
ತೇರದಾಳ: ಸರ್ಕಾರಿ ಶಾಲೆಯ ಶಿಕ್ಷಕರಿಗೆ ಪಾಠ ಬೋಧನೆಗಿಂತ ಇತರೆ ಕೆಲಸಗಳ ಭಾರ ಹೆಚ್ಚಿವೆ. ಹೀಗಿದ್ದೂ ಶಾಲಾ ಆವರಣ ಶುಚಿಗೊಳಿಸಲು, ಶೌಚಾಲಯ ಶುಚಿತ್ವ ಕಾಪಾಡಲು ಮಕ್ಕಳನ್ನು ಬಳಸಿದರೆ ಕೂಡ ತಪ್ಪಾಗುತ್ತದೆ, ಇಲಾಖೆ ಹಾಗೂ ಪಾಲಕರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಹಾಗಂತ ಶಿಕ್ಷಕರು ಈ ಕಾರ್ಯ ಮಾಡಲು ಅಸಾಧ್ಯ. ಹೀಗಾಗಿ ತೇರದಾಳದ ಶಾಲೆಯೊಂದಕ್ಕೆ ಸೆಕ್ಯುರಿಟಿ ಗಾರ್ಡ ನೇಮಿಸಿ ಆತನಿಂದ ಉಳಿದ ಕೆಲಸ ಮಾಡಿಸಿ ತಮ್ಮ ಸ್ವಂತ ಹಣದಿಂದ ಆತನಿಗೆ ವೇತನ ಪಾವತಿಸುವ ಅಪರೂಪದ ಕೆಲಸವನ್ನು ಮುಖ್ಯಗುರು ಮಾಡುತ್ತಿದ್ದಾರೆ.
ಪಟ್ಟಣದ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಶಾಲೆ ಮಾರುಕಟ್ಟೆಯ ಮಧ್ಯದಲ್ಲಿಯೇ ಇದೆ. ಹೀಗಾಗಿ ಅವರಿವರು ಶಾಲಾ ಆವರಣದೊಳಗೆ ಬಂದು ಹೋಗುವುದು ಸಾಮಾನ್ಯವಾಗಿತ್ತು. ಅದು ಹೇಳಿ ಕೇಳಿ ಹೆಣ್ಣುಮಕ್ಕಳ ಶಾಲೆ. ಬಾಲಕರ ಶಾಲೆಯೊಂದಿಗೆ ವಿಲೀನವಾಗಿದ್ದರೂ ಬಾಲಕಿಯರ ಸಂಖ್ಯೆಯೇ ಹೆಚ್ಚಾಗಿದೆ. ಇದೇ ಆವರಣದಲ್ಲಿನ ಕಟ್ಟಡದಲ್ಲಿ ಉನ್ನತೀಕರಿಸಿದ ಪ್ರೌಢಶಾಲೆ ಕೂಡ ಆರಂಭವಾಗಿದೆ. ಇಲ್ಲಿನ ಮಕ್ಕಳ ರಕ್ಷಣೆ ಜೊತೆಗೆ ಶಾಲೆ ಸ್ವಚ್ಛವಾಗಿಡಲು ಒಬ್ಬ ಕೆಲಸಗಾರನ ಅವಶ್ಯಕತೆಯಿತ್ತು. ಆದರೆ ಸರ್ಕಾರದಲ್ಲಿ ಪ್ರಾಥಮಿಕ ಶಾಲೆಯಲ್ಲಿ ಇದಕ್ಕೆ ಅವಕಾಶ ಇಲ್ಲದ್ದನ್ನು ಮನಗಂಡು ಶಾಲಾ ಮುಖ್ಯಗುರು ಕೆ.ಡಿ.ಮಾಲಗಾಂವಿ ತಮ್ಮ ಸ್ವಂತ ಹಣದಿಂದ ಆತನಿಗೆ ಪ್ರತಿ ತಿಂಗಳು ವೇತನ ನೀಡುವ ಭರವಸೆ ನೀಡಿ ಕೆಲಸಕ್ಕೆ ನೇಮಿಸಿದ್ದಾರೆ.
ಇದರಿಂದ ಇದೇ ಆವರಣದ ಕೊನೆಯಲ್ಲಿರುವ ಅಂಗನವಾಡಿ ಮಕ್ಕಳನ್ನು ಕರೆಯಲು ಬರುತ್ತಿದ್ದ ಪಾಲಕರ ಬೈಕ್, ಬೇಕಾಬಿಟ್ಟಿ ಪಾರ್ಕಿಂಗ್ ಮಾಡುವ ಬೈಕ್ ಸವಾರರ ಉಪಟಳ ತಪ್ಪಿದೆ. ಈತ ಶಾಲಾ ಆವರಣ ಕಾಯುವುದು ಮಾತ್ರವಲ್ಲ. ಶೌಚಾಲಯ ಶುಚಿಗೊಳಿಸುವ ಕಾರ್ಯವನ್ನೂ ಮಾಡುತ್ತಾನೆ. ಈತ ಸೆಕ್ಯುರಿಟಿ ಬಟ್ಟೆ ಧರಿಸಿ ಗೇಟ್ ಬಳಿ ಕುಳಿತಿದ್ದನ್ನು ಕಂಡರೆ ಇದಾವುದೊ ಖಾಸಗಿ ಶಾಲೆಯಿರಬೇಕೆಂಬ ಭಾವನೆ ಬರಬಹುದು. ಭರಮಪ್ಪ ಶೇಡಬಾಳ ಎಂಬ ವ್ಯಕ್ತಿ ಸೆಕ್ಯುರಿಟಿ ಕೆಲಸ ಮಾಡುತ್ತಿದ್ದು, ಈತನಿಗೆ ಚಂದ್ರು ಎಂಬ ವ್ಯಕ್ತಿ ಸೆಕ್ಯುರಿಟಿ ಸಮವಸ್ತ್ರ, ಟೋಪಿಯನ್ನು ಕಾಣಿಕೆಯಾಗಿ ನೀಡಿದ್ದಾರೆ. ಈ ಕಾರ್ಯವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ.ಬಸಣ್ಣವರ ಕೂಡ ಮೆಚ್ಚಿಕೊಂಡಿದ್ದಾರೆ ಎನ್ನುತ್ತಾರೆ ಕೆ.ಡಿ.ಮಾಲಗಾಂವಿ.
`ಶಾಲೆ ಗೇಟ್ ತೆಗೆದು ಸಾಕಷ್ಟು ಪಾಲಕರು ಶಾಲಾ ಆವರಣದೊಳಗೆ ಹೋಗುತ್ತಿದ್ದರು ಈ ಸೆಕ್ಯುರಿಟಿ ಬಂದಾಗಿನಿಂದ ಇದು ಬಂದ್ ಆಗಿದೆ. ಸಂತೆ ದಿನವಂತೂ ಶಾಲಾ ಆವರಣವನ್ನು ಕೆಲವರು ಪಾರ್ಕಿಂಗ್ ಎಂಬಂತೆ ಬಳಸುತ್ತಿದ್ದರು. ಈಗ ಹಾಗಿಲ್ಲ. ಇದರಿಂದ ನಮ್ಮ ಮಕ್ಕಳು ಖುಷಿಯಾಗಿದ್ದಾರೆ ಎನ್ನುತ್ತಾರೆ ಪಾಲಕರಲ್ಲಿ ಒಬ್ಬರಾದ ಬಸಮ್ಮ ಧರೆನ್ನವರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.