
ಬಳ್ಳಾರಿ: ರಾಜ್ಯದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಒತ್ತಾಯಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್‌ನ (ಡಿವೈಎಫ್‌ಐ) ಸಮಿತಿಯಿಂದ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಈ ವೇಳೆ ಮಾತನಾಡಿದ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಯು.ಎರ್ರಿಸ್ವಾಮಿ, ‘ಈ ಮೊದಲು ರಾಜ್ಯದಲ್ಲಿ ಆಡಳಿತ ನಡೆಸಿದ್ದ ಬಿಜೆಪಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡದೇ, ಉದ್ಯೋಗಾಕಾಂಕ್ಷಿಗಳನ್ನು ವಂಚಿಸಿತ್ತು. ಬಿಜೆಪಿಯ ವೈಫಲ್ಯಗಳನ್ನು ಎತ್ತಿತೋರಿಸಿದ ಕಾಂಗ್ರೆಸ್, ಅಧಿಕಾರಕ್ಕೆ ಬಂದರೆ ಎಲ್ಲ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಹೇಳಿತ್ತು. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡೂವರೆ ವರ್ಷವಾಗುತ್ತಾ ಬಂದರೂ ಖಾಲಿ ಹುದ್ದೆ ಭರ್ತಿಗೊಳಿಸಲು ಆಗಿಲ್ಲ. ಶಿಕ್ಷಕರು, ಪೋಲಿಸ್ ಹಾಗೂ ಇತರೆ ಹಲವು ಹುದ್ದೆಗಳು ಭರ್ತಿಯಾಗದಿರುವುದರಿಂದ ಉದ್ಯೋಗಾಕಾಂಕ್ಷಿ ಯುವಜನತೆ ಭರವಸೆ ಕಳೆದುಕೊಂಡು ಹತಾಶರಾಗುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.
‘4-5 ವರ್ಷಗಳಿಂದ ನೇಮಕಾತಿ ನಡೆಯದೇ ಇರುವುದರಿಂದ ಯುವಜನರು ತಮ್ಮ ಅರ್ಹತಾ ವಯಸ್ಸನ್ನು ಮೀರಿದ್ದಾರೆ. ಉದ್ಯೊಗದ ಭರವಸೆಯಿಲ್ಲದೆ ಯುವಜನರು ಆತ್ಮಹತ್ಯೆಯಂಥ ಕಠಿಣ, ನೋವಿನ ನಿರ್ಧಾರಕ್ಕೆ ಮೊರೆಹೋಗುತ್ತಿದ್ದಾರೆ. ನೇಮಕಾತಿಯಲ್ಲಿ ನಡೆಯುತ್ತಿರುವ ಅಕ್ರಮವು ಬಡ ಸಾಮಾನ್ಯ ಉದ್ಯೋಗಾಂಕ್ಷಿಗಳನ್ನು ಕಂಗೆಡಿಸಿದೆ. ನೇಮಕಾತಿಯಲ್ಲಿ ಅಕ್ರಮ ತಡೆಗಟ್ಟಿ ಪಾರದರ್ಶಕತೆ ಕಾಪಾಡಬೇಕು. ಸಾಮಾಜಿಕ ಹಾಗೂ ಸೇವಾ ಭದ್ರತೆ ಇಲ್ಲದಿರುವ ದಿನಗೂಲಿ, ಗುತ್ತಿಗೆ ಹಾಗೂ ಹೊರಗುತ್ತಿಗೆ ಪದ್ಧತಿ ಕೈ ಬಿಟ್ಟು, ಖಾಯಂ ಸಿಬ್ಬಂದಿ ನೇಮಕ ಮಾಡಿಕೊಳ್ಳಬೇಕು’ ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಬೈಲಾ ಹನುಮಪ್ಪ, ಜಿಲ್ಲಾ ಖಜಾಂಚಿ ಬಿ.ಪಿ.ನವೀನ್, ತಾಲ್ಲೂಕು ಅಧ್ಯಕ್ಷ ಎ.ತಿಪ್ಪೇರುದ್ರ, ತಾಲ್ಲೂಕು ಕಾರ್ಯದರ್ಶಿ ವರದರಾಜ, ಮುಖಂಡರಾದ ರಾಜೇಂದ್ರ ಪ್ರಸಾದ್, ಪರಮೇಶ್, ಎಚ್.ರಮೇಶ್, ಕೆ.ಶಿವಾನಂದ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.