
ರಬಕವಿ ಬನಹಟ್ಟಿ: ರಬಕವಿ ಬನಹಟ್ಟಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಈಗ ಎಲ್ಲೆಡೆ ಅರಿಸಿನ ಸಂಸ್ಕರಣಾ ಕಾರ್ಯ ಆರಂಭಗೊಂಡಿದ್ದು, ಸುತ್ತಲಿನ ತೋಟದ ರಸ್ತೆಗಳಲ್ಲಿ ಈಗ ಅರಿಸಿನದ ಘಾಟು ವಾಸನೆಯು ಆವರಿಸಿಕೊಂಡಿದೆ.
ಈ ಭಾಗದಲ್ಲಿ ಅರಿಸಿನ ಬೆಳೆ ಪ್ರಮುಖ ವಾಣಿಜ್ಯ ಬೆಳೆಯಾಗಿರುವುದರಿಂದ ಬಹಳಷ್ಟು ರೈತರು ಅರಿಸಿನ ಬೆಳೆ ಬೆಳೆದಿದ್ದಾರೆ. ಇದು ಎಂಟು ತಿಂಗಳ ಬೆಳೆಯಾಗಿದೆ. ಈ ಮೊದಲು ಅರಿಸಿನ ಸಂಸ್ಕರಣಾ ಕಾರ್ಯವು ರೈತರಿಗೆ ಬಹು ದೊಡ್ಡ ಸವಾಲಾಗಿತ್ತು. ಮೊದಲು ಭೂಮಿಯಿಂದ ಅರಿಸಿನ ಅಗೆದು, ನಂತರ ಅದನ್ನು ಎಲೆಗಳಿಂದ ಬೇರ್ಪಡಿಸುತ್ತಿದ್ದರು. ಅರಿಸಿನ ಕುದಿಸುವ ಸಲುವಾಗಿ ದೊಡ್ಡದಾದ ಒಲೆಯನ್ನು ನಿರ್ಮಾಣ ಮಾಡುತ್ತಿದ್ದರು. ಒಲೆಯ ಮೇಲೆ ಬೃಹತ್ ಪಾತ್ರೆ ಇಟ್ಟು ಬೀಜಗಳನ್ನು ತುಂಬಿ ಕುದಿಸುತ್ತಿದ್ದರು. ಒಲೆಯಲ್ಲಿ ಉರುವಲು ಹಾಕುವುದಕ್ಕೆ ಇಬ್ಬರು ಕೂಲಿ ಕಾರ್ಮಿಕರು ಬೇಕಾಗುತ್ತಿದ್ದರು. ಈ ಕಾರ್ಯ ಬೆಳಿಗ್ಗೆ 4ಕ್ಕೆ ಆರಂಭಗೊಂಡರೆ ರಾತ್ರಿಯವರೆಗೆ ನಡೆಯುತ್ತಿತ್ತು.
ಮೊದಲು ಅರಿಸಿನ ಕುದಿಸಿ ಒಣಗಿಸಿ ನಂತರ ಪಾಲಿಶ್ ಮಾಡುವ ಕಾರ್ಯ ತಿಂಗಳುಗಳ ಕಾಲ ನಡೆಯುತ್ತಿತ್ತು. ಅದಕ್ಕೆ ಇಪ್ಪತ್ತಕ್ಕೂ ಹೆಚ್ಚು ಕೂಲಿ ಕಾರ್ಮಿಕರ ಅವಶ್ಯಕತೆ ಇತ್ತು. ಆದರೆ ಈಗ ಯಂತ್ರೋಪಕರಣ ಬಳಸುವುದರಿಂದ ಐದಾರು ಜನ ಕಾರ್ಮಿಕರು ಸಾಕಾಗುತ್ತಾರೆ. ಏಳೆಂಟು ದಿನಗಳಲ್ಲಿ ಮಾಡಿ ಮುಗಿಸುತ್ತಾರೆ. ಇದರಿಂದಾಗಿ ಈ ಕಾರ್ಯ ಸುಲಭವಾಗಿದೆ.
ಬೃಹತ್ ಡ್ರಮ್‌ಗಳಲ್ಲಿ ಅಂದಾಜು ಎರಡು ಕ್ವಿಂಟಲ್‌ನಷ್ಟು ಅರಿಸಿನ ಬೀಜಗಳನ್ನು ಹಾಕಿ ಅದಕ್ಕೆ ಸ್ಟೀಮ್ ನೀಡುತ್ತಾರೆ. ನಂತರ ಅಲ್ಲಿಂದ ನೇರವಾಗಿ ಒಣಗಲು ಹಾಕುತ್ತಾರೆ. ಏಳೆಂಟು ದಿನಗಳ ಕಾಲ ಒಣಗಿಸಿದ ನಂತರ ಬೀಜಗಳನ್ನು ಪಾಲಿಷ್ ಮಾಡುತ್ತಾರೆ.
ಒಂದು ದಿನಕ್ಕೆ ಅಂದಾಜು 35 ರಿಂದ 40 ಕ್ವಿಂಟಲ್ ನಷ್ಟು ಬೀಜಗಳನ್ನು ಕುದಿಸಿ ಅವುಗಳನ್ನು ಒಣಗಲು ಹಾಕುತ್ತಾರೆ. ಒಂದು ಡ್ರಮ್ ಅರಿಸಿನ ಕುದಿಸಿ, ಒಣಗಿಸಲು ₹500ರಿಂದ ₹600 ವರೆಗೆ ಕೂಲಿಯನ್ನು ಕಾರ್ಮಿಕರು ಪಡೆದುಕೊಳ್ಳುತ್ತಾರೆ. ಒಂದು ಎಕರೆಯಲ್ಲಿ ಅಂದಾಜು 35 ರಿಂದ 40 ಕ್ವಿಂಟಲ್ ನಷ್ಟು ಅರಿಸಿನ ಬೆಳೆಯನ್ನು ಬೆಳೆಯಬಹುದಾಗಿದೆ.
7–8 ದಿನಗಳಲ್ಲಿ ಸಂಸ್ಕರಣಾ ಕಾರ್ಯ ಪೂರ್ಣ ದಿನಕ್ಕೆ ₹500ರಿಂದ ₹600 ಕೂಲಿದರ ಸಾಂಗ್ಲಿ ಮಾರುಕಟ್ಟೆಯಲ್ಲಿ ಅರಿಸಿನಕ್ಕೆ ಒಳ್ಳೇ ಬೇಡಿಕೆ
ಅರಿಸಿನ ಬೆಳೆಗೆ ಉತ್ತಮ ಬೆಲೆ ಬಂದರೆ ರೈತರು ಕೈತುಂಬ ಹಣ ಗಳಿಸಬಹುದು. ಈ ಭಾಗದಲ್ಲಿ ಬೆಳೆದ ಬಹುತೇಕ ಅರಿಸಿನ ಬೀಜವು ಮಹಾರಾಷ್ಟ್ರದ ಸಾಂಗ್ಲಿ ಮಾರುಕಟ್ಟೆಗೆ ಹೋಗುತ್ತದೆಸಿದ್ದು ಗೌಡಪ್ಪನವರ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.