ADVERTISEMENT

ಬಾಗಲಕೋಟೆ: ಬರಡು ಭೂಮಿಗೆ ಮರುಜೀವದ ಯತ್ನ

ರಾಜ್ಯದಲ್ಲಿ ಮೊದಲ ಬಾರಿಗೆ ಮನರೇಗಾ ಯೋಜನೆಯಡಿ ಪ್ರಯೋಗ

​ಪ್ರಜಾವಾಣಿ ವಾರ್ತೆ
Published 27 ಜೂನ್ 2025, 23:49 IST
Last Updated 27 ಜೂನ್ 2025, 23:49 IST
<div class="paragraphs"><p>ಬಾಗಲಕೋಟೆ ಜಿಲ್ಲೆಯ ಹೊಲವೊಂದರಲ್ಲಿ ಸವುಳು ಜವಳಾಗಿರುವ ಭೂಮಿಯಲ್ಲಿ ಸವಳು ತೆಗೆಯಲು ಬಸಿಗಾಲುವೆ ನಿರ್ಮಿಸುತ್ತಿರುವುದು</p></div>

ಬಾಗಲಕೋಟೆ ಜಿಲ್ಲೆಯ ಹೊಲವೊಂದರಲ್ಲಿ ಸವುಳು ಜವಳಾಗಿರುವ ಭೂಮಿಯಲ್ಲಿ ಸವಳು ತೆಗೆಯಲು ಬಸಿಗಾಲುವೆ ನಿರ್ಮಿಸುತ್ತಿರುವುದು

   

ಬಾಗಲಕೋಟೆ: ಬರಡಾಗಿರುವ ಭೂಮಿಯನ್ನು ಫಲವತ್ತಾಗಿಸುವ ಕೆಲಸ ಬಾಗಲಕೋಟೆ ಜಿಲ್ಲೆಯಲ್ಲಿ ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ  ನಡೆದಿದೆ. ಇದರಿಂದ ಭೂಮಿ ಮರುಜೀವ ಪಡೆಯುವುದಲ್ಲದೇ, ಆ ಹೊಲದ ಮಾಲೀಕನಾದ ರೈತನಿಗೆ 74 ದಿನಗಳ ಕಾಲ ಕೆಲಸವೂ ದೊರೆಯಲಿದೆ.

ಬಾಗಲಕೋಟೆ ಸೇರಿದಂತೆ ರಾಜ್ಯದ 11 ಜಿಲ್ಲೆಗಳಲ್ಲಿ ಪೈಲಟ್‌ ಯೋಜನೆಯಡಿ ಸವಳು ಜವಳಾಗಿರುವ ಭೂಮಿಯನ್ನು ಹಿಂದಿನಂತೆ ಫಲವತ್ತಾಗಿಸುವ ಕಾರ್ಯವನ್ನು ಮೊದಲ ಬಾರಿಗೆ ನರೇಗಾದಡಿ ಕೈಗೆತ್ತಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ₹9.54 ವೆಚ್ಚದಲ್ಲಿ 1,093 ಎಕರೆಯ ಸವಳು ತೆಗೆದು, ಮಣ್ಣಿನ ಫಲವತ್ತತೆ ಹೆಚ್ಚಿಸಲಾಗುತ್ತಿದೆ.

ADVERTISEMENT

ಸವಳು ಜವಳು ನಿವಾರಣೆಗಾಗಿ ಪ್ರತಿ ಎಕರೆಗೆ ಅಂದಾಜು ವೆಚ್ಚ ತಯಾರಿಸಲಾಗಿದ್ದು, ಕೆಂಪು ಮಣ್ಣಿನ ಹೊಲಕ್ಕೆ ಪ್ರತಿ ಎಕರೆಗೆ ₹58 ಸಾವಿರ, ಕಪ್ಪು ಮಣ್ಣಿನ ಹೊಲಕ್ಕೆ ₹68 ಸಾವಿರ ನಿಗದಿ ಮಾಡಲಾಗಿದೆ. ನರೇಗಾದಡಿ ₹6.94 ಕೋಟಿ, ಕೃಷಿ ಇಲಾಖೆಯಿಂದ ₹2.60 ಕೋಟಿ ವೆಚ್ಚ ಮಾಡಲಾಗುತ್ತಿದೆ.

ಒಂದು ಕಾಲದಲ್ಲಿ ಫಲವತ್ತಾಗಿದ್ದ ಭೂಮಿಯು ಅತಿಯಾದ ರಸಗೊಬ್ಬರ ಬಳಕೆ, ಸತತವಾಗಿ ನೀರು ನಿಲ್ಲಿಸಿ ಒಂದೇ ಬೆಳೆ ಬೆಳೆಯುವುದು, ಜಲಾಶಯದ ಹಿನ್ನೀರಿನಿಂದಾಗಿ ಭೂಮಿ ಸವಳಾಗಿದ್ದು, ಫಸಲು ಬೆಳೆಯದಂತಾಗಿವೆ. ಇದರಿಂದಾಗಿ ಸಾವಿರಾರು ರೈತರ ಕುಟುಂಬಗಳು ಆದಾಯವಿಲ್ಲದೆ ಸಂಕಷ್ಟಕ್ಕೆ ಸಿಲುಕಿವೆ. ಅಂತಹ ಭೂಮಿಯ ಫಲವತ್ತತೆ ಮರಳಿಸಲು ಈ ಯೋಜನೆಯಡಿ ರೈತರಿಗೆ ನೆರವು ನೀಡಲಾಗುತ್ತಿದೆ.

