
ರಾಂಪುರ: ಮಹಾಯೋಗಿ ವೇಮನರ ಸಾಹಿತ್ಯ ಓದಿ, ಅರ್ಥೈಸಿಕೊಂಡು, ಪಾಲಿಸಿ ನಡೆದವರ ಜೀವನಕ್ಕೆ ನೆಮ್ಮದಿ ಕೊಡುವುದರ ಜೊತೆಗೆ ಬದುಕನ್ನು ಸುಂದರಗೊಳಿಸುತ್ತದೆ ಎಂದು ಬೇಲೂರಿನ ಗುರುಬಸವೇಶ್ವರ ವಿರಕ್ತಮಠದ ಮಹಾಂತ ಬಸವಲಿಂಗ ಸ್ವಾಮೀಜಿ ಹೇಳಿದರು.
ಸಮೀಪದ ಬೆನಕಟ್ಟಿಯಲ್ಲಿ ಶುಕ್ರವಾರ ಹೇಮ ವೇಮನ ಸದ್ಬೋಧನ ಪೀಠ ಸ್ಥಳೀಯ ಹೇಮರಡ್ಡಿ ಮಲ್ಲಮ್ಮ ಪ್ರೌಢಶಾಲೆಯ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ವೇಮನರ ವಚನ ಕಂಠಪಾಠ ಹಾಗೂ ವಚನ ಗಾಯನ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಸ್ವಾಮೀಜಿ, ವೇಮನ ಸಾಹಿತ್ಯ ಅರ್ಥಪೂರ್ಣ ಬದುಕಿಗೆ ದಾರಿದೀಪವಾಗಿದೆ ಎಂದರು.
ವಿದ್ಯಾರ್ಥಿಗಳು ಸಾಧನೆಯ ಕನಸು ಕಾಣಬೇಕು. ಅದನ್ನು ನನಸು ಮಾಡಿಕೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ, ನಿರಂತರ ಶ್ರಮ ವಹಿಸಬೇಕು. ಸಂಸ್ಕಾರವಂತರಾಗಿ ಬದುಕುವ ಪರಿಯನ್ನು ಕಲಿಯಬೇಕು ಎಂದ ಬಸವಲಿಂಗ ಸ್ವಾಮೀಜಿ, ನಮ್ಮನ್ನು ಹೆತ್ತವರು, ನಮಗೆ ಅಕ್ಷರ ಕಲಿಸಿ ಜ್ಞಾನಿಯನ್ನಾಗಿ ಮಾಡಿದ ಶಿಕ್ಷಕರು ಹಾಗೂ ನಮ್ಮ ಬದುಕಿಗೆ ಆಧ್ಯಾತ್ಮದ ಬೆಳಕನ್ನು ನೀಡಿರುವ ಮಹಾಯೋಗಿ ವೇಮನರಂತಹ ಜ್ಞಾನಿಗಳು, ಶರಣರು, ಮಹಾತ್ಮರು ನಮ್ಮ ನಮ್ಮ ಪಾಲಿನ ಹಿರೋಗಳು ಎಂಬುದನ್ನು ತಿಳಿಯಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ನಿವೃತ್ತ ಶಿಕ್ಷಣಾಧಿಕಾರಿ ಎಚ್.ಜಿ.ಮಿರ್ಜಿ ಮಾತನಾಡಿ, ಮಹಾಯೋಗಿ ವೇಮನರ ಉತ್ಕೃಷ್ಟ ವಚನಗಳನ್ನು ತಿಳಿದು ನಡೆದರೆ ಜೀವನದಲ್ಲಿ ಖಂಡಿತವಾಗಿಯೂ ಬದಲಾವಣೆಯಾಗುತ್ತದೆ. ಮನುಷ್ಯನ ಬದುಕಿನ ದಾರಿ ಹೇಗಿರಬೇಕು, ಹೇಗಿದ್ದರೆ ಬದುಕು ಸುಂದರ ಎಂಬುದನ್ನು ಅವರು ತಮ್ಮ ವಚನಗಳ ಮೂಲಕ ಮನುಕುಲಕ್ಕೆ ಸಂದೇಶ ನೀಡಿದ್ದಾರೆ ಎಂದರು.
ಅತಿಥಿಗಳಾಗಿದ್ದ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಜಿಲ್ಲಾ ಅಧ್ಯಕ್ಷ ಗದಿಗೆಪ್ಪ ಅರಕೇರಿ ಹಾಗೂ ನಿವೃತ್ತ ಶಿಕ್ಷಕ ಕೆ.ಪಿ.ಅರಿಷಿಣಗೋಡಿ ಮಾತನಾಡಿದರು. ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ಸಮಿತಿ ಅಧ್ಯಕ್ಷ ಪಂಡಿತ ಮಾಚಾ ಅಧ್ಯಕ್ಷತೆ ವಹಿಸಿದ್ದರು. ಹೇಮ ವೇಮನ ಸದ್ಬೋಧನ ಪೀಠದ ಕಾರ್ಯದರ್ಶಿ ಟಿ.ಎಚ್.ಸನ್ನಪ್ಪನವರ, ನಿವೃತ್ತ ಶಿಕ್ಷಕ ಜಿ.ಜಿ.ಚಿತ್ತರಗಿ, ನೀಲಪ್ಪ ಬಾಳಕ್ಕನವರ, ವಿಶ್ವಭಾರತಿ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಹನಮಂತ ಮಾದರ ಅತಿಥಿಗಳಾಗಿದ್ದರು.
ಕಾರ್ಯಕ್ರಮದಲ್ಲಿ ವೇಮನರ ವಚನ ಕಂಠಪಾಠ ಹಾಗೂ ವಚನ ಗಾಯನ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನೀಲಪ್ಪ ಬಾಳಕ್ಕನವರ, ವೆಂಕಟೇಶ ತಿಮ್ಮಾಪೂರ ಹಾಗೂ ಟಿ.ಎಚ್.ಸನ್ನಪ್ಪನವರ ನಗದು ಬಹುಮಾನ ನೀಡಿದರು.
ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಎಚ್.ಬಿ.ಗೋಣಿ ಸ್ವಾಗತಿಸಿದರು. ಎನ್.ಬಿ.ಮದಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಎಂ.ಕಾಮಾ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.