ADVERTISEMENT

ಬಳ್ಳಾರಿ: ಎಪಿಎಂಸಿ ವಹಿವಾಟು ಸ್ಥಗಿತ

ಹಮಾಲರು – ವರ್ತಕರ ನಡುವೆ ವಿವಾದ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 1:54 IST
Last Updated 3 ಫೆಬ್ರುವರಿ 2026, 1:54 IST
ಬಳ್ಳಾರಿ ಎಪಿಎಂಸಿ ಮಾರುಕಟ್ಟೆ ಸೋಮವಾರ ಸ್ಥಗಿತಗೊಂಡಿದ್ದರಿಂದ ರೈತರು ತಮ್ಮ ಕೃಷಿ ಉತ್ಪನ್ನಗಳೊಂದಿಗೆ ಕಾಲದೂಡಿದ ದೃಶ್ಯ 
ಬಳ್ಳಾರಿ ಎಪಿಎಂಸಿ ಮಾರುಕಟ್ಟೆ ಸೋಮವಾರ ಸ್ಥಗಿತಗೊಂಡಿದ್ದರಿಂದ ರೈತರು ತಮ್ಮ ಕೃಷಿ ಉತ್ಪನ್ನಗಳೊಂದಿಗೆ ಕಾಲದೂಡಿದ ದೃಶ್ಯ    

ಬಳ್ಳಾರಿ: ಬಳ್ಳಾರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸ)ಯ ಪರವಾನಗಿದಾರ ಹಮಾಲರ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿ ಹಮಾಲರ ಸಂಘ ಸೋಮವಾರ ಮುಷ್ಕರ ಆರಂಭಿಸಿತು. ಹೀಗಾಗಿ ಮಾರುಕಟ್ಟೆಯಲ್ಲಿ ವಹಿವಾಟು ಸ್ಥಗಿತಗೊಂಡಿತು. 

ವರ್ತಕರು ನಮ್ಮ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಹಮಾಲರು ದೂರಿದರು. ಯಾವುದನ್ನೇ ಆಗಲಿ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು. ಮುಷ್ಕರ ಎಲ್ಲದಕ್ಕೂ ಪರಿಹಾರ ಅಲ್ಲ ಎಂದು ವರ್ತಕರು ಹೇಳಿದರು. 

ಎಪಿಎಂಸಿಯಲ್ಲಿ ಪರವಾನಗಿ ಪಡೆದ ಒಟ್ಟು 650 (ಪರುಷ ಮತ್ತು ಮಹಿಳೆಯರು ಸೇರಿ) ಮಂದಿ ಇದ್ದಾರೆ. ಎಲ್ಲರೂ ಮುಷ್ಕರದಲ್ಲಿ ಭಾಗಿಯಾಗಿದ್ದರಿಂದ ದಿನದ ವ್ಯಾಪಾರ– ವಹಿವಾಟು ಸ್ಥಗಿತಗೊಂಡಿತು. ಸೋಮವಾರ ಫಸಲನ್ನು ಬಳ್ಳಾರಿ ಎಪಿಎಂಸಿಗೆ ತಂದಿದ್ದ ರೈತರು ಮುಷ್ಕರದಿಂದಾಗಿ ತೊಂದರೆ ಅನುಭವಿಸಿದರು. 

ADVERTISEMENT

‘ಕುಡುತಿನಿಯಿಂದ ಮೆಕ್ಕೆಜೋಳ ತೆಗೆದುಕೊಂಡು ಬಂದಿದ್ದೇನೆ. ಈಗ ನೋಡಿದರೆ ವ್ಯಾಪಾರ ಇಲ್ಲ ಎಂದು ಹೇಳುತ್ತಿದ್ದಾರೆ. ಮಧ್ಯಾಹ್ನದ ವರೆಗೆ ನೋಡಿ, ಫಸಲು ಇಲ್ಲೇ ಬಿಟ್ಟು ಊರಿಗೆ ತೆರಳುತ್ತೇನೆ’ ಎಂದು ರೈತ ಪಂಪಾಪತಿ ಹೇಳಿದರು.  

ಹಮಾಲರ ಬೇಡಿಕೆಗಳೇನು?: ‘ಉತ್ಪನ್ನಗಳನ್ನು ಚೀಲಕ್ಕೆ ತುಂಬುವುದು, ಸುರಿಯುವುದು, ತೂಕ ಹಾಕುವುದಕ್ಕೆ ಚೀಲಕ್ಕೆ ₹15 ರೂಪಾಯಿ ಕೇಳಿದ್ದೇವೆ. ಖಾಲಿ ಚೀಲಗಳನ್ನು ಖರೀದಿದಾರರ ಬಳಿಯಿಂದ ದಲ್ಲಾಳಿಗಳ ಬಳಿಗೆ ತರಲು ಪ್ರತಿ ಚೀಲಕ್ಕೆ 30 ಪೈಸೆ ಕೇಳುತ್ತಿದ್ದೇವೆ’ ಎಂದು ಹಮಾಲರ ಸಂಘದ ಅಧ್ಯಕ್ಷ ಹನುಮಂತ ಹೇಳಿದರು. 

‘ಹೆಚ್ಚುವರಿ ಹಣ ಕೇಳಿದರೆ ವರ್ತರು ದಲ್ಲಾಳಿಗಳ ಬಳಿ ಮಾತಾಡಿ ಎನ್ನುತ್ತಿದ್ದಾರೆ. ಆದರೆ, ಹಣ ಕೊಡಬೇಕಾದವರು ವರ್ತಕರು ಹೀಗಾಗಿ ಮುಷ್ಕರ ಆರಂಭಿಸಿದ್ದೇವೆ’ ಎಂದು ಹೇಳಿದರು.

ಸಮಸ್ಯೆ ಇತ್ಯರ್ಥಕ್ಕೆ ಸಭೆ

ಹಮಾಲಿಗಳು ಮತ್ತು ವರ್ತಕರ ನಡುವೆ ತಲೆದೋರಿದ್ದ ಸಮಸ್ಯೆ ಬಗೆಹರಿಸಲು ಎಪಿಎಂಸಿ ಕಾರ್ಯದರ್ಶಿ ನೇತೃತ್ವದಲ್ಲಿ ಸೋಮವಾರ ಸಭೆ ನಡೆಯಿತು. ‘ಇಬ್ಬರೊಂದಿಗೂ ಸಮಾಲೋಚನೆ ನಡೆಸಲಾಗುತ್ತಿದೆ. ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಿಸಲಾಗುತ್ತಿದೆ ಎಂದು ಸಭೆಯಲ್ಲಿದ್ದ ಎಪಿಎಂಸಿ ಕಾರ್ಯದರ್ಶಿ ಜಯಕುಮಾರ್‌ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.