ADVERTISEMENT

ಹಳದೂರು: ಟಿಕ್‌ಟಾಕ್ ವಿಡಿಯೊ ತಂದಿತ್ತ ಜಗಳ, ದಲಿತರು– ಸವರ್ಣೀಯರ ನಡುವೆ ಘರ್ಷಣೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2020, 13:05 IST
Last Updated 7 ಏಪ್ರಿಲ್ 2020, 13:05 IST
ಗುಳೇದಗುಡ್ಡ ಸಮೀಪದ ಹಳದೂರಿನಲ್ಲಿ ನಡೆದ ಘರ್ಷಣೆ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಮಂಗಳವಾರ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆಪ್ರಜಾವಾಣಿ ಚಿತ್ರ: ಅಖಂಡೇಶ್ವರ ಪತ್ತಾರ
ಗುಳೇದಗುಡ್ಡ ಸಮೀಪದ ಹಳದೂರಿನಲ್ಲಿ ನಡೆದ ಘರ್ಷಣೆ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಮಂಗಳವಾರ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆಪ್ರಜಾವಾಣಿ ಚಿತ್ರ: ಅಖಂಡೇಶ್ವರ ಪತ್ತಾರ   

ಬಾಗಲಕೋಟೆ: ಮೊಬೈಲ್‌ಫೋನ್‌ನ ಟಿಕ್‌ಟಾಕ್ ವಿಡಿಯೊ ವಿಚಾರದಲ್ಲಿ ಗುಳೇದಗುಡ್ಡ ತಾಲ್ಲೂಕಿನ ಹಳದೂರಿನಲ್ಲಿ ದಲಿತರು ಹಾಗೂ ಸವರ್ಣೀಯರ ನಡುವೆ ಗುಂಪು ಘರ್ಷಣೆಗೆ ದಾರಿಯಾಗಿದೆ. ಈ ವೇಳೆ ದಲಿತ ಸಮುದಾಯದ 18 ಮಂದಿ ಗಾಯಗೊಂಡಿದ್ದಾರೆ. ಅವರಲ್ಲಿ ಎಂಟು ಮಂದಿಯನ್ನು ಗುಳೇದಗುಡ್ಡ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ಘಟನೆ ವಿವರ: ಗ್ರಾಮದ ದಲಿತ ಯುವತಿಯೊಬ್ಬರು ಮನೆಯಲ್ಲಿ ಸಿನಿಮಾ ಹಾಡಿಗೆ ನೃತ್ಯ ಮಾಡಿ ಅದನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಟಿಕ್‌ ಟಾಕ್‌ ಆ್ಯಪ್‌ನಲ್ಲಿ ವಿಡಿಯೊ ಹರಿಯಬಿಟ್ಟಿದ್ದಾರೆ. ಅದನ್ನು ವೀಕ್ಷಿಸಿದ ಊರಿನ ಕೆಲವು ಸವರ್ಣೀಯ ಯುವಕರು ತಾವೂ ಊರ ಸಮೀಪದ ನದಿ ದಡದಲ್ಲಿ ಅರೆ ಬೆತ್ತಲಾಗಿ ಅಸಭ್ಯ ನೃತ್ಯ ಮಾಡಿ ಅದನ್ನು ವಿಡಿಯೊ ಚಿತ್ರೀಕರಿಸಿದ್ದಾರೆ. ನಂತರ ಅದನ್ನು ಯುವತಿಯ ವಿಡಿಯೊಗೆ ಟ್ಯಾಗ್ ಮಾಡಿದ್ದಾರೆ.

ಅದನ್ನು ಗಮನಿಸಿದ ಯುವತಿಯ ಪೋಷಕರು ಊರಿನ ಹಿರಿಯರ ಗಮನಕ್ಕೆ ತಂದಿದ್ದಾರೆ. ಊರ ಹಿರಿಯರು ಕರೆಸಿ ಭಾನುವಾರ ಯುವಕರನ್ನು ಕರೆಸಿ ಬುದ್ಧಿವಾದ ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ಯುವಕರು ಯುವತಿಯ ಮನೆಗೆ ತೆರಳಿ ಕುಟುಂಬದವರೊಂದಿಗೆ ವಾಗ್ವಾದ ನಡೆಸಿದ್ದಾರೆ. ಇದು ಹೊಡೆದಾಟಕ್ಕೆ ದಾರಿಯಾಗಿದೆ ಎನ್ನಲಾಗಿದೆ.

ADVERTISEMENT

ಗ್ರಾಮದಲ್ಲಿ ಈಗ ಪರಿಸ್ಥಿತಿ ತಹಬದಿಗೆ ಬಂದಿದೆ. ಬಂದೋಬಸ್ತ್‌ಗೆ ಡಿಎಆರ್ ತುಕಡಿ ನಿಯೋಜಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಗುಳೇದಗುಡ್ಡ ಪೊಲೀಸ್ ಠಾಣೆಯಲ್ಲಿ ಎರಡೂ ಕಡೆಯವರಿಂದಲೂ ದೂರು ಪ್ರತಿದೂರು ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.