ADVERTISEMENT

ಬಳ್ಳಾರಿ: ಪೊಲೀಸ್‌ ಇಲಾಖೆಗೆ ಕಾಯಕಲ್ಪ?

ಜಿಲ್ಲೆಯ ಅವ್ಯವಸ್ಥೆ ಬಗ್ಗೆ ದೂರುಗಳನ್ನು ಪರಿಗಣಿಸಿರುವ ಸರ್ಕಾರ | ಬದಲಾವಣೆಗೆ ಮುನ್ನುಡಿಯಾದ ಘರ್ಷಣೆ

ಆರ್. ಹರಿಶಂಕರ್
Published 8 ಜನವರಿ 2026, 1:39 IST
Last Updated 8 ಜನವರಿ 2026, 1:39 IST
<div class="paragraphs"><p>ಸುಮನ್‌ ಪನ್ನೇಕರ್, ಪಿ.ಎಸ್‌ ಹರ್ಷ</p></div>

ಸುಮನ್‌ ಪನ್ನೇಕರ್, ಪಿ.ಎಸ್‌ ಹರ್ಷ

   

ಬಳ್ಳಾರಿ: ಬಳ್ಳಾರಿಯಲ್ಲಿ ಜನವರಿ 1ರಂದು ನಡೆದ ಘರ್ಷಣೆಯು ಜಡ್ಡುಗಟ್ಟಿದ ಪೊಲೀಸ್‌ ಇಲಾಖೆಯ ಕಾಯಕಲ್ಪಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕೆ ಉನ್ನತ ಮಟ್ಟದ ಅಧಿಕಾರಿಗಳನ್ನು ಬದಲಾಯಿಸಲಾಗಿದೆ.

ಬಳ್ಳಾರಿ ವಲಯದ ನೂತನ ಪೊಲೀಸ್‌ ಮಹಾ ನಿರೀಕ್ಷಕರನ್ನಾಗಿ ಡಾ.ಪಿ.ಎಸ್‌ ಹರ್ಷ ಅವರನ್ನು ನಿಯೋಜಿಸಲಾಗಿದ್ದರೆ, ಹೊಸ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಸುಮನ್‌ ಪನ್ನೇಕರ ಅವರನ್ನು ಬಳ್ಳಾರಿಗೆ ಕಳುಹಿಸಲಾಗಿದೆ. 

ADVERTISEMENT

ದೊಂಬಿ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿತ್ತು. ಇದರ ಜತೆಗೆ ಇಡೀ ಆಡಳಿತ ವ್ಯವಸ್ಥೆಯ ಕುರಿತು ಸಂಪೂರ್ಣ ಮಾಹಿತಿ ತರಿಸಿಕೊಂಡ ಸರ್ಕಾರ ಇಲ್ಲಿನ ಅವ್ಯವಸ್ಥೆ ಸರಿಪಡಿಸಲೆಂದೇ ಲಾಭಿಗಳನ್ನು ಪಕ್ಕಕ್ಕೆ ಸರಿಸಿ ಇಲಾಖೆಗೆ ಚಿಕಿತ್ಸೆ ನೀಡಿದೆ. ಇದೇ ಉದ್ದೇಶದೊಂದಿಗೆ ತನ್ನ ಆಯ್ಕೆಯ ಅಧಿಕಾರಿಗಳನ್ನು ಜಿಲ್ಲೆಗೆ ರವಾವನಿಸಿದೆ ಎಂದು ಹೇಳಲಾಗುತ್ತಿದೆ.

ಜಿಲ್ಲೆಯಲ್ಲಿ ಆಡಳಿತ ವ್ಯವಸ್ಥೆ ಕುಸಿಯುತ್ತಿರುವ ಬಗ್ಗೆ ಇಲ್ಲಿನ ಕೆಲ ಜನ ಪ್ರತಿನಿಧಿಗಳು ಸರ್ಕಾರಕ್ಕೆ ನಿರಂತರವಾಗಿ ಮನವರಿಕೆ ಮಾಡುತ್ತಲೇ ಬರುತ್ತಿದ್ದರು. ಮೇರೆ ಮೀರುತ್ತಿರುವ ಮಟ್ಕಾ, ಜೂಜು, ಅಕ್ರಮ ಮರಳು ವ್ಯಾಪಾರ, ಅಕ್ರಮ ದಂಧೆಗಳು, ಕೆಲ ತಿಂಗಳ ಹಿಂದೆ ನಡೆದ ಕ್ಲಬ್ ದಾಳಿ, ಬನ್ನಿಹಟ್ಟಿ ರೈಲ್ವೆ ಸೈಡಿಂಗ್‌ನಿಂದ ಅದಿರು ಸಾಗಾಟದಲ್ಲಿ ನಡೆದ ಪ್ರಹಸನ, ಪೊಲೀಸ್‌ ಇಲಾಖೆಯಲ್ಲಿ ಹಿರಿಯ ಅಧಿಕಾರಿಗಳ ಮಾತು ಕೇಳದೇ ಕಿರಿಯ ಅಧಿಕಾರಿಗಳು ನಡೆಸುತ್ತಿದ್ದ ಕಾರ್ಯಭಾರಗಳು, ಪೋಸ್ಟಿಂಗ್‌ಗೆ ಲಾಭಿ, ಹೊರಗಿನ ವ್ಯಕ್ತಿಗಳ ಹಸ್ತಕ್ಷೇಪ ಇದೆಲ್ಲದರ ಕುರಿತು ಸರ್ಕಾರಕ್ಕೆ ವರದಿಗಳು ಹೋಗಿದ್ದವು ಎನ್ನಲಾಗಿದೆ. 

