ADVERTISEMENT

ಶಕ್ತಿಶಾಲಿ ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಸಿ: ಶ್ರೀಧರ ನಾಡಿಗೇರ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2026, 7:01 IST
Last Updated 2 ಮಾರ್ಚ್ 2026, 7:01 IST
ಬಾಗಲಕೋಟೆಯಲ್ಲಿ ಭಾನುವಾರ ವಿರಾಟ ಹಿಂದೂ ಸಮ್ಮೇಳನ ಅಂಗವಾಗಿ ಹಮ್ಮಿಕೊಂಡಿದ್ದ ಶೋಭಾಯಾತ್ರೆಯ ದೃಶ್ಯ
ಬಾಗಲಕೋಟೆಯಲ್ಲಿ ಭಾನುವಾರ ವಿರಾಟ ಹಿಂದೂ ಸಮ್ಮೇಳನ ಅಂಗವಾಗಿ ಹಮ್ಮಿಕೊಂಡಿದ್ದ ಶೋಭಾಯಾತ್ರೆಯ ದೃಶ್ಯ   

ಬಾಗಲಕೋಟೆ: ಹಿಂದೂಗಳು ಒಂದಾದರೆ ದೇಶ ಶಕ್ತಶಾಲಿ ರಾಷ್ಟ್ರವಾಗಲಿದೆ. ಅದಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ಎಂದು ಆರ್‌ಎಸ್‌ಎಸ್‌ ಉತ್ತರ ಪ್ರಾಂತ್ಯ ಕಾರ್ಯಕಾರಿ ಸದಸ್ಯ ಶ್ರೀಧರ ನಾಡಿಗೇರ ಹೇಳಿದರು.

ಬಸವೇಶ್ವರ ಕಾಲೇಜು ಮೈದಾನದಲ್ಲಿ ಭಾನುವಾರ ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿಯಿಂದ ಆಯೋಜಿಸಲಾಗಿದ್ದ ವಿರಾಟ್ ಹಿಂದೂ ಸಮ್ಮೇಳನದಲ್ಲಿ ಮಾತನಾಡಿದ ಅವರು, ಆರ್ಥಿಕ, ಮಿಲಿಟರಿ ಹಾಗೂ ಸಾಮಾಜಿಕ ಶಕ್ತಿಯಿಂದ ದೇಶ ಬಲಾಢ್ಯವಾಗುತ್ತದೆ. ಅಂತಹ ಎಲ್ಲ ಶಕ್ತಿ ಹೊಂದಿರುವ ದೇಶ ಕೆಲವೇ ವರ್ಷಗಳಲ್ಲಿ ವಿಶ್ವದ ನಾಲ್ಕನೇ ಆರ್ಥಿಕ ಶಕ್ತಿಯಾಗಲಿದೆ ಎಂದರು.

ಹಿಂದೂಗಳು ಜಾತಿ, ಭಾಷೆ ಮೀರಿ ಹಿಂದುತ್ವ ಬೆಳೆಸಿಕೊಳ್ಳಬೇಕು. ದೇಶದಲ್ಲಿ ಹಿಂದೂ ಶಕ್ತಿ ಜಾಗೃತವಾಗಿದೆ. ರಾಮ ಮಂದಿರ ನಿರ್ಮಾಣ, ಆರ್ಟಿಕಲ್ 370 ತೆರವು ಇದಕ್ಕೆ ಉದಾಹರಣೆಗಳಾಗಿವೆ. ದೇಶದಲ್ಲಿ ಏಕರೂಪ ಕಾನೂನು ಜಾರಿಯಾದರೆ ಅಲ್ಪಸಂಖ್ಯಾತ, ಬಹುಸಂಖ್ಯಾತ ಇರುವುದಿಲ್ಲ ಎಂದು ಹೇಳಿದರು.

