ADVERTISEMENT

ಸಿದ್ದರಾಮಯ್ಯ ಜನ್ಮ ದಿನ: 325 ಬಸ್‌ ಬುಕಿಂಗ್‌, ಸಾರಿಗೆ ಸಂಸ್ಥೆಗೆ ₹39 ಲಕ್ಷ ಆದಾಯ

ಸಿದ್ದರಾಮಯ್ಯ ಜನ್ಮ ದಿನ ಕಾರ್ಯಕ್ರಮಕ್ಕೆ ಅಭಿಮಾನಿಗಳ ಪಯಣ; ಸಂಚಾರ ವ್ಯತ್ಯಯ

ಬಸವರಾಜ ಹವಾಲ್ದಾರ
Published 31 ಜುಲೈ 2022, 5:23 IST
Last Updated 31 ಜುಲೈ 2022, 5:23 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬಾಗಲಕೋಟೆ: ದಾವಣಗೆರೆಯಲ್ಲಿ ಆಗಸ್ಟ್‌ 3ರಂದು ನಡೆಯಲಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ 75ನೇ ಜನ್ಮ ದಿನ ಕಾರ್ಯಕ್ರಮಕ್ಕೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ 325 ಹೆಚ್ಚು ಬಸ್‌ಗಳನ್ನು ಬುಕಿಂಗ್‌ ಮಾಡಲಾಗಿದೆ. ಇನ್ನು ನೂರಾರು ಬಸ್‌ಗಳು ಬುಕಿಂಗ್‌ ಆಗುವ ನಿರೀಕ್ಷೆ ಇದೆ.

ಬಾಗಲಕೋಟೆ ಜಿಲ್ಲೆಯಲ್ಲಿ ಇಲ್ಲಿಯವರೆಗೆ 50 ಬಸ್‌ಗಳು ಬುಕಿಂಗ್‌ ಆಗಿವೆ. ಹಾವೇರಿಯಲ್ಲಿ 90, ಗದುಗಿನಲ್ಲಿ 85 ಹಾಗೂ ಧಾರವಾಡ ಜಿಲ್ಲೆಯಲ್ಲಿ 90 ಬಸ್‌ಗಳು ಬುಕಿಂಗ್‌ ಆಗಿವೆ. ಇದರಿಂದ ಸಂಸ್ಥೆಗೆ ₹39 ಲಕ್ಷ ಆದಾಯ ಬರಲಿದೆ.

ಶಕ್ತಿ ಪ್ರದರ್ಶನ: ಮುಂದಿನ ವಿಧಾನಸಭೆ ಚುನಾವಣೆಯ ಟಿಕೆಟ್‌ ಅಂತಿಮಗೊಳಿಸುವಲ್ಲಿ ಸಿದ್ದರಾಮಯ್ಯ ಅವರದ್ದು ನಿರ್ಣಾಯಕ ಪಾತ್ರ ಇರಲಿದೆ. ಜತೆಗೆ ಸರ್ಕಾರ ಬಂದರೆ ಮುಖ್ಯಮಂತ್ರಿಯೂ ಆಗುವ ಸಾಧ್ಯತೆಗಳಿವೆ. ಆದ್ದರಿಂದ ಅವರ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಕರೆದೊಯ್ಯುವ ಮೂಲಕ ಶಕ್ತಿ ಪ್ರದರ್ಶನಕ್ಕೆ ಜಿಲ್ಲೆಯ ಜನಪ್ರತಿನಿಧಿಗಳು, ಮುಖಂಡರು ಮುಂದಾಗಿದ್ದಾರೆ.

ಕಾರ್ಯಕರ್ತರನ್ನು ಕರೆದುಕೊಂಡು ಹೋಗಲು ಬಸ್‌ಗಳನ್ನು ಬುಕಿಂಗ್‌ ಮಾಡುತ್ತಿದ್ದಾರೆ. ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದಿಂದ ಐದಾರು ಸಾವಿರ ಕಾರ್ಯಕರ್ತರನ್ನು ಕರೆದುಕೊಂಡು ಹೋಗಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಸಿದ್ದರಾಮಯ್ಯ ಅವರ ಕ್ಷೇತ್ರವಾದ ಜಿಲ್ಲೆಯ ಬಾದಾಮಿ ವಿಧಾನಸಭಾ ಕ್ಷೇತ್ರದಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಹೊರಟ್ಟಿದ್ದಾರೆ. ಬಸ್‌ನಲ್ಲಿ ಹೊರಡುವಷ್ಟು ಸಂಖ್ಯೆಯಿಲ್ಲದ ಗ್ರಾಮಗಳ ಜನರು ಕ್ರೂಷರ್‌, ಟೆಂಪೊ ಮುಂತಾದ ವಾಹನಗಳಲ್ಲಿ ಹೊರಡಲಿದ್ದಾರೆ.

ಮುಖಂಡರು ತಮ್ಮ ಸ್ವಂತ ವಾಹನಗಳಲ್ಲಿ ಆಪ್ತರನ್ನು ಕರೆದುಕೊಂಡು ಹೊರಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ಕ್ರೂಷರ್‌ಗಳು ಬುಕಿಂಗ್‌ ಆಗಿರುವುದರಿಂದ ಶ್ರಾವಣದ ಪ್ರವಾಸ ಕೈಗೊಳ್ಳುವವರಿಗೆ ಆ.3ರಂದು ವಾಹನಗಳು ಸಿಗುತ್ತಿಲ್ಲ.

’ಕಾರ್ಯಕ್ರಮಕ್ಕೆ ಇನ್ನು ಮೂರು ದಿನಗಳಿವೆ. ಈಗಾಗಲೇ ಬಹಳಷ್ಟು ಮಂದಿ ಬಸ್‌ ಬುಕಿಂಗ್‌ ಬಗ್ಗೆ ವಿಚಾರಿಸಿಕೊಂಡು ಹೋಗಿದ್ದಾರೆ. ಇನ್ನಷ್ಟು ಬಸ್‌ಗಳು ಬುಕಿಂಗ್‌ ಆಗುವ ಸಾಧ್ಯತೆ ಇದೆ‘ ಎನ್ನುತ್ತಾರೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು.

ಸಂಚಾರ ವ್ಯತ್ಯಯ: ನೂರಾರು ಬಸ್‌ಗಳು ಸಿದ್ದರಾಮಯ್ಯ ಅವರ ಜನ್ಮ ದಿನ ಕಾರ್ಯಕ್ರಮಕ್ಕೆ ಬುಕಿಂಗ್‌ ಆಗಿರುವುದರಿಂದ ವಿವಿಧ ಮಾರ್ಗಗಳ ಬಸ್‌ ಸಂಚಾರದಲ್ಲಿ ವ್ಯತ್ಯಯವಾಗಬಹುದು. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿಯೇ ಆಗುವ ಸಾಧ್ಯತೆಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.