ADVERTISEMENT

ಹಂಪಿ: ಅನಧಿಕೃತ ಹೋಂ ಸ್ಟೇಗಳಿಗೆ ಲಗಾಮು

ಕ್ರಮಕ್ಕೆ ಮುಂದಾದ ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 7 ಜನವರಿ 2021, 19:30 IST
Last Updated 7 ಜನವರಿ 2021, 19:30 IST
ಹಂಪಿ ಸಮೀಪದ ಕಡ್ಡಿರಾಂಪುರ ಗ್ರಾಮ
ಹಂಪಿ ಸಮೀಪದ ಕಡ್ಡಿರಾಂಪುರ ಗ್ರಾಮ   

ಹೊಸಪೇಟೆ: ವಿಶ್ವವಿಖ್ಯಾತ ಹಂಪಿ ಸುತ್ತಮುತ್ತಲೂ ತಲೆ ಎತ್ತಿರುವ ಅನಧಿಕೃತ ಹೋಂ ಸ್ಟೇ, ರೆಸಾರ್ಟ್‌ಗಳ ಮೇಲೆ ಲಗಾಮು ಹಾಕಲು ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರ ಮುಂದಾಗಿದೆ.

ತುಂಗಭದ್ರಾ ನದಿ ದಂಡೆಯ ವಿರೂಪಾಪುರ ಗಡ್ಡೆಯಲ್ಲಿ ಅನೇಕ ವರ್ಷಗಳಿಂದ ನಡೆಯುತ್ತಿದ್ದ ಹೋಂ ಸ್ಟೇ, ರೆಸಾರ್ಟ್‌ಗಳನ್ನು ಸುಪ್ರೀಂಕೋರ್ಟ್‌ ಆದೇಶದ ಮೇರೆಗೆ ತೆರವುಗೊಳಿಸಲಾಗಿದೆ. ಇದಾದ ನಂತರ ಹಂಪಿ ಸುತ್ತಮುತ್ತ ಪ್ರವಾಸಿಗರ ಸಂಖ್ಯೆಗೆ ತಕ್ಕಷ್ಟು ಹೋಂ ಸ್ಟೇಗಳಿಲ್ಲ. ಅಲ್ಲಲ್ಲಿ ಕೆಲವು ಕಡೆ ಇದ್ದರೂ ಅವುಗಳು ದುಬಾರಿ ಬೆಲೆ ಹೊಂದಿವೆ.

ಆದರೆ, ಇದನ್ನೇ ಬಂಡವಾಳ ಮಾಡಿಕೊಂಡು ಕಮಲಾಪುರ, ಕಡ್ಡಿರಾಂಪುರ, ಹೊಸ ಹಂಪಿ, ತಳವಾರಘಟ್ಟ, ಗಂಗಾವತಿ ರಸ್ತೆಯಲ್ಲಿ ಕೆಲವರು ಹೊಸದಾಗಿ ಹೋಂ ಸ್ಟೇ, ರೆಸಾರ್ಟ್‌ಗಳನ್ನು ಆರಂಭಿಸಿದ್ದಾರೆ. ಮತ್ತೆ ಕೆಲವರು ಅವರ ಮನೆಗಳನ್ನೇ ಹೋಂ ಸ್ಟೇಗಳಾಗಿ ಬದಲಿಸಿದ್ದಾರೆ. ಪ್ರವಾಸಿಗರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಹೋಗುತ್ತಿದ್ದಾರೆ. ಆದರೆ, ಬಹುತೇಕ ಹೋಂ ಸ್ಟೇ, ರೆಸಾರ್ಟ್‌ನವರು ಪ್ರಾಧಿಕಾರದಿಂದ ಅನುಮತಿ ಪಡೆದಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತು ಪ್ರಾಧಿಕಾರಕ್ಕೆ ದೂರು ಕೂಡ ಸಲ್ಲಿಕೆಯಾಗಿತ್ತು. ಹಾಗಾಗಿಯೇ ಪ್ರಾಧಿಕಾರವು ಅನಧಿಕೃತ ಹೋಂ ಸ್ಟೇ, ರೆಸಾರ್ಟ್‌ಗಳ ಮೇಲೆ ಲಗಾಮು ಹಾಕಲು ಮುಂದಾಗಿದೆ.