ADVERTISEMENT

ಸಮಾಜಕ್ಕಾಗಿ ಸ್ಪಂದಿಸುವವನು ಮಾತ್ರ ಸಜ್ಜನ. ಆಂತರಿಕ ಮತಭೇದಗಳಿಂದ ಹೊರಬಂದು ಸಾಮಾಜಿಕ ಶಕ್ತಿಯಾಗೋಣ. ಅಸ್ಪ್ರಶ್ಯತೆ ನಿವಾರಣೆ, ಸ್ವದೇಶಿ ವಸ್ತುಗಳ ಬಳಕೆ, ಕುಟುಂಬ ಬಲವರ್ಧನೆ, ಪರಿಸರ ರಕ್ಷಣೆಯತ್ತ ಹೆಚ್ಚಿನ ಗಮನ ಹರಿಸೋಣ ಎಂದರು.

ಸಾನ್ನಿಧ್ಯ ವಹಿಸಿದ್ದ ಚರಂತಿಮಠದ ಪ್ರಭು ಸ್ವಾಮೀಜಿ ಮಾತನಾಡಿ, ಇತಿಹಾಸದಲ್ಲಿ ಸಂತರು, ಶರಣರು ಹಿಂದೂ ಸಂಸ್ಕೃತಿ ರಕ್ಷಿಸಲು ಯತ್ನಿಸಿದರು. ಪಾಶ್ಚಾತ್ಯ ಸಂಸ್ಕೃತಿಯಿಂದ ದೂರವಿದ್ದು ಹಿಂದೂ ಪರಂಪರೆ ಉಳಿಸಬೇಕು ಎಂದು ಹೇಳಿದರು.

ನಂದಿಮಠ ಕಾನೂನು ಕಾಲೇಜು ಪ್ರಾಚಾರ್ಯರಾದ ಎಂ.ಪಿ. ಚಂದ್ರಿಕಾ, ಕುಟುಂಬ ವ್ಯವಸ್ಥೆಯಲ್ಲಿ ಅವಿಭಕ್ತ ಸಂಪ್ರದಾಯ ಮರೆಯಾಗುತ್ತಿದೆ. ಮಕ್ಕಳಿಗೆ ಪರಂಪರೆ, ಸಂಸ್ಕೃತಿ ಕಲಿಸಿಕೊಡಬೇಕು ಎಂದರು.

ಬಾಗಲಕೋಟೆಯ ವಿಶ್ವರಾಜೇಂದ್ರ ಸ್ವಾಮೀಜಿ, ಗುಳೇದಗುಡ್ಡದ ಮುರುಘಾ ಮಠದ ಶ್ರೀ ಸಾನ್ನಿಧ್ಯ ವಹಿಸಿದ್ದರು. ಸಮ್ಮೇಳನ ಸಂಚಾಲನಾ ಸಮಿತಿ ಅಧ್ಯಕ್ಷ ಮಹೇಶ ಅಥಣಿ ಇದ್ದರು.

ಶೋಭಾಯಾತ್ರೆಯಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ರಾಜ್ಯಸಭೆ ಸದಸ್ಯ ನಾರಾಯಣ ಭಾಂಡಗೆ, ಮಾಜಿ ಶಾಸಕ ವೀರಣ್ಣ ಚರಂತಿಮಠ, ವಿಧಾನಪರಿಷತ್ ಸದಸ್ಯ ಪಿ.ಎಚ್.ಪೂಜಾರ, ಮಾಜಿ ಶಾಸಕ ರಾಜಶೇಖರ ಶೀಲವಂತ, ಮುಖಂಡರಾದ ಕುಮಾರಸ್ವಾಮಿ ಹಿರೇಮಠ, ಕಿರಣ ಪವಾಡಶೆಟ್ಟರ್, ಅಶೋಕ ಲಿಂಬಾವಳಿ, ಶೇಖರ ಮಾನೆ ಪಾಲ್ಗೊಂಡಿದ್ದರು

ಬಾಗಲಕೋಟೆಯ ಪಂಕಾ ಮಸೀದಿ ರಸ್ತೆಯ ಎರಡೂ ಬದಿ ಏನೂ ಕಾಣದಂತೆ ಪರದೆ ಹಾಕಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.