ADVERTISEMENT

ಕೋವಿಡ್-19 ಗೆದ್ದು ಮನೆಗೆ ಮರಳಿದ 81 ವರ್ಷದ ವೃದ್ಧೆ: ವೈದ್ಯರ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 30 ಮೇ 2020, 10:44 IST
Last Updated 30 ಮೇ 2020, 10:44 IST
   

ಬಾಗಲಕೋಟೆ: ಒಂದು ಕೈಗೆ ಊರುಗೋಲಿನ ಆಸರೆ, ಮತ್ತೊಂದಡೆ ಭುಜ ಹಿಡಿದು ನೆರವಾದ ವೈದ್ಯಕೀಯ ಸಿಬ್ಬಂದಿಯ ಜೊತೆ ಆ ಹಿರಿಯ ಜೀವ ನಿಧಾನವಾಗಿ ಹೆಜ್ಜೆ ಹಾಕಿದಾಗ ಇಲ್ಲಿನ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಶನಿವಾರ ಮಧ್ಯಾಹ್ನ ನೆರೆದವರಿಂದ ಚಪ್ಪಾಳೆ ಮಾರ್ದನಿಸಿತು.

ಬಾದಾಮಿ ತಾಲ್ಲೂಕಿನ ಢಾಣಕಶಿರೂರಿನ 81 ವರ್ಷದ ವೃದ್ಧೆ ಕೋವಿಡ್-19 ಸೋಂಕಿನಿಂದ ಗುಣಮುಖರಾಗಿ ಊರಿಗೆ ಹೊರಟಾಗ ಆಸ್ಪತ್ರೆಯ ವೈದ್ಯರಲ್ಲಿದೊಡ್ಡ ಯುದ್ಧ ಗೆದ್ದ ಭಾವ.

‘ಕಳೆದ ಎರಡು ತಿಂಗಳಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್-19 ಸೋಂಕಿನಿಂದ ವೃದ್ಧೆಯೂ ಸೇರಿದಂತೆ 66 ಮಂದಿ ಗುಣಮುಖರಾಗಿ ತೆರಳಿದ್ದಾರೆ. ಅವರಲ್ಲಿ ಉಳಿದ 65 ಮಂದಿಯದ್ದು ಒಂದು ತೂಕವಾದರೆ, ವೃದ್ಧೆಯ ಪ್ರಕರಣವೇ ಮತ್ತೊಂದು ತೂಕ. ಇವರು ಜಿಲ್ಲೆಯಲ್ಲಿ ಕೋವಿಡ್-19 ನಿಂದ ಗುಣಮುಖರಾದ ಅತ್ಯಂತ ಹಿರಿಯ ರೋಗಿ’ಎಂದು ಆಕೆಗೆ ಚಿಕಿತ್ಸೆ ನೀಡಿದ ತಜ್ಞವೈದ್ಯ ಡಾ.ಚಂದ್ರಕಾಂತ ಜವಳಿ ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

ವಿಶೇಷವೆಂದರೆ ಗಂಟಲು ದ್ರವ ಮಾದರಿ ಪರೀಕ್ಷೆಯಲ್ಲಿ ವೃದ್ಧೆಗೆ ಕೋವಿಡ್-19 ಸೋಂಕುಪಾಸಿಟಿವ್ ಇದ್ದರೂ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಅವಧಿಯಲ್ಲಿ ಯಾವುದೇ ರೋಗ ಲಕ್ಷಣ ಕಂಡುಬಂದಿಲ್ಲ.

