ADVERTISEMENT

ಬಳ್ಳಾರಿ ಜಿಲ್ಲೆ ಪೂರ್ಣ ಸಾಕ್ಷರವಾಗುವುದೇ?: ರಾಜ್ಯಸಭಾ ಸದಸ್ಯ ಹುಸೇನ್‌ ಸವಾಲು

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 7:09 IST
Last Updated 26 ಫೆಬ್ರುವರಿ 2026, 7:09 IST
ಬಳ್ಳಾರಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ದಿಶಾ ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು 
ಬಳ್ಳಾರಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ದಿಶಾ ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು    

ಬಳ್ಳಾರಿ: ಸದಾ ಚರ್ವಿತ ಚರ್ವಣವಾಗುತ್ತಿದ್ದ ‘ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮೇಲ್ವಿಚಾರಣಾ ಸಮಿತಿ’ಯ ಈ ಬಾರಿಯ ಸಭೆಯಲ್ಲಿ ಜಿಲ್ಲೆಯನ್ನು ಶೇ 100ರಷ್ಟು ಸಾಕ್ಷರಗೊಳಿಸುವ ವಿಚಾರದ ಕುರಿತು ಗಹನವಾದ ಸಮಾಲೋಚನೆಗಳು ನಡೆದವು. 

ಬಳ್ಳಾರ ಸಂಸದ ಇ. ತುಕಾರಾಂ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ದಿಶಾ ಸಭೆ ನಡೆಯಿತು. ಪೇಲವ ಚರ್ಚೆಗಳೊಂದಿಗೆ ಆರಂಭವಾದ ಸಭೆಯು ರಾಜ್ಯಸಭಾ ಸದಸ್ಯ ನಾಸಿರ್‌ ಹುಸೇನ್‌ ಪ್ರಶ್ನೆಯೊಂದರ ಮೂಲಕ ಗಂಭೀರ ಸ್ವರೂಪ ಪಡೆಯಿತು. 

ಶಿಕ್ಷಣ ಇಲಾಖೆ ಚರ್ಚೆ ವೇಳೆ ಮಧ್ಯಪ್ರವೇಶಿಸಿದ ರಾಜ್ಯಸಭಾ ನಾಸಿರ್‌ ಹುಸೇನ್‌ ‘ಜಿಲ್ಲೆಯನ್ನು ಸಂಪೂರ್ಣ ಸಾಕ್ಷರಗೊಳಿಸಬೇಕು ಎಂಬುದು ಎಲ್ಲರ ಗುರಿ. ಆದರೆ, ಬಳ್ಳಾರಿಯನ್ನು ಶೇ 100ರಷ್ಟು ಸಾಕ್ಷರಗೊಳಿಸಲು ಸಾಧ್ಯವೇ? ಅಧಿಕಾರಿಗಳು ಸಮರ್ಥರೇ. ಸಂಪೂರ್ಣ ಸಾಕ್ಷರತೆ ಸಾಧಿಸಲು ಒಂದು ಕಾಲಮಿತಿ ಹಾಕಿಕೊಳ್ಳಿ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯದರ್ಶಿ ಮೊಹಮದ್‌ ಹ್ಯಾರಿಸ್‌ ಸುಮೇರ್‌ಗೆ ಸೂಚಿಸಿದರು. 

