
ಹಗರಿಬೊಮ್ಮನಹಳ್ಳಿ: ತಾಲ್ಲೂಕಿನಲ್ಲಿರುವ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರೌಢಶಾಲೆಗಳಲ್ಲಿ ಎಸ್‍ಎಸ್‍ಎಲ್‍ಸಿ ಫಲಿತಾಂಶ ಕಳೆಪೆಯಾಗಿದೆ. ಫಲಿತಾಂಶವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಶಿಕ್ಷಕರು ಶ್ರಮವಹಿಸಬೇಕು. ತೆಗೆದುಕೊಳ್ಳುವ ವೇತನಕ್ಕೆ ಸರಿಯಾಗಿ ನ್ಯಾಯ ಒದಗಿಸಬೇಕು ಎಂದು ಶಾಸಕ ಕೆ.ನೇಮರಾಜನಾಯ್ಕ ಹೇಳಿದರು.
ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ‘ಎಸ್‍ಎಸ್‍ಎಲ್‍ಸಿ ಫಲಿತಾಂಶ ವೃದ್ಧಿಗಾಗಿ ಪ್ರಗತಿ ಪಥ-2026’ ಸಭೆಯಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಕೇವಲ ಸಾಮಾನ್ಯ ದರ್ಜೆಯಲ್ಲಿ ಉತ್ತೀರ್ಣವಾಗುವುದಾದರೆ ಶಿಕ್ಷಕರ ಶ್ರಮ ಏನು? ಶಾಲೆಯಲ್ಲಿ ಏನು ಮಾಡುತ್ತಿದ್ದೀರಿ ಎಂದು ಮುಖ್ಯ ಶಿಕ್ಷಕರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಕನಿಷ್ಠ ಫಲಿತಾಂಶ ಬಂದಿರುವ ಎಲ್ಲ ಶಾಲೆಗಳಿಗೆ ನೋಟಿಸ್ ನೀಡುವಂತೆ ಬಿಇಒ ಪ್ರಭಾಕರ ಅವರಿಗೆ ಸೂಚಿಸಿದರು. ಉತ್ತಮ ಫಲಿತಾಂಶ ಕಾಯ್ದುಕೊಳ್ಳಲು ಬೇಕಾದ ವಿಶೇಷ ತರಗತಿಗಳನ್ನು ತೆಗೆದುಕೊಳ್ಳಿ, ಗುಣಮಟ್ಟಕ್ಕೆ ಮೊದಲ ಆದ್ಯತೆ ಕೊಡಿ ಎಂದು ಸೂಚಿಸಿದರು. ಮುಂಬರುವ ಪರೀಕ್ಷೆಯಲ್ಲಿ ಕಳಪೆ ಫಲಿತಾಂಶ ಬರುವ ಶಾಲೆಯ ಮುಖ್ಯ ಶಿಕ್ಷಕರು ಮತ್ತು ವಿಷಯ ಶಿಕ್ಷಕರ ವಿರುದ್ಧ ಕ್ರಮ ಜರುಗಿಸುವ ಎಚ್ಚರಿಕೆ ನೀಡಿದರು.
ಸರ್ಕಾರಿ ಶಾಲೆಗಳಲ್ಲಿ ಬಡವರು ಮತ್ತು ರೈತರ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ಅವರ ಭವಿಷ್ಯ ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಅವರ ಉಜ್ವಲ ಬದುಕು ನಿಮ್ಮ ಎಲ್ಲರ ಕೈಯಲ್ಲಿದೆ. ಗುರುವಿನ ಗೌರವಕ್ಕೆ ಬೆಲೆ ಸಿಗುವಲ್ಲಿ ಜವಾಬ್ದಾರಿಯಿಂದ ವರ್ತಿಸಬೇಕು ಎಂದರು.
ಅನುದಾನಿತ ಶಾಲೆಗಳಲ್ಲಿ ಕಳಪೆ ಫಲಿತಾಂಶ ಬಂದಲ್ಲಿ ಅನುದಾನ ಕಡಿತಗೊಳಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು, ಅನುದಾನ ರಹಿತ ಶಾಲೆಗಳ ಅನುಮತಿಯನ್ನು ರದ್ದುಪಡಿಸುವುದಾಗಿ ಹೇಳಿದರು.
ಸಭೆಯಲ್ಲಿ ಗೈರು ಹಾಜರಾಗಿರುವ ಮುಖ್ಯ ಶಿಕ್ಷಕರಿಗೆ ನೋಟಿಸ್ ನೋಡಿವಂತೆ ಸೂಚನೆ ನೀಡಿದರು, ಕ್ರಿಸ್ತಶರಣ ವಿದ್ಯಾಪೀಠದ ಪ್ರೌಢಶಾಲೆಯ ಶಿಕ್ಷಕರ ಬದಲಾಗಿ ಪ್ರಾಥಮಿಕ ಶಾಲೆಯ ಶಿಕ್ಷಕರು ಸಭೆಯಲ್ಲಿ ಹಾಜರಾಗಿದ್ದಕ್ಕೆ ಶಾಸಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕೆಲವು ಸರ್ಕಾರಿ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರ ಬದಲಾಗಿ ಸಹ ಶಿಕ್ಷಕರು ಸಭೆಯಲ್ಲಿದ್ದರು.
ತಾಲ್ಲೂಕು ಪಂಚಾಯಿತಿ ಇಒ ಪಾಲಯ್ಯನಕೋಟೆ ವಿಶ್ವನಾಥ, ಬಿಇಒ ಎಂ.ಎಸ್.ಪ್ರಭಾಕರ, ಜಿಲ್ಲಾ ನೋಡೆಲ್ ಅಧಿಕಾರಿಗಳಾದ ರಾಜಶೇಖರ, ಎಚ್.ಎಂ.ಹುಲಿಬಂಡಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಾಜಕುಮಾರನಾಯ್ಕ, ಉಪ ತಹಶೀಲ್ದಾರ್ ಶಿವಕುಮಾರಗೌಡ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಪಿ.ಎಂ.ಮಂಜುನಾಥ, ಸಹ ಶಿಕ್ಷಕರ ಸಂಘದ ಅಧ್ಯಕ್ಷ ರವಿಚಂದ್ರನಾಯ್ಕ, ಶಿಕ್ಷಣ ಸಂಯೋಜಕರಾದ ಗುರುಬಸವರಾಜ, ಶಿವಲಿಂಗಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.