‘ಯಪ್ಪಾನಮ್ಮೂರಾಗ ಅರಾಮ್ ಇದ್ನ್ಯೋ, ಅದೇನೊ ಕೊರೊನ ಬಂದೈತಿ ಅಂತ ಇಲ್ಲಿ ತಂದು ಹಾಕಿದ್ರು, ಈಗ ಬಿಟ್ಟಾರ. ಆದ್ರೂ ಪುಣ್ಯಾತ್ಮುರು ಚೊಲೊ ನೋಡ್ಕಂಡ್ರು, ಜಡ್ಡು, ಜಾಪತ್ರಿ ಏನೂ ಇಲ್ಲ ಅರಾಮ ಅದೇನಿ ಅಂದ್ರೂ ಕೇಳಾವಲ್ರು. ಈ ಗುಳಿಗಿ ಬ್ಯಾರೆ ನುಂಗಾಕ ಹೇಳ್ಯಾರ’ಎಂದು ವೈದ್ಯರು ಕೊಟ್ಟ ಔಷಧಗಳ ಪಟ್ಟಣವನ್ನು ತೋರಿಸಿದ ವೃದ್ಧೆ ಊರಿಗೆ ಕರೆದೊಯ್ಯಲು ಸಿದ್ಧವಾಗಿ ನಿಂತಿದ್ದ ಆಂಬುಲೆನ್ಸ್ ಏರುವ ಮುನ್ನ ಅಲ್ಲಿ ನೆರೆದವರನ್ನು ನಗೆಗಡಲಲ್ಲಿ ತೇಲಿಸಿದರು.

ಆರು ಮಕ್ಕಳು, 10 ಮಂದಿ ಮೊಮ್ಮಕ್ಕಳು ಇರುವ ವೃದ್ಧೆಗೆ ಮಧುಮೇಹ, ಅಧಿಕ ರಕ್ತದೊತ್ತಡ ಸೇರಿದಂತೆ ಯಾವುದೇ ವಯೋಸಹಜ ಕಾಯಿಲೆಗಳು ಬಾಧಿಸಿಲ್ಲ. ಪತಿ 20 ವರ್ಷಗಳ ಹಿಂದೆಯೇ ತೀರಿಕೊಂಡಿದ್ದಾರೆ.

ಢಾಣಕಶಿರೂರಿನ ಗರ್ಭಿಣಿಯೊಬ್ಬರ ಕುಬ್ಬಸ (ಸೀಮಂತ) ಕಾರ್ಯಕ್ರಮದನಂತರ ಗ್ರಾಮದಲ್ಲಿ ವೃದ್ಧೆ ಸೇರಿದಂತೆ 21 ಮಂದಿಗೆ ಸೋಂಕು ದೃಢಪಟ್ಟಿತ್ತು. ಅವರ ಪೈಕಿ 17 ಮಂದಿ ಇಲ್ಲಿಯವರೆಗೆ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಗರ್ಭಿಣಿ ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದರೆ ಉಳಿದವರು ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಮೂವರು ಬಿಡುಗಡೆ:ವೃದ್ಧೆ ಸೇರಿದಂತೆ ಮೂವರು ಶನಿವಾರ ಆಸ್ಪತ್ರೆಯಿಂದ ಮನೆಗೆ ತೆರಳಿದರು. ಅವರಲ್ಲಿ ಬಾದಾಮಿ ತಾಲ್ಲೂಕಿನ ಕುಳಗೇರಿ ಕ್ರಾಸ್‌ನ ನಿವಾಸಿ, ಮುಂಬೈನಿಂದ ಮರಳಿದ್ದ 33 ವರ್ಷದ ವ್ಯಕ್ತಿ ಹಾಗೂ ಮುಧೋಳದ ನಿವಾಸಿ, ತಬ್ಲಿಗಿ ಜಮಾತ್‌ನಲ್ಲಿ ಪಾಲ್ಗೊಂಡು ಮರಳಿದ್ದ 19 ವರ್ಷದ ಯುವಕ ಸೇರಿದ್ದಾರೆ.

ಜಿಲ್ಲೆಯಲ್ಲಿ ಇಲ್ಲಿಯವರೆಗೆ 77 ಮಂದಿಗೆ ಕೋವಿಡ್-19 ದೃಢಪಟ್ಟಿದೆ. ಅವರಲ್ಲಿ 75 ವರ್ಷದ ವೃದ್ಧರೊಬ್ಬರು ಮೃತಪಟ್ಟಿದ್ದಾರೆ. ನಾಲ್ಕು ವರ್ಷದ ಬಾಲಕ ಸೇರಿದಂತೆ 66 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ತೆರಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.