ADVERTISEMENT

‘2ಎ’ಗೆ ಸೇರಿಸಲು ಬಲಿಜರ ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2020, 8:11 IST
Last Updated 9 ಡಿಸೆಂಬರ್ 2020, 8:11 IST
ತಾಲ್ಲೂಕು ಬಲಿಜ ಸಂಘದವರು ಬುಧವಾರ ಹೊಸಪೇಟೆಯಲ್ಲಿ ತಹಶೀಲ್ದಾರ್‌ ಎಚ್. ವಿಶ್ವನಾಥ್‌ ಅವರಿಗೆ ಮನವಿ ಪತ್ರ ಸಲ್ಲಿಸಿದರು
ತಾಲ್ಲೂಕು ಬಲಿಜ ಸಂಘದವರು ಬುಧವಾರ ಹೊಸಪೇಟೆಯಲ್ಲಿ ತಹಶೀಲ್ದಾರ್‌ ಎಚ್. ವಿಶ್ವನಾಥ್‌ ಅವರಿಗೆ ಮನವಿ ಪತ್ರ ಸಲ್ಲಿಸಿದರು   

ಹೊಸಪೇಟೆ: ಜನಾಂಗವನ್ನು ‘2ಎ’ಗೆ ಸೇರಿಸಿ ಮೀಸಲಾತಿ ಸೌಲಭ್ಯ ಒದಗಿಸಿಕೊಡಬೇಕೆಂದು ತಾಲ್ಲೂಕು ಬಲಿಜ ಸಂಘ ಆಗ್ರಹಿಸಿದೆ.

ಈ ಸಂಬಂಧ ಸಂಘದ ಮುಖಂಡರು ನಗರದಲ್ಲಿ ಬುಧವಾರ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್‌ ಎಚ್‌. ವಿಶ್ವನಾಥ್‌ ಅವರಿಗೆ ಸಲ್ಲಿಸಿದರು.

1994ರ ಇಸ್ವಿಗೂ ಮುನ್ನ ಬಲಿಜ ಜನಾಂಗ ‘2ಎ’ನಲ್ಲೇ ಇತ್ತು. ವೀರಪ್ಪ ಮೊಯ್ಲಿ ಸರ್ಕಾರ ಅದನ್ನು‘3ಎ’ಗೆ ಸೇರಿಸಿ ಸಮಾಜಕ್ಕೆ ಅನ್ಯಾಯವೆಸಗಿತು. ಇದರಿಂದಾಗಿ ಸಮಾಜವು ಸಾಮಾಜಿಕ, ಆರ್ಥಿಕ, ರಾಜಕೀಯ ಮೀಸಲಾತಿಯಿಂದ ವಂಚಿತವಾಗಿದೆ ಎಂದು ಆರೋಪಿಸಿದರು.

ADVERTISEMENT

ರಾಜ್ಯದಲ್ಲಿ ಸುಮಾರು 60 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ಬಲಿಜರಿದ್ದಾರೆ. ಆದರೆ, ರಾಜಕೀಯವಾಗಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತೆ ಪರಿಗಣಿಸಲಾಗುತ್ತಿದೆ. ಇತರೆ ಸಮುದಾಯಗಳಂತೆ ಲಾಬಿ ಮಾಡದೆ ಸಾಂವಿಧಾನಿಕ ಹಕ್ಕುಗಳಿಗಾಗಿ ಬೇಡಿಕೆ ಸಲ್ಲಿಸುತ್ತ ಬರಲಾಗಿದೆ. ಆದರೆ, ಅದರಿಂದ ಯಾವುದೇ ಪ್ರಯೋಜನವಾಗಿಲ್ಲ. ಬಿ.ಎಸ್‌.ಯಡಿಯೂರಪ್ಪನವರು ಸಮಾಜಕ್ಕೆ ನ್ಯಾಯ ಒದಗಿಸಿಕೊಡುವ ಭರವಸೆ ಕೊಟ್ಟಿದ್ದಾರೆ. ಈಗ ಅದನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.

ಬಲಿಜರು ಕೂಲಿ, ಬಳೆ, ಹೂ–ಹಣ್ಣು, ಕುಂಕುಮ ಮಾರಾಟ ಸೇರಿದಂತೆ ಇತರೆ ಸಣ್ಣಪುಟ್ಟ ಕೆಲಸ ಮಾಡಿ ಬದುಕು ಸಾಗಿಸುತ್ತಿದ್ದಾರೆ. ಸಮಾಜದವರು ಮುಖ್ಯವಾಹಿನಿಗೆ ಬರಬೇಕಾದರೆ ‘2ಎ’ಗೆ ಸೇರಿಸುವುದು ಅಗತ್ಯವಾಗಿದೆ ಎಂದು ವಿವರಿಸಿದರು.

ಸಂಘದ ಅಧ್ಯಕ್ಷ ಎನ್.ಟಿ.ರಾಜು, ಗೌರವ ಅಧ್ಯಕ್ಷ ರವಿಕುಮಾರ್, ಕಾರ್ಯಾಧ್ಯಕ್ಷ ಕೆ.ಶಿವಾನಂದ, ಕಾರ್ಯದರ್ಶಿ ಮಧುಸೂದನ, ಖಜಾಂಚಿ ಪಾಂಡುರಂಗ, ಜಂಟಿ ಕಾರ್ಯದರ್ಶಿ ಜಿ.ರಾಜೇಂದ್ರ, ಬಲಿಜ ಯುವ ಸೇನೆ ಅಧ್ಯಕ್ಷ ಕೆ.ವೀರಣ್ಣ, ಸಂಘಟನಾ ಕಾರ್ಯದರ್ಶಿ ಕೆ.ದುರ್ಗಾಪ್ರಸಾದ್, ಮುಖಂಡರಾದ ಗೀತಾ ಶಂಕರ್, ಎಂ.ಶ್ರೀನಿವಾಸ್, ವೇಣುಗೋಪಾಲ್, ಎಚ್.ಶ್ರೀನಿವಾಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.