ತೇರದಾಳ: ಬಾಗಲಕೋಟೆ ಜಿಲ್ಲೆಯನ್ನು ಕೃಷ್ಣಾ ನದಿ ಪ್ರವೇಶ ಮಾಡುವ ಮೊದಲ ಗ್ರಾಮವಾದ ತಮದಡ್ಡಿ ಗ್ರಾಮದಲ್ಲಿಗ ಮತ್ತೊಮ್ಮೆ ಪ್ರವಾಹ ಭೀತಿ ಆರಂಭವಾಗಿದೆ. ನೆರೆಯ ಮಹಾರಾಷ್ಟ್ರದಲ್ಲಿ ಮಳೆ ಹೆಚ್ಚಾದ್ದರಿಂದ ನದಿ ತುಂಬಿ ಹರಿಯುತ್ತಿದೆ. ಆದರೆ ಸಕರ್ಾರ ಈ ಗ್ರಾಮವನ್ನು 2008ರಲ್ಲಿ ಮುಳುಗಡೆ ಗ್ರಾಮವೆಂದು ಘೋಷಿಸಲಾಗಿದ್ದರು ಸಹ ಇಲ್ಲಿಯವರೆಗೆ ಶಾಶ್ವತ ಸ್ಥಳಾಂತರ ಮಾಡುವ ಬಗ್ಗೆ ಕ್ರಮ ಜಾರಿಯಾಗಿಲ್ಲ.
2005ರಲ್ಲಿ ಮೊದಲ ಭಾರಿ ಪ್ರವಾಹ ಬಾಧಿತವಾದ ಸಂದರ್ಭದಲ್ಲಿ ಗ್ರಾಮಸ್ಥರ ಸಂಕಷ್ಟಕ್ಕೆ ಅವರ ಸಂಬಂಧಿಕರು ಅವರಿಗೆ ಆಸರೆ ನೀಡಿದರು. ಸರ್ಕಾರ ಕಾಳಜಿ ಕೇಂದ್ರಗಳ ಮೂಲಕ ವ್ಯವಸ್ಥೆ ಕೈಗೊಂಡಿತು. ಆದರೆ ನಾಲ್ಕಾರು ಬಾರಿ ಪ್ರವಾಹ ಮರುಕಳಿಸಿದಾಗ ನೆಂಟರಿಷ್ಟರ ಸಹಾಯ ಪಡೆದು ಅವರಿಗೆ ಹೊರೆಯಾಗಲು ಗ್ರಾಮಸ್ಥರು ತುಸು ಬೇಸರಿಸಿಕೊಂಡರು
ಸರ್ಕಾರ ಕಾಳಜಿ ಕೇಂದ್ರಗಳಿಗೆ ಜಾನುವಾರುಗಳನ್ನು, ಗ್ರಾಮಸ್ಥರನ್ನು ಸಾಗಿಸಿ ವ್ಯವಸ್ಥೆ ಮಾಡುವುದು ಮುಂದುವರಿಯಿತು. ಸರ್ಕಾರ ಮುಳುಗಡೆ ಗ್ರಾಮವೆಂದು ಘೋಷಣೆ, 2012ರಲ್ಲಿ ಗ್ರಾಮವನ್ನು ಸ್ಥಳಾಂತರಕ್ಕೆ ಪಕ್ಕದ ಹಳಿಂಗಳಿ ಗುಡ್ಡದಲ್ಲಿ ಪುನರ್ವಸತಿ ಕೇಂದ್ರ ನಿರ್ಮಾಣಕ್ಕೆ ಸ್ಥಳ ಗುರುತಿಸಿದ ನಂತರ ಜಾಗ ವಿವಾದವೆದ್ದು ಹಲವು ವರ್ಷಗಳಿಂದ ಪ್ರಕರಣ ನ್ಯಾಯಾಲಯದಲ್ಲಿದೆ. ಆಗ ಗ್ರಾಮಸ್ಥರಿಗೆ ಮುಳುಗಡೆ ಪರಿಹಾರದ ಹಣವನ್ನು ಸರ್ಕಾರ ನೀಡಿದೆ. ಆದರೆ ಪುನರ್ವಸತಿ ಜಾಗದ ವಿವಾದವನ್ನು ಗಂಭೀರವಾಗಿ ಪರಿಗಣಿಸದೆ, ಇತ್ಯರ್ಥಗೊಳಿಸಲು ಕ್ರಮ ಕೈಗೊಳ್ಳದೆ ಇರುವುದು ಸಂತ್ರಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
2012ರಲ್ಲಿ ಬಿಡುಗಡೆ ಮಾಡಿದ ಮುಳುಗಡೆ ಪರಿಹಾರದ ಹಣ ನೀಡಿದ್ದಾಗಲೇ ಪುನರ್ವಸತಿ ಕೇಂದ್ರವನ್ನು ನಿರ್ಮಾಣ ಮಾಡಿದ್ದರೆ ಪರಿಹಾರದ ಹಣದಲ್ಲಿ ಸಂತ್ರಸ್ಥರು ಅನುಕೂಲವಾದ ರೀತಿಯಲ್ಲಿ ಮನೆಗಳನ್ನಾದರು ನಿರ್ಮಿಸಿಕೊಳ್ಳುತ್ತಿದ್ದರು. ಆ ಹಣ ಈಗ ಖರ್ಚಾಗಿದೆ, ಮನೆ ಕಟ್ಟಲು ಬೇಕಾದ ಸಾಮಗ್ರಿಗಳ ಬೆಲೆ ಈಗ ನಾಲ್ಕು ಪಟ್ಟು ಹೆಚ್ಚಾಗಿದೆ. ಆಗ ನೀಡಿರುವ ಪರಿಹಾರದ ಮೊತ್ತ ಈಗ ಯಾವುದಕ್ಕೂ ಸಾಲುವುದಿಲ್ಲ. ಈಗಿರುವ ಸಾಮಗ್ರಿಗಳ ಬೆಲೆಗನುಗುಣವಾಗಿ ಪರಿಹಾರವನ್ನು ಮತ್ತೊಮ್ಮೆ ನೀಡಬೇಕು ಹಾಗೂ ಪುನರ್ವಸತಿಗಾಗಿ ಗುರುತಿಸಿದ ಜಾಗದ ವಿವಾದ ನ್ಯಾಯಾಲಯದಲ್ಲಿದ್ದರೆ ಬೇರೆಡೆ ಜಾಗ ಕೊಡಬೇಕು ಎಂದು ಗ್ರಾಮದ ಯುವ ಮುಖಂಡ ನಂದೇಪ್ಪ ನಂದೇಪ್ಪನವರ ಆಗ್ರಹಿಸಿದರು.
