ಬಾಗಲಕೋಟೆ: ಜಿಲ್ಲೆಯಲ್ಲಿ ಒಂದಲ್ಲ, ಎರಡು ಜವಳಿ ಪಾರ್ಕ್ ಸ್ಥಾಪನೆಯ ಘೋಷಣೆಯಾಗಿವೆ. ಆದರೆ, ಒಂದೂ ಕಾರ್ಯಾರಂಭ ಮಾಡಿಲ್ಲ. ಪರಿಣಾಮ ಜಿಲ್ಲೆಯ ನೇಕಾರರಿಗೆ ಸರಿಯಾದ ಕೆಲಸ, ಉತ್ಪನ್ನಗಳಿಗೆ ಬೆಲೆ ಸಿಗದೇ ಸಂಕಷ್ಟ ಎದುರಿಸುತ್ತಿದ್ದಾರೆ.
ಜಿಲ್ಲೆಯ ಬಾಗಲಕೋಟೆ, ಹುನಗುಂದ, ಜಮಖಂಡಿ, ತೇರದಾಳ ವಿಧಾನಸಭಾ ಕ್ಷೇತ್ರ ಸೇರಿದಂತೆ ಬಹುತೇಕ ಕಡೆಗಳಲ್ಲಿ ನೇಕಾರರಿದ್ದಾರೆ. ಇಳಕಲ್ ಸೀರೆ, ಗುಳೇದಗುಡ್ಡ ಖಣ, ರಬಕವಿ–ಬನಹಟ್ಟಿಯಲ್ಲಿನ ಸೀರೆಗಳು ವಿಶ್ವ ಪ್ರಸಿದ್ಧವಾಗಿವೆ. ಆದರೆ, ಸರಿಯಾದ ಮಾರುಕಟ್ಟೆ ಸೌಲಭ್ಯ ದೊರೆಯದ್ದರಿಂದ ದಿನದಿಂದ ದಿನಕ್ಕೆ ನೇಕಾರಿಕೆ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ.
ಹಿಂದೆ ಕಾಂಗ್ರೆಸ್ ಸರ್ಕಾರವಿದ್ದಾಗ ಗುಳೇದಗುಡ್ಡದಲ್ಲಿ ಜವಳಿ ಪಾರ್ಕ್ ಆರಂಭಿಸುವುದಾಗಿ ಘೋಷಣೆ ಮಾಡಲಾಗಿತ್ತು. ಘೋಷಣೆಯಾಗಿ ಹಲವು ವರ್ಷಗಳೇ ಕಳೆದಿದ್ದರೂ, ಕಾರ್ಯಾರಂಭ ಮಾಡಿಲ್ಲ. ಮತ್ತೆ ಕಾಂಗ್ರೆಸ್ ಸರ್ಕಾರವೇ ಬಂದಿದೆ. ಗುಳೇದಗುಡ್ಡ ಒಳಗೊಂಡಿರುವ ಬಾದಾಮಿಗೆ ಐದು ವರ್ಷ ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಸಕಾಗಿದ್ದರು.
ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳಿರುವಾಗ ರಬಕವಿ–ಬನಹಟ್ಟಿ ಬಂದಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯದಲ್ಲಿ 25 ಜವಳಿ ಪಾರ್ಕ್ ಆರಂಭಿಸಲಾಗುವುದು. ಮೊದಲ ಪಾರ್ಕ್ ಅನ್ನು ರಬಕವಿ ಬನಹಟ್ಟಿಯಿಂದಲೇ ಆರಂಭಿಸಲಾಗುವುದು ಎಂದು ಹೇಳಿದ್ದರು. ಅದೂ ಜಾರಿಗೆ ಬಂದಿಲ್ಲ.
ನೇಕಾರ ಸಮುದಾಯದ ಅಭಿವೃದ್ಧಿಗಾಗಿ ಪ್ರತ್ಯೇಕವಾಗಿ ನಿಗಮ ಮಾಡಲಾಗಿದೆ. ಆದರೆ, ಅದಕ್ಕೆ ಅಗತ್ಯದಷ್ಟು ಅನುದಾನ ಲಭ್ಯವಾಗುತ್ತಿಲ್ಲ. ಕೂಡಲೇ ಅನುದಾನ ನೀಡಿ, ಜನರಿಗೆ ಸೌಲಭ್ಯಗಳನ್ನು ಕಲ್ಪಿಸಬೇಕು ಎಂಬುದು ನೇಕಾರರ ಆಗ್ರಹವಾಗಿದೆ.
ನೇಕಾರರು ಅಸಂಘಟಿತರಾಗಿದ್ದು, ಅವರಿಗೆ ಕಟ್ಟಡ ಕಾರ್ಮಿಕರ ಮಾದರಿ ಸೌಲಭ್ಯಗಳನ್ನು ನೀಡಬೇಕು. ಕಾರ್ಮಿಕರ ಕಾರ್ಡ್ ನೀಡಿ, ಸೌಲಭ್ಯ ಒದಗಿಸಬೇಕು. ಬಜೆಟ್ ಪೂರ್ವಭಾವಿಯಾಗಿ ನೇಕಾರರೊಂದಿಗೆ ಸಭೆ ನಡೆಸಬೇಕು. ಬಜೆಟ್‌ನಲ್ಲಿಯೇ ನಿಧಿ ತೆಗೆದಿಡಬೇಕು ಎಂದು ಆಗ್ರಹಿಸುತ್ತಾರೆ ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ಅಧ್ಯಕ್ಷ ಶಿವಲಿಂಗ ಟಿರಕಿ.
ಆರ್ಥಿಕವಾಗಿ ನೇಕಾರರು ಸಂಕಷ್ಟದಲ್ಲಿದ್ದಾರೆ. ಸಾಲ ಮನ್ನಾ ಆಗಬೇಕು. ಕಾರ್ಮಿಕ ಕಾರ್ಡ್ ಹಂಚಿಕೆಯ ಕೆಲಸ ಆಗಿ ಸೌಲಭ್ಯಗಳನ್ನು ಒದಗಿಸಬೇಕು.–ಶಿವಲಿಂಗ ಟಿರಕಿ, ಅಧ್ಯಕ್ಷ ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘ
ಮುಚ್ಚಿ ಹೋಗಿರುವ ಬನಹಟ್ಟಿ ಸಹಕಾರಿ ನೂಲಿನ ಗಿರಣಿಯನ್ನು ಸಹಕಾರ ವಲಯದ ವತಿಯಿಂದಲೇ ನಡೆಸುವಂತೆ ಆಗಬೇಕು. ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಆರ್ಥಿಕ ಸಂಕಷ್ಟದಲ್ಲಿದ್ದು, ಅದನ್ನು ಆರ್ಥಿಕವಾಗಿ ಸಬಲಗೊಳಿಸುವ ಕೆಲಸ ಆಗಬೇಕು. ನೇಕಾರರು ಆರ್ಥಿಕ ಸಂಕಷ್ಟದಲ್ಲಿದ್ದು, 47 ಮಂದಿ ನೇಕಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದ್ದರಿಂದ ಅವರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂಬುದು ನೇಕಾರರ ಒತ್ತಾಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.