ADVERTISEMENT

ಮುಧೋಳ | ಕಬ್ಬಿನ ದರ ವಿವಾದ ಸುಖಾಂತ್ಯ

ಕಾರ್ಖಾನೆಗಳ ಆಡಳಿತ ಮಂಡಳಿಗಳೊಂದಿಗೆ ಮುಖ್ಯಮಂತ್ರಿ ಸಭೆ ; ಭರವಸೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2022, 6:19 IST
Last Updated 22 ನವೆಂಬರ್ 2022, 6:19 IST
ಮುಧೋಳದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಕಬ್ಬು ದರಕ್ಕಾಗಿ ನಡೆದ ಸಭೆಯಲ್ಲಿ ಮುಖಂಡ ಬಸವಂತ ಕಾಂಬಳೆ ಮಾತನಾಡಿದರು
ಮುಧೋಳದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಕಬ್ಬು ದರಕ್ಕಾಗಿ ನಡೆದ ಸಭೆಯಲ್ಲಿ ಮುಖಂಡ ಬಸವಂತ ಕಾಂಬಳೆ ಮಾತನಾಡಿದರು   

ಮುಧೋಳ: ಕಬ್ಬು ದರ ನಿಗದಿಗಾಗಿ55 ದಿನಗಳಿಂದ ನಡೆಯುತ್ತಿದ್ದ ಕಾರ್ಖಾನೆ ಆಡಳಿತ ಮಂಡಳಿ ಹಾಗೂ ರೈತ ಸಂಘದ ನಡುವೆ ನಡೆಯುತ್ತಿದ್ದ ಹಗ್ಗ ಜಗ್ಗಾಟ ಸೋಮವಾರ ಸಂಜೆ ಬಗೆಹರಿಯಿತು. ಮಂಗಳವಾರದಿಂದ ಕಬ್ಬು ಅರಿಯುವ ಕಾರ್ಯ ನಡೆಯಲಿದೆ.

ಸಂಗೊಳ್ಳಿ ರಾಯಣ್ಣ ವೃತ್ತದ ಗಡದನ್ನವರ ವೇದಿಕೆಯಲ್ಲಿ ‌ಹೆಚ್ಚುವರಿ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಎಸ್ ಪಿ ಜಯಪ್ರಕಾಶ, ಉಪವಿಭಾಗಾಧಿಕಾರಿ ಡಾ.ಸಿದ್ದು ಹುಲ್ಲೋಳ್ಳಿ ಮಾತನಾಡಿ, ಕಬ್ಬು ಮತ್ತು ಸಕ್ಕರೆ ಅಭಿವೃದ್ಧಿ ನಿರ್ದೇಶನಾಲಯ ಸೂಚಿಸಿದ ಪ್ರತಿ ಟನ್‌ಗೆ ₹2,850 ಕೊಡಿಸುವುದಕ್ಕೆ ಸಂಬಂಧಿಸಿದಂತೆ ಕಾರ್ಖಾನೆಗಳ ಆಡಳಿತ ಮಂಡಳಿಗಳೊಂದಿಗೆ ಮುಖ್ಯಮಂತ್ರಿ ಸಭೆ ನಡೆಸಲಿದ್ದಾರೆ. ಪ್ರತಿ ಟನ್‌ಗೆ ₹2,850 ನೀಡುವಂತೆ ಮಾಡುತ್ತಾರೆ. ರೈತರು ಆತಂಕ ಪಡಬೇಕಾಗಿಲ್ಲ ಸರ್ಕಾರದ ಮೇಲೆ ನಂಬಿಕೆ ಇಟ್ಟು ಕಾರ್ಖಾನೆ ಆರಂಭಿಸಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ರೈತ ಸಂಘದ ಮುಖಂಡರಾದ ಬಸವಂತ ಕಾಂಬಳೆ, ಈರಪ್ಪ ಹಂಚಿನಾಳ ಮಾತನಾಡಿ, ₹2,850 ಅನ್ನು ಕಬ್ಬು ಕಟಾವು ಆದ 15 ದಿನಗಳಲ್ಲಿ ಪಾವತಿಸಬೇಕು. 2021-22 ಸಾಲಿಗೆ ಸಮೀರವಾಡಿ ಸಕ್ಕರೆ ಕಾರ್ಖಾನೆಯವರು ಪ್ರತಿ ಟನ್ ಕಬ್ಬಿಗೆ ₹62 ಘೋಷಿಸಿದಂತೆ ಇನ್ನುಳಿದ ಕಾರ್ಖಾನೆಗಳುವರು ಘೋಷಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ರೈತ ಮುಖಂಡರಾದ ಸಂಗಪ್ಪ ನಾಗರಡ್ಡಿ, ದುಂಡಪ್ಪ ಯರಗಟ್ಟಿ, ಸುಭಾಷ ಶಿರಬೂರ, ಮಹೇಶ ಪಾಟೀಲ, ವೆಂಕಣ್ಣ ಮಳಲಿ, ರುದ್ರಪ್ಪ ಅಡವಿ, ಡಿಎಸ್ ಪಿ ಪಾಂಡುರಂಗಯ್ಯ, ಸಿಪಿಐ ಅಯ್ಯನಗೌಡ ಪಾಟೀಲ, ತಹಶೀಲ್ದಾರ್ ವಿನೋದ‌ ಹತ್ತಳ್ಳಿ ಇದ್ದರು.

