
ಬಳ್ಳಾರಿ: ರಾಷ್ಟ್ರೀಯ ಹಬ್ಬಗಳಲ್ಲಿ ಧ್ವಜಾರೋಹಣ ಮಾಡಲು ಜಿಲ್ಲೆಗೆ ಅತಿಥಿ ಉಸ್ತುವಾರಿ ಸಚಿವರು ಬಂದು ಹೋಗುವ ಪರಿಪಾಠ ಈ ಬಾರಿಯ ಗಣರಾಜ್ಯೋತ್ಸವಕ್ಕೂ ವಿಸ್ತರಿಸಿದೆ.
ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರಿಗೆ ವಿಜಯನಗರ ಮತ್ತು ಬಳ್ಳಾರಿಯ ಜಂಟಿ ಉಸ್ತುವಾರಿಯನ್ನು ಸರ್ಕಾರ ನೀಡಿದೆ. ಮೂಲ ಉಸ್ತುವಾರಿ ವಿಜಯನಗರವಾಗಿರುವ ಕಾರಣ ಅವರ ಆಸಕ್ತಿ ಏನಿದ್ದರು ವಿಜಯನಗರ. ಹೀಗಾಗಿ ಬಳ್ಳಾರಿ ಜಿಲ್ಲೆಯ ಯಾವ ರಾಷ್ಟ್ರೀಯ ಹಬ್ಬಗಳಲ್ಲಿಯೂ ಅವರು ಪಾಲ್ಗೊಳ್ಳುವುದಿಲ್ಲ. ಅದರ ಜತೆಗೆ, ಬಳ್ಳಾರಿಯ ಆಗು ಹೋಗುಗಳಿಗೆ ಅವರು ಓಗೊಡುವುದೂ ಇಲ್ಲ ಎಂಬ ಆರೋಪ ಜಿಲ್ಲೆಯಲ್ಲಿ ವ್ಯಾಪಿಸಿದೆ.
ಜಮೀರ್ ವಿಜಯನಗರಕ್ಕೆ ತೆರಳುವುದರಿಂದ ಪ್ರತಿ ಬಾರಿಯೂ ಸರ್ಕಾರ ಬಳ್ಳಾರಿಗೆ ಅತಿಥಿ ಸಚಿವರೊಬ್ಬರನ್ನು ಧ್ವಜಾರೋಹಣಕ್ಕೆ ನಿಯೋಜಿಸುತ್ತದೆ. ಅದರಂತೆ ಇಂದು ನಡೆಯುವ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಲು ಎಂದಿನಂತೇ, ಸರ್ಕಾರ ಪೌರಾಡಳಿತ ಹಾಗೂ ಹಜ್ ಸಚಿವ ರಹೀಮ್ ಖಾನ್ ಅವರನ್ನು ನಿಯೋಜಿಸಿದೆ.
ಇದರೊಂದಿಗೆ ಹೊಸ ವರ್ಷದಲ್ಲಾದರೂ ಕಾಯಂ ಉಸ್ತುವಾರಿ ಸಚಿವರೊಬ್ಬರು ಬಳ್ಳಾರಿಗೆ ಸಿಗುವ, ಅವರಿಂದಲೇ ಧ್ವಜಾರೋಹಣ ನೆರವೇರಿಸುವ, ಈ ಮೂಲಕ ಜಿಲ್ಲೆಯ ಆಡಳಿತ ಬಿಗಿಯಾಗುವ ಜನರ ನಿರೀಕ್ಷೆಗಳು ಸುಳ್ಳಾಗಿವೆ.
ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಬಿ. ನಾಗೇಂದ್ರ ವಾಲ್ಮೀಕಿ ನಿಗಮದ ಹಗರಣದಲ್ಲಿ 2024ರ ಜೂನ್‌ನಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಲ್ಲಿಂದ ಶುರುವಾದ ಈ ಅತಿಥಿ ಸಚಿವರ ಸಂಪ್ರದಾಯ ಇನ್ನೂ ಮುಂದುವರಿದಿದೆ.
2024 ಜೂನ್ ಬಳಿಕ ಎರಡು ಸ್ವಾತಂತ್ರ್ಯೋತ್ಸವಗಳಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ಧ್ವಜಾರೋಹಣ ಮಾಡಿದ್ದರೆ, ಒಂದು ಬಾರಿಯ ಗಣರಾಜ್ಯೋತ್ಸವ, ಎರಡು ಬಾರಿಯ ಕಲ್ಯಾಣ ಕರ್ನಾಟಕ ಉತ್ಸವಗಳಲ್ಲಿ ರಹೀಂ ಖಾನ್ ಅವರು ಧ್ವಜಾರೋಹಣ ಮಾಡಿದ್ದಾರೆ. ಧ್ವಜಾರೋಹಣ ಸಮಾರಂಭದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡುವ ಅತಿಥಿ ಸಚಿವರು ಜಿಲ್ಲೆಯ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರವು ಭರವಸೆಗಳನ್ನು ನೀಡುತ್ತಾರೆ. ಇದು ಎಂದಿನ ಪರಿಪಾಠ ಎಂಬಂತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.