
ಮುಧೋಳ: ಹಿಂದಿನ ವರ್ಷಗಳ ಕಬ್ಬಿನ ಬಾಕಿ ಬಿಲ್ ಪಾವತಿಸಬೇಕು. ಪ್ರಸಕ್ತ ವರ್ಷ ಸರ್ಕಾರ ನಿಗದಿಪಡಿಸಿರುವ ಅವೈಜ್ಞಾನಿಕ ಹಾಗೂ ರೈತರಿಗೆ ಮಾರಕವಾಗಿರುವ ಬೆಲೆಯನ್ನು ನಾವು ಒಪ್ಪವುದಿಲ್ಲ. ನಮಗೆ ನ್ಯಾಯುತ ಬೆಲೆ ನೀಡಬೇಕು ಎಂದು ಆಗ್ರಹಿಸಿ ರೈತರು ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಮಂಗಳವಾರವೂ ಪ್ರತಿಭಟನೆ ನಡೆಸಿದರು.
ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸಂಜೆ 4.30 ರಿಂದ ರಾಜ್ಯ ಹೆದ್ದಾರಿಯನ್ನು ಬಂದ್ ಮಾಡಿದ್ದರು. ಮಂಗಳವಾರ ಬೆಳಿಗೆ 7 ಗಂಟೆ ಸುಮಾರಿಗೆ ನಗರದ ಹತ್ತಿರದ ಮಹಾಂಗಪುರ ಬೈಪಾಸ್ ರಸ್ತೆಯಲ್ಲಿ ಕಬ್ಬು ತುಂಬಿದ ಲಾರಿ ಚಕ್ರದ ಗಾಳಿ ತಗೆದು ನೆಲಕ್ಕೆ ಉರುಳಿಸಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೊಡಿಹಳ್ಳಿ ಚಂದ್ರಶೇಖರ ಮಾತನಾಡಿ, ಸರ್ಕಾರ ನ್ಯಾಯಯುತ ತೀರ್ಮಾನ ಕೈಗೊಂಡು ದರ ನೀಡುವವರೆಗೂ ನಮ್ಮ ಹೋರಾಟ ನಿರಂತರಾಗಿರುತ್ತದೆ. ವೈಜ್ಞಾನಿಕವಾಗಿ ಪರಿಶೀಲನೆಗೊಳ್ಳದ ರಿಕವರಿಯನ್ನು ಸಿದ್ದರಾಮಯ್ಯನವರ ಸರ್ಕಾರ ಹೇಗೆ ಒಪ್ಪಿಕೊಳ್ಳುತ್ತೆ. ಇದನ್ನು ನೋಡಿದರೆ ಸರ್ಕಾರ ಯಾವ ಲಾಬಿಗೆ ಮಣಿದಿದೆ?, ಪ್ರಧಾನಿ ನರೇಂದ್ರ ಮೋದಿ ಎಲೆಕ್ಷನ್ ಬಂದಾಗ ಮಾತ್ರ ಎಫ್‌ಆರ್‌ಪಿ ಹೆಚ್ಚಿಗೆ ಮಾಡುತ್ತಿದ್ದಾರೆ. ಇದಕ್ಕೆ ಮಾನದಂಡವೇನಿದೆ ಎಂದು ಪ್ರಶ್ನೆಯಿಸಿದರು.
₹3300 ದರ: ಬೆಳಗಾವಿ ಜಿಲ್ಲೆಯಲ್ಲಿ ಕೇವಲ 9 ಕಾರ್ಖಾನೆಗಳಲ್ಲಿ ಮಾತ್ರ 11.25 ಇಳುವರಿ ಬರುತ್ತದೆ. ಸಿದ್ದರಾಮಯ್ಯನವರು 9 ಕಾರ್ಖಾನೆ ದರವನ್ನು ದೇಶಾದ್ಯಂತ ಪ್ರಚಾರ ಮಾಡುತ್ತಿದ್ದೀರಿ. ಕೂಡಲೇ ಸರ್ಕಾರ ಇದನ್ನು ನಿಲ್ಲಿಸಬೇಕು. 2013 ರಲ್ಲಿ ಸುವರ್ಣ ಸೌಧದ ಎದುರಲ್ಲಿ ಇದೇ ರೀತಿ ಚಳುವಳಿ ನಡೆಯುತ್ತಿದ್ದ ಸಮಯದಲ್ಲಿ ವಿಠ್ಠಲ ಅರಭಾವಿ ಎಂಬ ರೈತ ಮರಣ ಹೊಂದಿದಾಗ ಇದೇ ಸಿದ್ದರಾಮಯ್ಯ ಕಾರ್ಖಾನೆಯವರು ಪ್ರತಿ ಟನ್ ಕಬ್ಬಿಗೆ 150 ಹಾಗೂ ಸರ್ಕಾರ 350 ಕೊಡುತ್ತೇವೆ ಎಂದು ಘೋಷಣೆ ಮಾಡಿದ್ದೀರಿ ಇಂದು ಸಹ ಅದೇ ರೀತಿಯ ಬದ್ಧತೆ ತೋರಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರ ಕಬ್ಬಿನ ದರದ ಆದೇಶ ಪ್ರತಿಯನ್ನು ಚಂದ್ರಶೇಖರ ಹಾಗೂ ರೈತ ಮುಖಂಡರು ಸುಟ್ಟು ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಬಸವಂತ ಕಾಂಬಳೆ,ದುಂಡಪ್ಪ ಯರಗಟ್ಟಿ, ಸುಭಾಷ ಶಿರಬೂರ, ಮುತ್ತಪ್ಪ ಕೋಮಾರ, ಈರಪ್ಪ ಹಂಚಿನಾಳ, ಮಹೇಶಗೌಡ ಪಾಟೀಲ, ಹನಮಂತ ಬಿರಾದಾರ ಪಾಟೀಲ, ಸುರೇಶ ಚಿಚಂಲಿ, ಸುರೇಶ ಡವಳೇಶ್ವರ, ಈರಪ್ಪ ಹಂಚಿನಾಳ, ರಾಚಪ್ಪ ಕಲ್ಲೋಳಿ, ಮುಂತಾದವರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.