ADVERTISEMENT

‘ಕಡ್ಡಾಯ ಶಿಕ್ಷಣ ಪಾಲನೆಯಾಗಬೇಕು, ಅರ್ಧದಲ್ಲೇ ಶಾಲೆ ತೊರೆಯುವವರನ್ನು ಪತ್ತೆ ಮಾಡಬೇಕು. ನನ್ನೊಂದಿಗೆ ಓದಿದವರು ಇಂದು ನನ್ನ ಹಿಂದೆ ಮುಂದೆ ಓಡಾಡುತ್ತಿದ್ದಾರೆ. ಇದಕ್ಕೆ ಕಾರಣ ಶಾಲೆ ತೊರೆದಿದ್ದು. ಎಷ್ಟು ಸರ್ಕಾರಿ ಶಾಲೆಗಳಲ್ಲಿ ಸರಿಯಾದ ವ್ಯವಸ್ಥೆಗಳಿವೆ. ಎಷ್ಟು ಶಾಲೆಗಳಲ್ಲಿ ಶೌಚಾಲಯಗಳಿವೆ. ಶೌಚಾಲಯಗಳು ಇಲ್ಲದ ಕಾರಣಕ್ಕೇ ಹೆಣ್ಣು ಮಕ್ಕಳು ಶಾಲೆಗಳಿಂದ ದೂರ ಉಳಿಯುತ್ತಿದ್ದಾರೆ. ಶಾಲೆಗಳಲ್ಲಿ ಶೌಚಾಲಯಗಳಿದ್ದರೂ ಶಿಕ್ಷಕರು ಮಕ್ಕಳಿಗೆ ಕೊಡದೇ ಬೀಗ ಹಾಕಿಟ್ಟುಕೊಂಡಿದ್ದಾರೆ. ಅಧಿಕಾರಿಗಳು ಶಾಲೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಬೇಕು. ಶಾಲೆಗಳ ಸ್ಥಿತಿಗತಿ ಬಗ್ಗೆ ವರದಿ ನೀಡಬೇಕು. ಆಗ ಕೇಂದ್ರದಿಂದ ಏನು ಆಗತ್ಯವಿದೆಯೋ ಅದನ್ನು ತರಲು ನಮಗೂ ಅನುಕೂಲವಾಗಲಿದೆ’ ಎಂದು ಹೇಳಿದರು. 

ಜಿಲ್ಲೆಯಲ್ಲಿ ಸಾಕಷ್ಟು ಮಕ್ಕಳಿಗೆ ಒತ್ತಕ್ಷರಗಳೂ ಬಾರದಿರುವುದು, ಕಲಿಕೆಯಲ್ಲಿ ಹಿಂದುಳಿದಿರುವ ಬಗ್ಗೆ ಸಂಡೂರು ಶಾಸಕಿ ಅನ್ನಪೂರ್ಣ ಸಭೆಯ ಗಮನಕ್ಕೆ ತಂದರು.

‘ಶಿಕ್ಷಣ ಇಲಾಖೆಗಾಗಿಯೇ ಪ್ರತ್ಯೇಕ ಸಭೆ ಆಯೋಜಿಸುವ ಅಗತ್ಯವಿದೆ’ ಎಂದು ನಾಸಿರ್‌ ತಿಳಿಸಿದರು. ಇದಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳು ಸಮ್ಮತಿ ಸೂಚಿಸಿದರು. 

ಹಣ ಲೂಟಿ: ಶಿಕ್ಷಣ ಇಲಾಖೆಗೆ ನೀಡಲಾಗುತ್ತಿರುವ ಅನುದಾನ ಲೂಟಿಯಾಗುತ್ತಿದೆ. ಶಾಲೆಗಳಿಗೆ ಸವಲತ್ತುಗಳು ತಲುಪುತ್ತಿಲ್ಲ. ಕಾರ್ಯಕ್ರಮಗಳು ಮತ್ತು ಅದಕ್ಕೆ ಬಿಡುಗಡೆಯಾದ ಅನುದಾನ, ವೆಚ್ಚಗಳ ಕುರಿತು ತನಿಖೆ ನಡೆಯುವ ಅಗತ್ಯವಿದೆ ಎಂದು ಸಂಸದ ತುಕಾರಾಂ ಆರೋಪಿಸಿದರು.  

