ADVERTISEMENT

ಬಳ್ಳಾರಿ: ಸೌಲಭ್ಯ ವಂಚಿತ ಅಂಬೇಡ್ಕರ್ ಕಾಲೊನಿ

​ಪ್ರಜಾವಾಣಿ ವಾರ್ತೆ
Published 6 ಜುಲೈ 2021, 19:30 IST
Last Updated 6 ಜುಲೈ 2021, 19:30 IST
ಕೊಟ್ಟೂರಿನ ಡಾ.ಬಿ.ಆರ್‌. ಅಂಬೇಡ್ಕರ್‌ ಕಾಲೊನಿಯಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ನಿರ್ವಹಣೆ ಕೊರತೆಯಿಂದ ಅದರ ಸುತ್ತಲೂ ಪೊದೆ ಬೆಳೆದು ನಿಂತಿದೆ
ಕೊಟ್ಟೂರಿನ ಡಾ.ಬಿ.ಆರ್‌. ಅಂಬೇಡ್ಕರ್‌ ಕಾಲೊನಿಯಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ನಿರ್ವಹಣೆ ಕೊರತೆಯಿಂದ ಅದರ ಸುತ್ತಲೂ ಪೊದೆ ಬೆಳೆದು ನಿಂತಿದೆ   

ಕೊಟ್ಟೂರು: ಇಲ್ಲಿನ ಹ್ಯಾಳ್ಯಾ ರಸ್ತೆಯ ಡಾ.ಬಿ.ಆರ್‌. ಅಂಬೇಡ್ಕರ್ ಕಾಲೊನಿಯಲ್ಲಿ ಕನಿಷ್ಠ ಮೂಲಸೌಕರ್ಯಗಳಿಲ್ಲ. ಇದರಿಂದಾಗಿ ಸ್ಥಳೀಯರು ಅನೇಕ ರೀತಿಯ ತೊಂದರೆ ಎದುರಿಸುವಂತಾಗಿದೆ.

ಸೂಕ್ತ ರಸ್ತೆ, ಬೀದಿ ದೀಪಗಳು, ಚರಂಡಿ ವ್ಯವಸ್ಥೆ ಇಲ್ಲ. ರಸ್ತೆಯ ಮೇಲೆ ಸದಾ ಬೀದಿ ನಾಯಿಗಳು, ದನಗಳು ಬೀಡುಬಿಟ್ಟಿರುತ್ತವೆ. ಚರಂಡಿ ಹೊಲಸು ರಸ್ತೆಯ ಮೇಲೆ ಹರಿಯುತ್ತದೆ. ಇದು ದುರ್ಗಂಧಕ್ಕೆ ಕಾರಣವಾಗಿದೆ. ಬೀದಿ ದೀಪಗಳು ಇಲ್ಲದೆ ಇರುವುದರಿಂದ ರಾತ್ರಿ ವೇಳೆ ಅಪಘಾತಗಳು ಸರ್ವೇ ಸಾಮಾನ್ಯ ಎಂಬಂತಾಗಿದೆ. ಅಷ್ಟೇ ಅಲ್ಲ, ರಾತ್ರಿ ಬೀದಿ ನಾಯಿಗಳು ಜನರ ಮೇಲೆ ಎರಗಿ ಬೀಳುತ್ತವೆ.

ಕಾಲೊನಿಯ ಸರ್ಕಾರಿ ಕಟ್ಟಡಗಳು, ಖಾಲಿ ಜಾಗದಲ್ಲಿ ಮುಳ್ಳು, ಕಂಟಿ ಬೆಳೆದು ನಿಂತಿದೆ. ಜನ ಅದನ್ನೇ ಬಯಲು ಶೌಚಾಲಯವಾಗಿ ಮಾಡಿಕೊಂಡಿದ್ದಾರೆ. ಶುದ್ಧ ಕುಡಿಯುವ ನೀರಿನ ಘಟಕ ಹಾಳಾಗಿ ಅನೇಕ ವರ್ಷಗಳೇ ಕಳೆದಿವೆ. ಅದನ್ನು ದುರಸ್ತಿಗೊಳಿಸುವ ಗೋಜಿಗೆ ಹೋಗಿಲ್ಲ. ಅದರ ಸುತ್ತಲೂ ಪೊದೆ ಬೆಳೆದು ನಿಂತಿದೆ. ಸ್ವಲ್ಪ ಮಳೆ ಬಂದರೂ ರಸ್ತೆಗಳೆಲ್ಲ ಕೊಚ್ಚೆಯಾಗುತ್ತವೆ. ಮನೆಗಳಿಗೂ ನೀರು ನುಗ್ಗುತ್ತದೆ.

‘ಬಡಾವಣೆಯಲ್ಲಿ ಯಾವುದೇ ರೀತಿಯ ಕನಿಷ್ಠ ಸೌಕರ್ಯಗಳನ್ನು ಕಲ್ಪಿಸಿಲ್ಲ. ಅನಿವಾರ್ಯವಾಗಿ ಇಲ್ಲಿ ವಾಸಿಸುತ್ತಿದ್ದೇವೆ. ಶುದ್ಧ ಕುಡಿಯುವ ನೀರು ಸಿಗುವುದಿಲ್ಲ. ಬೀದಿ ದೀಪಗಳಿಲ್ಲ. ಚರಂಡಿ ವ್ಯವಸ್ಥೆ ಇಲ್ಲದರಿಂದ ಸ್ವಲ್ಪ ಮಳೆ ಬಂದರೂ ಹೊಲಸಿನೊಂದಿಗೆ ನೀರು ಹರಿದು ಬಂದು, ಅವಾಂತರ ಸೃಷ್ಟಿಯಾಗುತ್ತದೆ’ ಎಂದು ಸ್ಥಳೀಯ ನಿವಾಸಿ ವೀರಭದ್ರ ಗೋಳು ತೋಡಿಕೊಂಡರು.

‘ಚುನಾವಣೆ ಬಂದಾಗಲಷ್ಟೇ ನಾವು ನೆನಪಾಗುತ್ತೇವೆ. ಎಲೆಕ್ಷನ್‌ ಮುಗಿದ ನಂತರ ಯಾರೊಬ್ಬರೂ ಸುಳಿಯುವುದಿಲ್ಲ. ಸಮಸ್ಯೆ ಬಗೆಹರಿಸದಿದ್ದರೆ ಮುಂದಿನ ಚುನಾವಣೆ ಬಹಿಷ್ಕರಿಸಲಾಗುವುದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.