
ಬಳ್ಳಾರಿ: ಪತ್ನಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಜಾಫರ್ ಸಾಧಿಕ್ (28) ಎಂಬಾತನನ್ನು ಬಳ್ಳಾರಿಯ ಮಹಿಳಾ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಫರ್ಜಾನಾ (21) ಮೃತ ಮಹಿಳೆ. ಫರ್ಜಾನಾರನ್ನು 6 ವರ್ಷಗಳ ಹಿಂದೆ ಕೌಲ್ ಬಜಾರ್‌ನ ಕವಾಡಿ ಸ್ಟ್ರೀಟ್‌ನ ವಾಸಿ ಜಾಫರ್ ಸಾಧಿಕ್ ವಿವಾಹವಾಗಿದ್ದ. ಕೇವಲ ಐದಾರು ತಿಂಗಳು ಪತ್ನಿ ಫರ್ಜಾನಾರನ್ನು ಚೆನ್ನಾಗಿ ನೋಡಿಕೊಂಡಿದ್ದ ಆತ, ನಂತರ ದೈಹಿಕವಾಗಿ, ಮಾನಸಿಕವಾಗಿ ಹಿಂಸೆ ನೀಡಲಾರಂಭಿಸಿದ್ದ ಎಂದು ಫರ್ಜಾನಾ ಸೋದರಿ ಪೊಲೀಸರಿಗೆ ದೂರಿದ್ದಾರೆ.
ಸಾಧಿಕ್‌ಗೆ ಬೇರೆ ಮಹಿಳೆಯೊರಂದಿಗೆ ಸಂಬಂಧವಿತ್ತು ಎನ್ನಲಾಗಿದೆ. ನೀನು ಸತ್ತರೆ ನಾನು ಬೇರೊಂದು ಮದುವೆಯಾಗುವುದಾಗಿ ಫರ್ಜಾನಾಗೆ ಹಿಂಸೆ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ.
ಪತಿಯ ಕಾಟ ತಾಳದ ಫರ್ಜಾನಾ ಫೆ.24ರಂದು ವಿಷದ ಮಾತ್ರೆ ಸೇವಿಸಿದ್ದರು. ಅದೇ ದಿನ ಅವರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೂ ದಾಖಲಿಸಲಾಗಿತ್ತು. ಆದರೆ, ಚೇತರಿಸಿಕೊಳ್ಳದ ಫರ್ಜಾನಾ ಫೆ. 27ರಂದು ಮೃತಪಟ್ಟಿದ್ದಾರೆ. ಫರ್ಜಾನಾ ಸಾವಿಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಜಾಫರ್ ಸಾಧಿಕ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.