರ ಗಮನ ನೀಡಬೇಕು. ಇದರಿಂದ ಇಲ್ಲಿನ ಜಾನುವಾರುಗಳಿಗೆ ಅನುಕೂಲವಾಗಲಿದೆ.ಸದಾಶಿವ ಬಂಗಿ ರೈತರು ಜಗದಾಳ ಗ್ರಾಮ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.