ADVERTISEMENT

ಒಳಮೀಸಲು | ಸಾಫ್ಟ್‌ವೇರ್ ಅಳವಡಿಕೆಗೆ ವಿಳಂಬ ವಿದ್ಯಾರ್ಥಿಗಳ ಪರದಾಟ

ಬಸವರಾಜ ಹವಾಲ್ದಾರ
Published 4 ನವೆಂಬರ್ 2025, 4:54 IST
Last Updated 4 ನವೆಂಬರ್ 2025, 4:54 IST
   

ಬಾಗಲಕೋಟೆ: ಪರಿಶಿಷ್ಟ ಜಾತಿಯವರಿಗೆ ಒಳ ಮೀಸಲು ಹಂಚಿಕೆ ಮಾಡಲಾಗಿದೆ. ಆದರೆ, ವಿಂಗಡಿಸಿರುವ ಪ್ರವರ್ಗಗಳ ಪ್ರಮಾಣಪತ್ರ ನೀಡದ್ದರಿಂದಾಗಿ ಬಿಇಡಿ ಅಧ್ಯಯನಕ್ಕೆ ಮುಂದಾಗಿರುವ ವಿದ್ಯಾರ್ಥಿಗಳು ಪ್ರವೇಶ ರದ್ದಾಗುವ ಆತಂಕ ಎದುರಿಸುತ್ತಿದ್ದಾರೆ.

ಬಿಇಡಿ ಅಧ್ಯಯನಕ್ಕೆ ಅರ್ಜಿ ಸಲ್ಲಿಸಲು ನ.4 ಕೊನೆ ದಿನವಾಗಿದೆ. ಪರಿಶಿಷ್ಟ ಜಾತಿ ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಾಗ ಜಾತಿಯ ನಂತರ ಪ್ರವರ್ಗ ಕೇಳುತ್ತದೆ. ಅದರಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರವರ್ಗಕ್ಕೆ ಅನುಗುಣವಾಗಿ ಎಸ್‌ಸಿಎ, ಎಸ್‌ಸಿಬಿ ಅಥವಾ ಎಸ್‌ಸಿಸಿ ಎಂದು ನಮೂದಿಸುತ್ತಿದ್ದಾರೆ.

ಮೀಸಲಾತಿ ಆದೇಶ ಹೊರಡಿಸಿರುವ ಸರ್ಕಾರ ಪ್ರಮಾಣಪತ್ರ ನೀಡಲು ಬೇಕಾದ ಸಾಫ್ಟ್‌ವೇರ್‌ ಅನ್ನು ಕಂದಾಯ ಇಲಾಖೆಗೆ ನೀಡಿಲ್ಲ. ಇದರ ಪರಿಣಾಮ ಅಧಿಕಾರಿಗಳು ಈಗಲೂ ಪ್ರವರ್ಗಗಳ ಬದಲಾಗಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಮಾತ್ರ ನೀಡುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳು ಪ್ರಮಾಣಪತ್ರಕ್ಕಾಗಿ ಕಂದಾಯ ಇಲಾಖೆಗೆ ಅಲೆದಾಡುವಂತಾಗಿದೆ.

