ADVERTISEMENT

ಆಧಾರ್ ಕಾರ್ಡ್: ನೋಂದಣಿ ಪ್ರಾರಂಭ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2011, 5:45 IST
Last Updated 21 ಸೆಪ್ಟೆಂಬರ್ 2011, 5:45 IST

ಬಳ್ಳಾರಿ: ದೇಶದ ಪ್ರತಿ ನಿವಾಸಿಗೆ ವಿಶಿಷ್ಟ ಗುರುತಿನ ಚೀಟಿ  ನೀಡಲು ಕೇಂದ್ರ ಸರ್ಕಾರ ಆರಂಭಿಸಿರುವ `ಆಧಾರ್~ ಯೋಜನೆಯ ನೋಂದಣಿ ಕಾರ್ಯಕ್ರಮಕ್ಕೆ  ನಗರದ ಮುನಿಸಿಪಲ್ ಕಾಲೇಜು ಆವರಣದಲ್ಲಿ ಮಂಗಳವಾರ ಚಾಲನೆ ನೀಡಲಾಯಿತು.

ತಮ್ಮ ಅರ್ಜಿ ತುಂಬಿ ಕೊಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಮೇಯರ್ ಪಾರ್ವತಿ ಇಂದುಶೇಖರ್,  ದೇಶದ ಪ್ರತಿಯೊಬ್ಬ ಪ್ರಜೆ ಸರ್ಕಾರ ಮತ್ತು ಸರ್ಕಾರೇತರ ಸೌಲಭ್ಯ ಪಡೆಯಲು `ಆಧಾರ್~ ಯೋಜನೆಯಡಿ ನೀಡಲಾಗುವ ಕಾರ್ಡ್ ನೀಡುವುದು ಅಗತ್ಯವಾಗಿದೆ ಎಂದರು.

ಕರ್ನಾಟಕ ಸರ್ಕಾರ `ಆಧಾರ್~ ಗುರುತಿನ ಚೀಟಿಯನ್ನು ಕಡ್ಡಾಯ ಮಾಡಿದ್ದು, ಪ್ರತಿಯೊಬ್ಬರೂ ಈ ಗುರುತಿನಚೀಟಿ ಹೊಂದುವಂತಾಗಬೇಕು. `ಆಧಾರ್~ ಗುರುತಿನ ಚೀಟಿ ಇತರೆ ಸೌಲಭ್ಯಗಳನ್ನು ಪಡೆಯಲು ರಹದಾರಿಯಾಗಿದೆ. ನೋಂದಣಿಗೆ ಮೂಲ ದಾಖಲೆಗಳಾದ ವಿಳಾಸ, ಭಾವಚಿತ್ರವುಳ್ಳ ಗುರುತಿನ ಚೀಟಿ, ಜನ್ಮದಿನಾಂಕ ದೃಢೀಕರಣ ಪತ್ರ, ಲಿಂಗ ಮತ್ತು ಬೆರಳಚ್ಚು ಅಗತ್ಯ. ಈ ಗುರುತಿನ ಚೀಟಿಯನ್ನು ಜಿಲ್ಲಾಡಳಿತದಿಂದ ಸ್ಥಾಪಿಸಲಾದ ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿಗಳಲ್ಲಿರುವ ನೋಂದಣಿ ಕೇಂದ್ರಗಳು ಬಳ್ಳಾರಿ- ಒನ್ ಕೇಂದ್ರಗಳಲ್ಲಿ ದಾಖಲೆ ಒದಗಿಸಿ, ಪಡೆಯಬಹುದು ಎಂದು ಅವರು ವಿವರಿಸಿದರು.
ಸಾರ್ವಜನಿಕರು ಆಧಾರ್ ಗುರುತಿನ ಚೀಟಿ ಪಡೆದು, ಸರ್ಕಾರ ನೀಡುತ್ತಿರುವ  ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.

ಈಗಾಗಲೇ ಜಿಲ್ಲಾಡಳಿತ ಹಾಗೂ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ (ಬುಡಾ) ಕಚೇರಿ ಆವರಣದಲ್ಲಿ ಎರಡು ಕೇಂದ್ರಗಳನ್ನು ತೆರೆಯಲಾಗಿದೆ.  ಜನಸಾಮಾನ್ಯರಿಗೆ ಶೀಘ್ರವೇ ಆಧಾರ್ ಕಾರ್ಡ್ ನೀಡುವ ಸಲುವಾಗಿ ಇನ್ನೂ 10 ಕೇಂದ್ರಗಳನ್ನು ತೆರೆಯಲಾಗುವುದು ಎಂದು ಉಪ ವಿಭಾಗಾಧಿಕಾರಿ ಶಶಿಕಾಂತ್ ಸೆಂಥಿಲ್ ತಿಳಿಸಿದರು.

ಆಧಾರ್ ಸಂಖ್ಯೆ ಪಡೆಯುವುದರಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸೌಲಭ್ಯ ಪಡೆಯುವುದು ಸುಲಭವಾಗುತ್ತದೆ.  ಈ ಸಂಖ್ಯೆಯ ವಿತರಣೆಗೆ ಬೆರಳಚ್ಚು, ಅಕ್ಷಿಪಟಲದ ಸ್ಕ್ಯಾನ್, ಭಾವಚಿತ್ರ  ಸಂಗ್ರಹಿಸಲಾಗುತ್ತದೆ.

30 ದಿನಗಳ ನಂತರ  ಆಧಾರ್ ಸಂಖ್ಯೆ ಲಭ್ಯವಾಗಲಿದೆ.  ಆಧಾರ್ 12 ಅಂಕಿಗಳ ಸಂಖ್ಯೆ ಹೊಂದಿದ್ದು, ಈಗ ತಾನೆ ಹುಟ್ಟಿದ ಮಗುವಿನಿಂದ ವಯೋವೃದ್ಧರವರೆಗೆ ಈ ಸಂಖ್ಯೆ ಲಭ್ಯವಾಗಲಿದೆ ಎಂದು ಅವರು ತಿಳಿಸಿದರು.

ಈ ಸೇವೆ ಉಚಿತವಾಗಿದ್ದು, ಆಧಾರ್ ಪ್ರತಿಯೊಬ್ಬರ ಹಕ್ಕಾಗಿದೆ ಎಂದು  ಪೌರಾಯುಕ್ತ ಡಿ.ಎಲ್. ನಾರಾಯಣ ಹೇಳಿದರು. ತಹಶೀಲ್ದಾರ್ ಶಶಿಧರ್ ಬಗಲಿ, ಪಾಲಿಕೆ ಸದಸ್ಯ ನೇಮಿಕಲ್‌ರಾವ್, ರಾಜು ಹಾಗೂ ಜಿಲ್ಲಾ ಸಮನ್ವಯಾಧಿಕಾರಿ ರಂಗನಾಥ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.