ಅಕ್ರಮಗಳನ್ನು ಮಟ್ಟಹಾಕಿ: ಜಿಲ್ಲೆಯಲ್ಲಿ ಪೊಲೀಸ್‌ ಗಸ್ತು ಬಿಗಿ‌ ಮಾಡಬೇಕು. ದಂಧೆ ಮಟ್ಟ ಹಾಕಬೇಕು, ಗಣಿ ಲಾರಿಗಳನ್ನು ನಿಯಂತ್ರಿಸಬೇಕು, ರ್‍ಯಾಗಿಂಗ್‌, ಅಪ್ರಾಪ್ತರ ಮೇಲಿನ ಲೈಂಗಿಕ ದೌರ್ಜನ್ಯ, ಬಾಲ್ಯವಿವಾಹ ನಿಯಂತ್ರಿಸಬೇಕು ಎಂದು ಸಂಸದ ತುಕಾರಾಂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಮನ್‌ ಡಿ.ಪಿ ಅವರಿಗೆ ತಿಳಿಸಿದರು. 

ಸ್ಥಿತಿಗತಿ ವರದಿಗೆ ಸೂಚನೆ: ಜಿಲ್ಲೆಯ ವಿವಿಧ ಕ್ಷೇತ್ರಗಳ ಸ್ಥಿತಿಗತಿ ಕುರಿತು ಅಧ್ಯಯನ ಮಾಡಿ, ವರದಿ ಸಿದ್ಧಪಡಿಸಿಕೊಳ್ಳಬೇಕು. ಆಗ ಯೋಜನೆಗಳ ಸಮರ್ಪಕ ಜಾರಿ ಸಾಧ್ಯವಾಗುತ್ತದೆ ಎಂದು ಸಂಸದ ಇ. ತುಕಾರಾಂ ಅಧಿಕಾರಿಗಳಿಗೆ ಸಲಹೆ ನೀಡಿದರು. 

ಮೆಣಸಿನಕಾಯಿ ಮಾರುಕಟ್ಟೆ: ಬಳ್ಳಾರಿ ಮೆಣಸಿನಕಾಯಿ ಮಾರುಕಟ್ಟೆ ನಿರ್ಮಾಣ ಮತ್ತು ಎಪಿಎಂಸಿ ಅಭಿವೃದ್ಧಿಗೆ ವಿವರವಾದ ಯೋಜನಾವರದಿ ಸಿದ್ಧಪಡಿಸಿಕೊಡಬೇಕು. ‘ಮೆಗಾ ಪ್ರೋಜೆಕ್ಟ್‌’ ಅಡಿಯಲ್ಲಿ ಮೆಣಸಿನಕಾಯಿ ಮಾರುಕಟ್ಟೆ ನಿರ್ಮಾಣ ಕೈಗೆತ್ತಿಕೊಳ್ಳಲಾಗುವುದು ಎಂದು ಸಂಸದ ತುಕಾರಾಂ ತಿಳಿಸಿದ್ದಾರೆ. ಮಾರುಕಟ್ಟೆ ನಿರ್ಮಿಸಲು ಎದುರಾಗುತ್ತಿರುವ ರಾಜಕೀಯ ಸಮಸ್ಯೆಗಳ ಕುರಿತೂ ಸಭೆಯಲ್ಲಿ ಚರ್ಚೆ ನಡೆಯಿತು.  

‌ವರ್ಗಾವಣೆ ಮಾಡದಿರಿ: ಬಳ್ಳಾರಿಗೆಂದು ನೇಮಕಗೊಂಡಿರುವ ‘ಸ್ಪೀಚ್‌ ಥೆರಪಿಸ್ಟ್‌’ವೊಬ್ಬರು ಬೆಂಗಳೂರಿಗೆ ವರ್ಗಾವಣೆ ಬಯಸುತ್ತಿದ್ದಾರೆ. ಇಲ್ಲಿ ನೇಮಕಗೊಂಡವರೆಲ್ಲರೂ ಬೆಂಗಳೂರಿಗೆ ವರ್ಗವಾದರೆ, ನಮ್ಮ ಪಾಡೇನಾಗಬೇಕು. ಆದ್ದರಿಂದ ಅವರನ್ನು ಬೆಂಗಳೂರಿಗೆ ವರ್ಗಾವಣೆಗೊಳ್ಳಲು ಬಿಡಬಾರದು ಎಂದು ಪರಿಷತ್‌ ಸದಸ್ಯ ವೈ. ಎಂ ಸತೀಶ್‌ ಮನವಿ ಮಾಡಿದರು. 