ADVERTISEMENT

ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು, 101 ಜಾತಿಗಳ ಪೈಕಿ 98 ಜಾತಿಗಳನ್ನು ಪ್ರವರ್ಗ ಎಗೆ 16, ಪ್ರವರ್ಗ ಬಿಗೆ 19 ಜಾತಿಗಳು ಹಾಗೂ ಪ್ರವರ್ಗ ಸಿಗೆ 63 ಜಾತಿಗಳನ್ನು ವಿಂಗಡಿಸಿ ಎರಡೂವರೆ ತಿಂಗಳು ಕಳೆದಿದೆ. ಆದಿ ಆಂಧ್ರ, ಆದಿ ದ್ರಾವಿಡ, ಆದಿ ಕರ್ನಾಟಕ ಸಮುದಾಯದವರು ತಮ್ಮ ಮೂಲ ಜಾತಿ ನಮೂದಿಸಿ ‘ಪ್ರವರ್ಗ ಎ’ ಅಥವಾ ‘ಪ್ರವರ್ಗ ಬಿ’ ಅಡಿ ಮೀಸಲಾತಿ ಪಡೆಯಬಹುದು. ಮೂಲ ಜಾತಿ ನಮೂದಿಸದವರು ಪ್ರಮಾಣಪತ್ರ ಸಲ್ಲಿಸಿ ‘ಪ್ರವರ್ಗ ಎ’ ಅಥವಾ ‘ಪ್ರವರ್ಗ ಬಿ’ ಅಡಿ ಜಾತಿ ಪ್ರಮಾಣಪತ್ರ ಪಡೆಯಬಹುದು ಎಂದೂ ಆದೇಶದಲ್ಲಿ ತಿಳಿಸಲಾಗಿದೆ.

ಒಳ ಮೀಸಲು ಸೌಲಭ್ಯ ಪಡೆಯಲು ಪರಿಶಿಷ್ಟ ಜಾತಿಯವರು ವಿಂಗಡಿಸಲಾದ ಪ್ರವರ್ಗದಡಿ ಹೊಸದಾಗಿ ಜಾತಿ ಪ್ರಮಾಣಪತ್ರ ಪಡೆಯಬೇಕು. ಇದಕ್ಕೆ ಅಟಲ್‌ಜೀ ಜನಸ್ನೇಹಿ ಕೇಂದ್ರದಲ್ಲಿ ಸಾಫ್ಟ್‌ವೇರ್ ಅಳವಡಿಸಬೇಕು. ಆ ಕೆಲಸ ಆಗದ್ದರಿಂದ ಪ್ರವರ್ಗದಡಿ ಹೊಸ ಜಾತಿ ಪ್ರಮಾಣಪತ್ರ ನೀಡಲು ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ.

‘ಬಿಇಡಿ ಅಧ್ಯಯನಕ್ಕಾಗಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿದ್ದೇನೆ. ಅದರಲ್ಲಿ ಪ್ರವರ್ಗದ ವಿಭಾಗದಲ್ಲಿ ಎಸ್‌ಸಿಎ ಎಂದು ನಮೂದಿಸಿದ್ದೇನೆ. ಆದರೆ, ಕಂದಾಯ ಇಲಾಖೆಯಲ್ಲಿ ಆ ಪ್ರಮಾಣಪತ್ರ ನೀಡುತ್ತಿಲ್ಲ. ದಾಖಲೆ ಪರಿಶೀಲನೆ ವೇಳೆ ಏನು ಹೇಳಬೇಕು ಎಂದು ಗೊತ್ತಾಗುತ್ತಿಲ್ಲ. ಸೀಟು ಸಿಗದಿದ್ದರೆ, ಓದು ಅರ್ಧಕ್ಕೆ ನಿಲ್ಲಲಿದೆ’ ಎಂದು ವಿದ್ಯಾರ್ಥಿನಿ ರೇಣವ್ವ ಅಳಲು ತೋಡಿಕೊಂಡರು.

‘ವಿದ್ಯಾರ್ಥಿಗಳಿಗಷ್ಟೇ ಅಲ್ಲ, ನೌಕರಿ ಅರ್ಜಿ ಹಾಕುವವರಿಗೂ ತೊಂದರೆಯಾಗುತ್ತಿದೆ. ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಳಮೀಸಲಾತಿ ಅನ್ವಯಿಸದಿದ್ದರೆ, ಹಲವಾರು ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ. ಒಳಮೀಸಲಾತಿ ಪೂರ್ಣಪ್ರಮಾಣದಲ್ಲಿ ಜಾರಿಯಾದ ನಂತರವೇ ಭರ್ತಿ ಮಾಡಿಕೊಳ್ಳಬೇಕು’ ಎಂದು ಶಿವಾನಂದ ಟವಳಿ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.