ಬಾಗಲಕೋಟೆ: ಸ್ಥಳೀಯವಾಗಿ ಹುಂಡಿ ಕಾಣಿಕೆ ವೈದ್ಯ ಎಂದೇ ಜನಜನಿತರಾಗಿರುವ ನಗರದ ತಜ್ಞ ವೈದ್ಯ ಡಾ.ಅಶೋಕ ಸೊನ್ನದ ಅವರಿಗೆ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯ ಗೌರವ ಸಂದಿದೆ.
ಮುಧೋಳ ತಾಲ್ಲೂಕು ಭಂಟನೂರಿನ ಡಾ.ಅಶೋಕ ಸೊನ್ನದ,ಅಮೆರಿಕದ ಮಿಚಿಗನ್ ರಾಜ್ಯದ ಸಮುದಾಯ ಆರೋಗ್ಯ ಕೇಂದ್ರದಲ್ಲಿ 38 ವರ್ಷಗಳ ಕಾಲ ತಜ್ಞ ವೈದ್ಯರಾಗಿ ಕೆಲಸ ಮಾಡಿರುವ 2010ರಲ್ಲಿ ಭಾರತಕ್ಕೆ ಮರಳಿದ್ದಾರೆ. ಆಗಿನಿಂದ ಹಳೆ ಬಾಗಲಕೋಟೆಯಲ್ಲಿ ತಾಯಿ ಪಾರ್ವತಿಬಾಯಿ ಹೆಸರಿನಲ್ಲಿ ಕ್ಲಿನಿಕ್ ನಡೆಸುತ್ತಿದ್ದಾರೆ.
ಹಣ ಪಡೆಯುವುದಿಲ್ಲ:ಡಾ.ಅಶೋಕ ಸೊನ್ನದ ಅವರ ಬಳಿ ಚಿಕಿತ್ಸೆ ಪಡೆದರೆ ಹಣ ಕೊಡುವಂತಿಲ್ಲ. ಅವರ ಸೇವೆ ತೃಪ್ತಿಯಾದರೆ ಮಾತ್ರ ಕ್ಲಿನಿಕ್‌ನ ಪ್ರವೇಶ ದ್ವಾರದಲ್ಲಿ ಇಟ್ಟಿರುವ ಕಾಣಿಕೆ ಹುಂಡಿಗೆ ನಿಮ್ಮ ಕೈಲಾದಷ್ಟು ದುಡ್ಡು ಹಾಕಬಹುದು. ಅದು ಕಡ್ಡಾಯವಲ್ಲ. ನೀವು ಹುಂಡಿಗೆ ಹಾಕಿದ ದುಡ್ಡನ್ನು ಅವರ ಉಪಯೋಗಕ್ಕೆ ಬಳಸುವುದಿಲ್ಲ. ಬದಲಿಗೆ ಮತ್ತೊಬ್ಬ ಬಡ ರೋಗಿಯ ಔಷಧಿ ಖರ್ಚಿಗೆ ಸಂದಾಯವಾಗುತ್ತದೆ.
ದಿನಕ್ಕೆ 10 ಮಂದಿಗೆ ತಪಾಸಣೆ:ಡಾ.ಅಶೋಕ ಅವರ ಕ್ಲಿನಿಕ್‌ನಲ್ಲಿ ದಿನಕ್ಕೆ 10 ರೋಗಿಗಳಿಗೆ ಮಾತ್ರ ತಪಾಸಣೆ ಹಾಗೂ ಚಿಕಿತ್ಸೆ ನೀಡಲಾಗುತ್ತದೆ. ರೋಗಿಯೊಬ್ಬರ ತಪಾಸಣೆ ಕಾರ್ಯ ಕನಿಷ್ಠ ಒಂದರಿಂದ ಒಂದೂವರೆ ಗಂಟೆ ನಡೆಯುತ್ತದೆ. ರೋಗಿ ಬಡವರಿದ್ದರೆ ಉಚಿತವಾಗಿ ಔಷಧಿ ನೀಡುತ್ತಾರೆ. ಮಧುಮೇಹ ಬಾರದಂತೆ ರೂಢಿಸಿಕೊಳ್ಳಬೇಕಾದ ಜೀವನ ಪದ್ಧತಿ ಬಗ್ಗೆ ಶಾಲಾ– ಕಾಲೇಜುಗಳಿಗೆ ತೆರಳಿ ಪೋಷಕರಲ್ಲಿ ಜಾಗೃತಿ ಮೂಡಿಸುತ್ತಾರೆ.
ಭಂಟನೂರಿನ ರಾಮಪ್ಪ ಸೊನ್ನದ ಹಾಗೂ ಪಾರ್ವತಿ ಬಾಯಿ ದಂಪತಿಯ 12 ಮಕ್ಕಳಲ್ಲಿ ಅಶೋಕ ಎಂಟನೆಯವರು. ಬಾಗಲಕೋಟೆಯ ಸಕ್ರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಪಿಯುಸಿ, ಹುಬ್ಬಳ್ಳಿಯ ಕಿಮ್ಸ್‌ನಲ್ಲಿ 1965ರಲ್ಲಿ ಎಂಬಿಬಿಎಸ್ ಮುಗಿಸಿದ್ದರು. ನಂತರ ಅಹಮದಾಬಾದ್‌ನಲ್ಲಿ ಎಂ.ಡಿ ಮುಗಿಸಿದ ಅಶೋಕ್, 1972ರಲ್ಲಿ ಅಮೆರಿಕಗೆ ತೆರಳಿ ಅಲ್ಲಿಯೇ ನೆಲೆ ನಿಂತಿದ್ದರು.
ಅಮೆರಿಕ ಪ್ರಜೆ ಐಲಿನ್ ಅವರನ್ನು ಮದುವೆಯಾಗಿದ್ದು, ದಂಪತಿಗೆ ನಾಲ್ವರು ಮಕ್ಕಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.