
ಮುಧೋಳ: ಯುವಜನೋತ್ಸವ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರುವ ಮಹತ್ವದ ವೇದಿಕೆ. ಪಠ್ಯಾಭ್ಯಾಸದ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗಲೇ ಸಂಪೂರ್ಣ ವ್ಯಕ್ತಿತ್ವ ವಿಕಸನ ಸಾಧ್ಯ ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಗುರುತಿಸಿಕೊಂಡು ರಾಜ್ಯಮಟ್ಟಕ್ಕೆ ಆಯ್ಕೆಯಾಗುವಂತೆ ಶ್ರಮಿಸಬೇಕೆಂದು ಕ.ರಾ.ಅ.ಮ.ವಿ.ವಿ. ಕುಲಪತಿ ಪ್ರೊ ವಿಜಯಾ ಬಿ. ಕೋರಿಶೆಟ್ಟಿ ಹೇಳಿದರು.
ಅವರು ಶುಕ್ರವಾರ ನಗರದ ಬಿವಿವಿಎಸ್ ಕ್ಯಾಂಪಸ್‌ನಲ್ಲಿ ಆಯೋಜಿಸಲಾಗಿದ್ದ ಕ.ರಾ.ಅ.ಮ.ವಿ.ವಿ. ವಿಜಯಪುರ ಹಾಗೂ ದಾನಮ್ಮದೇವಿ ಮಹಿಳಾ ಕಾಲೇಜು ಸಹಯೋಗದಲ್ಲಿ ಅಂತರ್ ಮಹಿಳಾ ಕಾಲೇಜಗಳ ಮೂರು ದಿನಗಳ ಯುವಜನೋತ್ಸವ 2025-26ರ 20ನೇ ಶಕ್ತಿ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಜ್ಯದ ವಿವಿಧ ಭಾಗಗಳಿಂದ 25ಕ್ಕೂ ಹೆಚ್ಚು ಕಾಲೇಜಗಳು 1200ಕ್ಕೂ ಅಧಿಕ ವಿದ್ಯಾರ್ಥಿನಿಯರು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲು ಹೆಸರನ್ನು ನೋಂದಣಿ ಮಾಡಿಕೊಂಡಿದ್ದಾರೆ ಎಂದರು.
ಕ.ರಾ.ಅ.ಮ.ವಿ.ವಿ ವಿಶ್ರಾಂತ ಕುಲಪತಿ ಪ್ರೊ ಮೀನಾ ಚಂದಾವರಕರ ಮಾತನಾಡಿ, ಇಂದಿನ ಒತ್ತಡದ ಜೀವನದಲ್ಲಿ ಉಲ್ಲಾಸದಿಂದ ಇರಬೇಕಾದರೆ ವಿದ್ಯಾರ್ಥಿನಿಯರು ತಮ್ಮ ಕಲಿಕೆಯ ಜೊತೆಗೆ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಆನಂದಿಸಬೇಕು, ಸೃಜನಾತ್ಮಕ ಕೌಶಲಾಧಾರಿತ ಕಲೆಯನ್ನು ಬೆಳೆಸಿಕೊಳ್ಳಬೇಕೆಂದು ಹೇಳಿ, ಎಲ್ಲ ಕಾಲೇಜುಗಳ ವಿದ್ಯಾರ್ಥಿಗಳು ಇಂತಹ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಅವರನ್ನು ಪ್ರೇರಿಪಿಸಬೇಕೆಂದರು.
ಕ.ರಾ.ಅ.ಮ.ವಿ.ವಿ ಕುಲಸಚಿವ (ಆಡಳಿತ) ಶಂಕರಗೌಡ ಸೋಮನಾಳ ಮಾತನಾಡಿದರು.
ಬಾಗಲಕೋಟೆ ಬಿವಿವಿ ಸಂಘದ ಕಾಲೇಜುಗಳ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಗುರುಬಸವ ಸೂಳಿಭಾವಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಸ್ಥೆ ವ್ಯಾಪ್ತಿಯಲ್ಲಿ 184 ಅಂಗ ಸಂಸ್ಥೆಗಳಿವೆ, ಯುಜಿ ಟು ಪಿಜಿ ಗಳಲ್ಲದೆ ಎಂಜನಿಯರಿಂಗ್, ಮೆಡಿಕಲ್, ಬಿಬಿಎ, ಎಂಬಿಎ ಸೇರಿದಂತೆ ವಿವಿಧ ತರಬೇತಿ ಕೇಂದ್ರಗಳ ಮೂಲಕ 50 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗುತ್ತದೆ. 35 ಹಾಸ್ಟೆಲ್, 200 ಸ್ಕೂಲ್ ಬಸ್, 6 ಸಾವಿರ ಶಿಕ್ಷಕರು ಇದ್ದಾರೆ. ಒಟ್ಟಾರೆ ವಿ.ವಿ. ಮಾಡುವ ಕೆಲಸವನ್ನು ನಮ್ಮ ಸಂಸ್ಥೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಕ.ರಾ.ಅ.ಮ.ವಿ.ವಿ. ದ ವಿದ್ಯಾರ್ಥಿನಿ ಕ್ಷೇಮಪಾಲನ ನಿರ್ದೇಶಕಿ ಪ್ರೊ.ಜ್ಯೋತಿ ಉಪಾಧ್ಯೆ ಪ್ರಾಸ್ತಾವಿಕ ವಾಗಿ ಮಾತನಾಡಿದರು, ಕ.ರಾ.ಅ.ಮ.ವಿ.ವಿ ಡೀನ್, ಶಿಕ್ಷಣ ನಿಕಾಯ ಹೂವಣ್ಣ ಸಕ್ವಾಲ್ ಸಂದೇಶ ವಾಚನ ಮಾಡಿದರು, ದಾನಮ್ಮದೇವಿ ಮಹಿಳಾ ಕಾಲೇಜಿನ ಪ್ರಾಚಾರ್ಯ ಪ್ರೊ.ಎಂ.ಎಂ. ಹಿರೇಮಠ ಸ್ವಾಗತಿಸಿದರು, ಪ್ರೊ.ಎ.ಎನ್.ಬಾಗೇವಾಡಿ ಅತಿಥಿಗಳನ್ನು ಪರಿಚಯಿಸಿದರು, ಮಲ್ಲಿಕಾರ್ಜುನ ಎಂ ಮತ್ತು ಪ್ರೋ.ಎ.ಸಿ.ಕೆರೂರ ನಿರೂಪಿಸಿದರು, ಪ್ರೊ.ಎಸ್.ಬಿ.ಕಬ್ಬಿಣದ ವಂದಿಸಿದರು, ಅಕ್ಷತಾ ಹಾಗೂ ದೀಪಾ ಸಂಗಡಿಗರು ಪ್ರಾರ್ಥನೆ ಹೇಳಿದರು, ಸುರೇಖಾ ದಳವಾಯಿ ಹಾಗೂ ಸಂಗಡಿಗರು ಮಹಿಳಾ ಗೀತೆ ಹೇಳಿದರು.
ವಿವಿಧ ಕಾಲೇಜುಗಳಿಂದ ಆಗಮಿಸಿದ್ದ ವಿದ್ಯಾರ್ಥಿನಿಯರ ಆಕರ್ಷಕ ಕಲಾತಂಡವು ನಗರದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.