ಇದೆಲ್ಲವನ್ನೂ ಗಮನಿಸಿದ್ದ ಸರ್ಕಾರ, ಕಾಯಕಲ್ಪ ನೀಡಲು ಸೂಕ್ತ ಸಮಯಕ್ಕಾಗಿ ಕಾಯುತ್ತಿತ್ತು. ಅದಕ್ಕೆ ಇತ್ತೀಚಿನ ಘರ್ಷಣೆ ಕಿಡಿ ಹೊತ್ತಿಸಿದೆ ಎಂದು ಹೇಳಲಾಗಿದೆ. ಸದ್ಯ ಸರ್ಕಾರ ನೇಮಿಸಿ ಕಳುಹಿಸಿರುವ ಅಧಿಕಾರಿಗಳ ಬಗ್ಗೆ ಇಲಾಖೆ ಮಟ್ಟದಲ್ಲಿ ಉತ್ತಮ ಅಭಿಪ್ರಾಯ ವ್ಯಕ್ತವಾಗಿದ್ದು, ಯಾರ ಮುಲಾಜಿಗೂ ಬೀಳದೆ ಕೆಲಸ ಮಾಡುವ ವಿಶ್ವಾಸ ವ್ಯಕ್ತವಾಗಿದೆ. 

ಅನುಭವಿ ಅಧಿಕಾರಿ ಹರ್ಷ

ಮೂಲತಃ ಚಿತ್ರದುರ್ಗದವರಾದ ಪಿ.ಎಸ್‌ ಹರ್ಷ ವೈದ್ಯಕೀಯ ವಿದ್ಯಾಭ್ಯಾಸ ಪಡೆದಿದ್ದಾರೆ. ತುಮಕೂರು ಎಸ್‌ಪಿ ಆಗಿ ಕೆಲಸ ಮಾಡಿದ್ದಾರೆ. ಬೆಂಗಳೂರಿನ ಮೂರು ವಿಭಾಗಗಳಲ್ಲಿಯೂ ಡಿಸಿಪಿಯಾಗಿದ್ದರು. ಮಂಗಳೂರು ಕಮಿಷನರ್‌ ಆಗಿಯೂ ಅವರು ಕಾರ್ಯನಿರ್ವಹಿಸಿದ್ದರು. ಕೆಎಸ್‌ಟಿಡಿಸಿ ಎಂಡಿ, ವಾರ್ತಾ ಇಲಾಖೆ ಕಮಿಷನರ್‌ ಆಗಿಯೂ ಕೆಲಸ ಮಾಡಿರುವ ಅವರು ಅನಭವಿ ಅಧಿಕಾರಿ ಎನಿಸಿಕೊಂಡಿದ್ದಾರೆ.

ಪ್ರಜ್ವಲ್‌ ಕೇಸಿನ ತನಿಖಾ ತಂಡದ ಸದಸ್ಯೆ

ಸುಮನ್‌ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ನಡೆದಿದ್ದ ಅತ್ಯಾಚಾರ ಪ್ರಕರಣಗಳ ತನಿಖೆಗೆ ರಚಿಸಲಾಗಿದ್ದ ವಿಶೇಷ ತನಿಖಾ ತಂಡದ ಭಾಗವವಾಗಿದ್ದ ಸುಮನ್‌ ಸದ್ಯ ಬಳ್ಳಾರಿಯ ಎಸ್‌ಪಿಯಾಗಿದ್ದಾರೆ. ಇದಕ್ಕೂ ಹಿಂದೆ ಅವರು ಕಾರವಾರದಲ್ಲಿ ಎಸ್‌ಪಿಯಾಗಿದ್ದರು. ಅಲ್ಲಿನ ಮಟ್ಕಾ ಮರಳು ದಂಧೆಯ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡಿದ್ದ ಉಲ್ಲೇಖಗಳಿವೆ.  ಕೊಡಗಿನಲ್ಲಿ ಅವರು ಎಸ್‌ಪಿಯಾಗಿದ್ದಾಗ ನೆರೆ ಬಂದಿತ್ತು. ಆಗಲು ಜನಮೆಚ್ಚುಗೆ ಕೆಲಸ ಮಾಡಿದ್ದರು ಎಂದು ವರದಿಗಳಿವೆ. ಅನಧಿಕೃತ ಹೋಂ ಸ್ಟೇಗಳಲ್ಲಿ ನಡೆಯುತ್ತಿದ್ದ ರೇವ್‌ ‍ಪಾರ್ಟಿಗೆ ಕಡಿವಾಣ ಹಾಕಿದ್ದರು. ಗಾಂಜಾ ಮಾರಾಟ ಜಾಲದ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿ ಆಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.