ADVERTISEMENT

ಬಳ್ಳಾರಿ ನಗರದಲ್ಲಿ ಗಲಾಟೆ: ತಪ್ಪಿತಸ್ಥರ ವಿರುದ್ಧ ಕ್ರಮ; ತುಕಾರಾಂ

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 5:29 IST
Last Updated 3 ಜನವರಿ 2026, 5:29 IST
ಕಂಪ್ಲಿಯ ಬಡೇಸಾಹೇಬ್ ದರ್ಗಾಕ್ಕೆ ಸಂಸದ ಇ. ತುಕರಾಂ ಶುಕ್ರವಾರ ಭೇಟಿನೀಡಿ ದರ್ಶನ ಪಡೆದರು
ಕಂಪ್ಲಿಯ ಬಡೇಸಾಹೇಬ್ ದರ್ಗಾಕ್ಕೆ ಸಂಸದ ಇ. ತುಕರಾಂ ಶುಕ್ರವಾರ ಭೇಟಿನೀಡಿ ದರ್ಶನ ಪಡೆದರು   

ಕಂಪ್ಲಿ: ಬಳ್ಳಾರಿ ನಗರದಲ್ಲಿ ಗುರುವಾರ ನಡೆದ ಗಲಾಟೆಗೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಲಿದೆ ಎಂದು ಸಂಸದ ಇ. ತುಕರಾಂ ತಿಳಿಸಿದರು.

ಪಟ್ಟಣದ ಹಿಂದೂ ಮುಸ್ಲಿಂ ಭಾವೈಕ್ಯದ ಕೇಂದ್ರವಾದ ಬಡೇಸಾಹೇಬ್ ದರ್ಗಾಕ್ಕೆ ಶುಕ್ರವಾರ ಭೇಟಿನೀಡಿ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ‘ಬಂಗಾರದಂಥ ಕ್ಷೇತ್ರವಾದ ಬಳ್ಳಾರಿಯಲ್ಲಿ ಅನಿರೀಕ್ಷಿತ ಘಟನೆ ನಡೆದಿದೆ’ ಎಂದು ವಿಷಾದಿಸಿದರು.

‘ಸಂಸದರ ಅನುದಾನದ ₹ 5ಕೋಟಿಯನ್ನು ಎಂಟು ವಿಧಾನಸಭಾ ಕ್ಷೇತ್ರಗಳಿಗೆ ತಲಾ ₹ 80 ಲಕ್ಷದಂತೆ ಹಂಚಿಕೆ ಮಾಡಲಾಗುವುದು. ಈ ಅನುದಾನದಲ್ಲಿ ರೈತ ಸಂಪರ್ಕ ಕೇಂದ್ರಗಳಿಗೆ ಪ್ರಾಜೆಕ್ಟರ್, 7 ಪ್ರೌಢಶಾಲೆಗಳಿಗೆ ಡಿಜಿಟಲ್ ಲೈಬ್ರರಿ, ₹ 1 ಲಕ್ಷದಲ್ಲಿ ಕ್ರೀಡಾ ಸಾಧನ ಮತ್ತು ಅಂಗವಿಕಲರಿಗೆ ಅಗತ್ಯ ಸಲಕರಣೆ ಒದಗಿಸಲಾಗುವುದು’ ಎಂದು ವಿವರಿಸಿದರು.

ADVERTISEMENT

‘ಹೊಸಪೇಟೆಯಿಂದ ಕರ್ನಾಟಕದ ಗಡಿಯವರೆಗೆ 5 ಮೇಲ್ಸೇತುವೆ ಬದಲಿಸಲು ಯೋಜಿಸಿದ್ದು, ಕೇಂದ್ರ ಸಚಿವ ನಿತಿನ್ ಗಡ್ಕರಿ ಹಸಿರು ನಿಶಾನೆ ತೋರಿದ್ದಾರೆ. ಗಂಗಾವತಿ-ಕಂಪ್ಲಿ-ದರೋಜಿ ರೈಲು ಸಂಪರ್ಕಕ್ಕೆ ಭೂಸ್ವಾಧೀನ ಕುರಿತು ರಾಜ್ಯ ಸರ್ಕಾರ, ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸುವೆ’ ಎಂದು ತಿಳಿಸಿದರು.

ಮುಸ್ಲಿಂ ಧರ್ಮಗುರು ಸೈಯ್ಯದ್ ಷಾಹ್ ಅಬುಲ್ ಹಸನ್ ಖಾದ್ರಿ ಉರುಫ್ ಆಜಂಪಾಷಾ ಖಾದ್ರಿ ಸಾಹೇಬ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಶ್ರೀನಿವಾಸರಾವ್, ಪುರಸಭೆ ಮಾಜಿ ಅಧ್ಯಕ್ಷ ಎಂ. ಸುಧೀರ್, ವಿಧಾನಪರಿಷತ್ ಮಾಜಿ ಸದಸ್ಯ ಕೆ.ಎಸ್.ಎಲ್. ಸ್ವಾಮಿ, ಮುಸ್ಲಿಂ ಸಮುದಾಯ ಪ್ರಮುಖರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.