ರೈತರ ನಡುವೆಯೇ ಗೊಂದಲ, ವಾಗ್ವಾದ

ಬಾಗಲಕೋಟೆ: ತಾಲ್ಲೂಕಿನ ಗದ್ದನಕೇರಿ ಬಳಿ ಸಕ್ಕರೆ ಕಾರ್ಖಾನೆ ಆರಂಭಿಸಲು ಕ್ರಮಕೈಗೊಳ್ಳಬೇಕು ಎಂದು ರೈತರು ಸೋಮವಾರ ಪ್ರತಿಭಟನೆ ಆರಂಭಿಸಿದರು. ಆಗ ರೈತರ ನಡುವೆಯೇ ಬಂದ್‌ಗೆ ಸಂಬಂಧಿಸಿದಂತೆ ಗೊಂದಲ ಉಂಟಾಗಿ, ವಾಗ್ವಾದ ನಡೆಯಿತು.

ಮನವಿ ಸಲ್ಲಿಸೋಣ ಎಂದು ಕರೆದುಕೊಂಡು ಬಂದ ಪ್ರತಿಭಟನೆ ಮಾಡುತ್ತಿದ್ದಾರೆ. ಕಬ್ಬಿನ ಬೆಲೆಯನ್ನೂ ನಿಗದಿ ಮಾಡಿಲ್ಲ. ಮೊದಲು ಬೆಲೆ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.

ಬೆಲೆ ನಿಗದಿ ಮಾಡದೆ ಕಾರ್ಖಾನೆ ಆರಂಭಿಸುವುದಕ್ಕೆ ನಮ್ಮ ಒಪ್ಪಿಗೆ ಇಲ್ಲ ಎಂದರು. ಆಗ ಜಿಲ್ಲಾಧಿಕಾರಿ ಮನವಿ ಸಲ್ಲಿಸೋಣ ನಡೆಯಿರಿ ಎಂದು ಎಲ್ಲರೂ ಹೊರಟು ಹೋದರು. ಹತ್ತು ನಿಮಿಷದಲ್ಲಿಯೇ ರಸ್ತೆ ತಡೆ ಅಂತ್ಯಗೊಂಡಿತು.

ಬೆಳಿಗ್ಗೆ ಪ್ರಭುಲಿಂಗೇಶ್ವರ ಹಾಗೂ ನಿರಾಣಿ ಸಕ್ಕರೆ ಕಾರ್ಖಾನೆ ವ್ಯಾಪ್ತಿಯ ರೈತರು, ಕಬ್ಬು ನುರಿಯುವಿಕೆ ಆರಂಭವಾಗದಿರುವುದರಿಂದ ರೈತರು ತೊಂದರೆ ಎದುರಿಸುತ್ತಿದ್ದಾರೆ. ಕಬ್ಬು ಬೆಳೆ ಒಣಗುತ್ತಿದೆ. ಆದ್ದರಿಂದ ಕಾರ್ಖಾನೆ ಆರಂಭಕ್ಕೆ ಕ್ರಮಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.