ಮತಕ್ಷೇತ್ರ ವ್ಯಾಪ್ತಿಯ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಜಿಲ್ಲಾಧಿಕಾರಿಗಳಿಗೆ ಶಾಶ್ವತ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲು ಗ್ರಾಮಸ್ಥರು ತಿಳಿಸುತ್ತಲೇ ಬಂದಿದ್ದಾರೆ. ಕ್ರಮ ಮಾತ್ರ ಕೈಗೊಂಡಿಲ್ಲ.
2019ರಲ್ಲಿ ಪ್ರವಾಹ ಬಂದಿದ್ದಾಗ ಗ್ರಾಮದ ಮನೆಯೊಂದು ಕುಸಿದು ಬಿದ್ದು ಅದರಡಿ ಸಿಲುಕಿ ಮಗುವೊಂದು ಪ್ರಾಣ ಕಳೆದುಕೊಂಡಿತ್ತು. ವಿಪರ್ಯಾವೆಂದರೆ ಇಲ್ಲಿಯವರೆಗೆ ಆ ಮನೆಗೆ ಪರಿಹಾರ ದೊರೆತಿಲ್ಲ. ಜೊತೆಗೆ ಮೃತ ಮಗುವಿನ ವೈದ್ಯಕೀಯ ವೆಚ್ಚ ಕೂಡ ಸರ್ಕಾರ ಭರಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.
‘ಕಳೆದ ವರ್ಷ ತೀವೃ ಬರಗಾಲ ಬಿದ್ದಾಗ ಬೆಳೆ ಪರಿಹಾರ ಕೇಳಿದರೆ ತಮದಡ್ಡಿ ಮುಳುಗಡೆ ಗ್ರಾಮವೆಂದು ಘೋಷಿಸಿದ್ದರಿಂದ ಅದನ್ನು ನೀಡಲು ಅಧಿಕಾರಿಗಳು ನಿರಾಕರಿಸಿದ್ದಾರೆ’ ಎಂದು ಗ್ರಾಮಸ್ಥು ದೂರುತ್ತಾರೆ. ಒಮ್ಮೆ ಪ್ರವಾಹ ಬಂದು ಇಳಿಕೆಯಾದ ಮೇಲೆ ಅಲ್ಲಿ ಬೆಳೆಯುವ ಬೆಳೆಯ ಪ್ರಮಾಣ ಶೇ 75ರಷ್ಟು ಇಳಿಕೆಯಾಗುತ್ತದೆ. ಅದರ ನಡುವೆ ಬರಗಾಲ ಬಿದ್ದಾಗಲಂತೂ ಗ್ರಾಮದ ರೈತರ ಪಾಡು ಅಯೋಮಯ.
‘ತಮದಡ್ಡಿ ಗ್ರಾಮದ ಪುನರ್ವಸತಿ ಕೇಂದ್ರಕ್ಕೆ ಅವಶ್ಯವಿದ್ದ ಜಾಗವನ್ನು ಕಂದಾಯ ಇಲಾಖೆಯಿಂದ ನೀಡಲಾಗಿದ್ದು, ಅದರ ವಿವಾದ ಈಗ ನ್ಯಾಯಾಲಯದಲ್ಲಿದ್ದು, ಈ ಪ್ರಕರಣ ಬಗೆ ಹರಿದ ನಂತರ ಕೆಎನ್ಎನ್ಎಲ್‌ನವರು ಪುನರ್ವಸತಿ ಮಾಡಿಕೊಡಬೇಕು. ಮುಳುಗಡೆ ಗ್ರಾಮಕ್ಕೆ ಕಂದಾಯ ಇಲಾಖೆ ಬೇರೆಡೆ ಜಾಗ ನೀಡಬೇಕೆಂದರೆ ಲಭ್ಯವಿಲ್ಲ’ ಎಂದು ರಬಕವಿ-ಬನಹಟ್ಟಿ ತಹಶೀಲ್ದಾರ್ ಗಿರೀಶ ಸ್ವಾದಿ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.