ರಬಕವಿ ಬನಹಟ್ಟಿ: ಮುಂಬರುವ ದಿನಗಳಲ್ಲಿ ಬನಹಟ್ಟಿ ಸಹಕಾರ ನೂಲಿನ ಗಿರಣಿಯ ಪುನಶ್ಚೇತನಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ನೂಲಿನ ಗಿರಣಿಯ ಅಧ್ಯಕ್ಷ ಶ್ರೀಶೈಲ ಬೀಳಗಿ ತಿಳಿಸಿದರು.
ಭಾನುವಾರ ಇಲ್ಲಿನ ನೂಲಿನ ಗಿರಣಿಯ ಆವರಣದಲ್ಲಿ ನೂಲಿನ ಗಿರಣಿಯ 51ನೇ ವಾರ್ಷಿಕ ಸಭೆಯಲ್ಲಿ ಅವರು ಮಾತನಾಡಿದರು.
‘ಗಿರಣಿಗೆ ಅಗತ್ಯವಾಗಿ ಬೇಕಾಗಿರುವುದು ಭೂಮಿ. ಈಗಾಗಲೇ ಗಿರಣಿಯ ಭೂಮಿಯ ಲೀಸ್ ಅವಧಿಯನ್ನು ಮುಂದುವರಿಸಲು ಎಲ್ಲ ರೀತಿಯ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಲೀಸ್ ಅವಧಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಸೋಲಾರ್ ಅಳವಡಿಕೆಯ ಜೊತೆಗೆ ಇನ್ನಷ್ಟು ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸಾಧ್ಯ’ ಎಂದು ಅವರು ತಿಳಿಸಿದರು.
ನೂಲಿನ ಗಿರಣಿಯ ಉಪಾಧ್ಯಕ್ಷ ರಾಜೇಂದ್ರ ಭದ್ರನವರ ಮಾತನಾಡಿ, ‘ಪ್ರಸ್ತುತ ಸಾಲಿನಲ್ಲಿ ನೂಲಿನ ಗಿರಣಿಯು ₹ 74.08 ಲಕ್ಷ ಲಾಭ ಗಳಿಸಿದೆ. ರಾಜ್ಯದಲ್ಲಿ ನೇಕಾರರಿಂದ ಸ್ಥಾಪಿಸಲ್ಪಟ್ಟ ಏಕೈಕ ನೂಲಿನ ಗಿರಣಿ ಇದಾಗಿದೆ. ಸರ್ಕಾರದಲ್ಲಿ ಬದಲಾದ ಕಾನೂನು ಮತ್ತು ಮಾರುಕಟ್ಟೆಯಲ್ಲಿ ನಿರ್ಮಾಣಗೊಂಡ ಸವಾಲುಗಳನ್ನು ಎದುರಿಸಿ ನೂಲಿನ ಗಿರಣಿ ಅಸ್ತಿತ್ವದಲ್ಲಿ ಉಳಿದುಕೊಂಡು ಬಂದಿದೆ’ ಎಂದರು.
ಮುಖಂಡರಾದ ರಾಜಶೇಖರ ಸೋರಗಾವಿ ಮಾತನಾಡಿ, ‘ನೂಲಿನ ಗಿರಣಿ, ನೇಕಾರಿಕೆ ವೃತ್ತಿ ಮತ್ತು ನೇಕಾರರು ಉಳಿಯಬೇಕಾದರೆ ಚಿಂತನೆಗಳು ಅಗತ್ಯ. ಸರ್ಕಾರದ ಸಹಾಯ ಕೂಡ ಮುಖ್ಯ’ ಎಂದರು.
ನಗರದ ಮುಖಂಡ ಡಿ.ಎಸ್. ಮಾಚಕನೂರ ಮಾತನಾಡಿ, ‘ರಾಜ್ಯದಲ್ಲಿ ಹದಿನಾಲ್ಕು ನೂಲಿನ ಗಿರಣಿಗಳಲ್ಲಿ ಸದ್ಯ ಬನಹಟ್ಟಿ ನೂಲಿನ ಗಿರಣಿ ಮಾತ್ರ ಕಾರ್ಯ ನಿರ್ವಹಿಸುತ್ತಿದೆ’ ಎಂದರು.
ಶಂಕರ ಜುಂಜಪ್ಪನವರ, ಭೀಮಶಿ ಮಗದುಮ್, ರಾಮಣ್ಣ ಭದ್ರನವರ, ವ್ಯವಸ್ಥಾಪಕ ನಿರ್ದೇಶಕ ಕೆ.ಆರ್. ಪ್ರಭಾಕರ ಮಾತನಾಡಿದರು.
ನೂಲಿನ ಗಿರಣಿಯ ಆಡಳಿತ ಮಂಡಳಿಯ ಸದಸ್ಯರು, ನಗರದ ಪ್ರಮುಖರಾದ ಸಿದ್ದನಗೌಡ ಪಾಟೀಲ, ಬಸವರಾಜ ಭದ್ರನವರ, ಬಸವಂತ ಜಾಡಗೌಡ, ಸುರೇಶ ಕೋಲಾರ, ಸಿದ್ರಾಮ ಸವದತ್ತಿ, ಗಂಗಪ್ಪ ಮುಗತಿ, ಶ‍್ರೀಶೈಲ ಧಬಾಡಿ, ಗಂಗಾಧರ ಕೊಟಕನೂರ, ಮಲ್ಲಿಕಾರ್ಜುನ ಬಾಣಕಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.