ಭೂಮಿ ಸವಳು ಜವಳಾಗಿರುವುದರಿಂದ ರೈತರು ಸಂಕಷ್ಟ. ಈ ಯೋಜನೆಯಿಂದ ಬರಡಾಗಿದ್ದ ಭೂಮಿಯಲ್ಲಿ ಹಸಿರು ನಳನಳಿಸಲಿದೆ. ರೈತರಿಗೂ ಆರ್ಥಿಕ ಬಲ ಬರಲಿದೆ.
–ಶಶಿಧರ ಕುರೇರ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯಿತಿ ಬಾಗಲಕೋಟೆ

‘ಈಗಾಗಲೇ ಕೆಲವು ತಾಲ್ಲೂಕುಗಳಲ್ಲಿ ಕಾಮಗಾರಿ ಪೂರ್ಣಗೊಂಡಿದೆ. ಇನ್ನು ತಾಲ್ಲೂಕುಗಳಲ್ಲಿ ನಡೆದಿದೆ. 40 ಮೀಟರ್‌ ಅಂತರದಲ್ಲಿ ಬಸಿಗಾಲುವೆಗೆ ಪೈಪ್‌ ಹಾಕಲಾಗುತ್ತಿದೆ. ಕೆಲವು ರೈತರು ಯೋಜನೆಯೊಂದಿಗೆ ತಮ್ಮ ಹಣವನ್ನೂ ಸೇರಿಸಿ 10 ಮೀಟರ್‌ ಅಂತರದಲ್ಲಿ ಬಸಿಗಾಲುವೆ ನಿರ್ಮಿಸಿಕೊಳ್ಳುತ್ತಿದ್ದಾರೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ತಿಳಿಸಿದರು.

ಯಾವ ಜಿಲ್ಲೆಗಳು: ಕಲಬುರಗಿ, ಯಾದಗಿರಿ, ಚಿತ್ರದುರ್ಗ, ಬೆಳಗಾವಿ, ವಿಜಯಪುರ, ಕೊಪ್ಪಳ, ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಗಳಲ್ಲಿ ಸವಳು ಜವಳು ಆಗಿರುವ ಭೂಮಿಗೆ ಕಾಯಕಲ್ಪ ನೀಡುವ ಕೆಲಸ ನಡೆದಿದೆ. 

ಸವಳು ಜವಳು ನಿವಾರಣೆ ಹೇಗೆ?

ಭೂಮಿ ಆಧರಿಸಿ 2 ರಿಂದ 3 ಅಡಿವರೆಗೆ ತೆಗ್ಗು ತೆಗೆದು ಬಸಿಗಾಲುವೆ ನಿರ್ಮಿಸಲಾಗುತ್ತದೆ. ತೆಗ್ಗಿನಿಂದ ತೆಗ್ಗಿಗೆ 40 ಮೀಟರ್ ಅಂತರವಿರುತ್ತದೆ. (ರೈತರು ಅಪೇಕ್ಷಿಸಿ ವೆಚ್ಚ ಭರಿಸಿದರೆ 10 ಮೀಟರ್‌ ಅಂತರದಲ್ಲಿ ನಿರ್ಮಿಸಲಾಗುತ್ತದೆ) ತೆಗ್ಗಿನ ತಳಭಾಗದಲ್ಲಿ ಕಡಿ (ಕಲ್ಲಿನ ಸಣ್ಣದಾದ ತುಂಡುಗಳು) ಹಾಕಿ ಅದರ ಮೇಲೆ ಜಿಯೊ ಸಿಂಥೆಟಿಕ್‌ನಿಂದ ಸುತ್ತಿರುವ ಪೈಪ್‌ ಅಳವಡಿಸಲಾಗುತ್ತದೆ. ಪೈಪ್‌ನುದ್ದಕ್ಕೂ ಅಲ್ಲಲ್ಲಿ ಹೋಲ್‌ಗಳಿರುತ್ತವೆ. ಜಿಯೊಸಿಂಥೆಟಿಕ್‌ ಮಣ್ಣನ್ನು ತಡೆದು ಉಪ್ಪಿನಂಶ ಇರುವ ನೀರು ಮಾತ್ರ ಪೈಪಿನೊಳಕ್ಕೆ ಹೋಗಲು ಅನುವು ಮಾಡಿಕೊಡುತ್ತದೆ. ಆ ಪೈಪ್‌ಲೈನ್‌ಗಳನ್ನೆಲ್ಲಾ ಮೇನ್‌ಲೈನ್‌ ಜೋಡಿಸಿ ಉಪ್ಪು ನೀರನ್ನು ಹೊಲದಿಂದ ಹೊರಗೆ ಹಾಯಿಸಲಾಗುತ್ತದೆ.

ಬಾಗಲಕೋಟೆ ಜಿಲ್ಲೆಯ ಹೊಲವೊಂದರಲ್ಲಿ ಸವುಳು ಜವಳಾಗಿರುವ ಭೂಮಿಯಲ್ಲಿ ಸವುಳು ತೆಗೆಯಲು ಬಸಿಗಾಲುವೆ ನಿರ್ಮಿಸುತ್ತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.