ಯಾವುದೇ ಯೋಜನೆ ಜಾರಿಯ ವೇಳೆ ಏನಾದರೂ ಸಮಸ್ಯೆಗಳಿದ್ದರೆ ಹಸ್ತಕ್ಷೇಪಗಳಾಗುತ್ತಿದ್ದರೆ ಜಿಲ್ಲಾಧಿಕಾರಿ ಅಥವಾ ಸಂಸದರಿಗೆ ತಿಳಿಸಬೇಕು. ಅದನ್ನು ಅಧಿಕಾರಿಗಳೇ ಪರಿಹರಿಸಿಕೊಳ್ಳಲು ಹೋಗಬಾರದು
ನಾಗೇಂದ್ರ ಪ್ರಸಾದ್‌, ಜಿಲ್ಲಾಧಿಕಾರಿ

ಸಿಎಸ್‌ಆರ್‌ನಲ್ಲಿ 100 ಟ್ಯಾಬ್‌ 

ಸಭೆ ಆಡಳಿತ ವ್ಯವಸ್ಥೆಯನ್ನು ಕಾಗದರಹಿತಗೊಳಿಸಲು ಜಿಲ್ಲೆಯ ಅಧಿಕಾರಿಗಳಿಗೆ ಸಿಎಸ್‌ಆರ್‌ ನಿಧಿ ಅಡಿಯಲ್ಲಿ 100 ಟ್ಯಾಬ್‌ ಕೊಡಿಸುವುದಾಗಿ ಸಂಸದ ತುಕಾರಾಂ ಸಭೆಗೆ ಹೇಳಿದರು.   ಆದರೆ ಸಮುದಾಯದ ಕಲ್ಯಾಣ ಉದ್ದೇಶದ ನಿಧಿಯನ್ನು ಅದಾಗಲೇ ಲಾಭದಾಯಕ ಹುದ್ದೆಯಲ್ಲಿರುವ ಅಧಿಕಾರಿಗಳಿಗೆ ಅಥವಾ ಸರ್ಕಾರದ ಉದ್ದೇಶಕ್ಕೆ ಒದಗಿಸಲು ಸಿಎಸ್‌ಆರ್‌ ನಿಯಮಗಳಲ್ಲಿ ಅವಕಾಶವಿದೆಯೇ ಎಂಬ ಪ್ರಶ್ನೆ ಎದುರಾಗಿದೆ. 

ನಿಂದನೆಗೆ ನಿಲುಗಡೆ 

ದಿಶಾ ಸಭೆಗಳಲ್ಲಿ ಅಧಿಕಾರಿಗಳನ್ನು ಏಕವಚನದಲ್ಲಿ ನಿಂದಿಸುತ್ತಿದ್ದ ಸಂಸದ ಇ. ತುಕಾರಾಂ ಈ  ಬಾರಿ ಅಂಥ ಪ್ರಯತ್ನ ಮಾಡಲಿಲ್ಲ. ಬದಲಿಗೆ ‘ನಾನು ಏಕವಚನದಲ್ಲಿ ಮಾತನಾಡಿದರೆ ಕೆಲವರು ಪ್ರಶ್ನಿಸುತ್ತಾರೆ’ ಎಂದರು. ದಿಶಾ ಸಭೆಯಲ್ಲಿ ಅಧಿಕಾರಿಗಳನ್ನು ನಿಂದಿಸಿದ್ದರ ಬಗ್ಗೆ ‘ಪ್ರಜಾವಾಣಿ’ಯಲ್ಲಿ ಈ ಹಿಂದೆ ವರದಿ ಪ್ರಕಟವಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.