ADVERTISEMENT

ಗ್ರಾಮ ಪಂಚಾಯಿತಿ ಸಿಬ್ಬಂದಿ, ಕಂದಾಯ ಇಲಾಖೆ, ಪ್ರಾಧಿಕಾರ ಹಾಗೂ ಸ್ಥಳೀಯ ಪೊಲೀಸರನ್ನು ಒಳಗೊಂಡ ತಂಡವು ಕಮಲಾಪುರ, ಕಡ್ಡಿರಾಂಪುರ, ಹೊಸ ಹಂಪಿಯಲ್ಲಿ ತಲೆ ಎತ್ತಿರುವ ಹೋಂ ಸ್ಟೇ, ರೆಸಾರ್ಟ್‌ಗಳಿಗೆ ಭೇಟಿ ನೀಡಿ ಪರಿಶೀಲನೆಗೆ ಮುಂದಾಗಿದ್ದಾರೆ. ಪ್ರಾಧಿಕಾರದಿಂದ ಅನುಮತಿ ಪಡೆಯದೇ ನಡೆಸುತ್ತಿದ್ದ 20 ಹೋಂ ಸ್ಟೇಗಳನ್ನು ಈಗಾಗಲೇ ಮುಚ್ಚಿಸಿದ್ದಾರೆ. ಈ ವಿಷಯವನ್ನು ಪ್ರಾಧಿಕಾರದ ಆಯುಕ್ತ ಸಿದ್ದರಾಮೇಶ್ವರ ಅವರು ಬುಧವಾರ ‘ಪ್ರಜಾವಾಣಿ’ಗೆ ಖಚಿತಪಡಿಸಿದ್ದಾರೆ.

‘ಕಡ್ಡಿರಾಂಪುರ ಗ್ರಾಮವೊಂದರಲ್ಲೇ ಅನಧಿಕೃತವಾಗಿ ನಡೆಸುತ್ತಿದ್ದ 20 ಹೋಂ ಸ್ಟೇಗಳನ್ನು ಮುಚ್ಚಿಸಲಾಗಿದೆ. ಹಂಪಿ ಪರಿಸರದಲ್ಲಿರುವ ಎಲ್ಲ ಹೋಂ ಸ್ಟೇ, ರೆಸಾರ್ಟ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ. ಒಂದುವೇಳೆ ಅನುಮತಿ ಪಡೆಯದೆ ನಡೆಸುತ್ತಿದ್ದರೆ ಅವುಗಳನ್ನು ಸಹ ಮುಚ್ಚಿಸಲಾಗುವುದು’ ಎಂದು ಸಿದ್ದರಾಮೇಶ್ವರ ತಿಳಿಸಿದ್ದಾರೆ.

‘ಕಡ್ಡಿರಾಂಪುರದಲ್ಲಿ ಹೋಂ ಸ್ಟೇ ನಡೆಸುತ್ತಿರುವ ಎಲ್ಲರೂ ಸ್ಥಳೀಯ ಪೊಲೀಸರಿಂದ ಅನುಮತಿ ಪಡೆದುಕೊಂಡಿದ್ದಾರೆ. ಲಾಕ್‌ಡೌನ್‌ನಿಂದ ಕೆಲಸವಿಲ್ಲದೆ ಸ್ಥಳೀಯರು ತೊಂದರೆಗೆ ಒಳಗಾಗಿದ್ದಾರೆ. ಸದ್ಯ ತಾತ್ಕಾಲಿಕವಾಗಿ ಕೆಲವರು ಮನೆಗಳಲ್ಲೇ ಹೋಂ ಸ್ಟೇ ನಡೆಸುತ್ತಿದ್ದಾರೆ. ಪ್ರಾಧಿಕಾರದಿಂದಲೂ ಅನುಮತಿ ಪಡೆದುಕೊಳ್ಳುತ್ತಾರೆ. ಅನುಮತಿ ಸಿಗುವವರೆಗೆ ಹೋಂ ಸ್ಟೇ ನಡೆಸಲು ಅವಕಾಶ ಮಾಡಿಕೊಡಬೇಕು. ಹಂಪಿಗೆ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದು, ಕೆಲಸ ನಡೆಯುತ್ತಿದೆ. ಈ ಸಂದರ್ಭದಲ್ಲಿ ಮುಚ್ಚಿದರೆ ಮತ್ತಷ್ಟು ತೊಂದರೆಯಾಗುತ್ತದೆ’ ಎಂದು ಹೆಸರು ಹೇಳಲಿಚ್ಛಿಸದ ಹೋಂ ಸ್ಟೇ ಮಾಲೀಕರೊಬ್ಬರು ‘ಪ್ರಜಾವಾಣಿ’ ಎದುರು ಗೋಳು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.